ಸೌರ ಶಕ್ತಿ ಯೋಜನೆ ಗುತ್ತಿಗೆಗೆ ಸಂಬಂಧಿಸಿದಂತೆ ಅಮೆರಿಕದ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣ ಸಂಗ್ರಹಿಸಲು ವಂಚನೆಯ ಸಂಚು ರೂಪಿಸಿದ್ದಕ್ಕಾಗಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರ ಏಳು ಜನರ ಮೇಲೆ ಅಮೆರಿಕ ಸರ್ಕಾರ ದೋಷಾರೋಪ ಮಾಡಿರುವ ಬೆನ್ನಿಗೇ ಈ ಕೃತ್ಯಗಳ ಕುರಿತಾದ ದಾಖಲೆಗಳನ್ನು ಸಲ್ಲಿಸಲು ಮತ್ತು ಹೊಸ ಆರೋಪಗಳನ್ನು ತನಿಖೆ ನಡೆಸಲು ಭಾರತೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.
ಹಿಂಡೆನ್‌ಬರ್ಗ್ ವರದಿ 2023ರಲ್ಲಿ ಪ್ರಕಟವಾದ ಬಳಿಕ ಅದಾನಿ ಸಮೂಹಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ಗೆ ವಕೀಲ ವಿಶಾಲ್ ತಿವಾರಿ ಈ ಅರ್ಜಿ ಸಲ್ಲಿಸಿದ್ದಾರೆ.
ಸುಮಾರು 20 ವರ್ಷಗಳಲ್ಲಿ $ 2 ಬಿಲಿಯನ್ ಲಾಭ ತಂದುಕೊಡಬಲ್ಲ ಭಾರತದ ಸೌರ ಶಕ್ತಿ ಗುತ್ತಿಗೆ ಪಡೆಯಲು ಗೌತಮ್ ಅದಾನಿ, ಅವರ ಅಣ್ಣನ ಮಗ ಸಾಗರ್ ಅದಾನಿ ಮತ್ತಿತರ ಅಧಿಕಾರಿಗಳು 2020ರಿಂದ 2024ರವರೆಗೆ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ $ 265 ದಶಲಕ್ಷದಷ್ಟು ಲಂಚ ನೀಡುವ ಸಂಚು ನಡೆಸಿದ್ದರು ಎಂದು ಅಮೆರಿಕದ ಅಧಿಕಾರಿಗಳು ದೂರಿದ್ದರು.
ಗೌತಮ್ ಅದಾನಿ ಹಾಗೂ ಇತರರು ಅಮೆರಿಕದಿಂದ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಲು ಸುಳ್ಳು ಹೇಳಿ ಲಂಚ ನೀಡಿಕೆಯ ಸಂಚಿನ ಕುರಿತ ಮಾಹಿತಿ ಮರೆಮಾಚಿದ್ದಾರೆ ಎಂದು ಅಮೆರಿಕ ಷೇರುಪೇಟೆ ನಿಯಂತ್ರಣ ಆಯೋಗ (ಎಸ್‌ಇಸಿ) ಆರೋಪಿಸಿತ್ತು. ಆರೋಪಗಳು ಷೇರು ಮತ್ತು ವಿದ್ಯುನ್ಮಾನ ವಂಚನೆಗೆ ಸಂಬಂಧಿಸಿದ್ದು ನ್ಯಾಯಕ್ಕೆ ಅಡ್ಡಿಪಡಿಸುತ್ತವೆ. ಆರೋಪಿಗಳು ಸಾಕ್ಷ್ಯ ನಾಶ ಮಾಡಿದ್ದು ತನಿಖೆ ವೇಳೆ ಸುಳ್ಳು ಹೇಳಿದ್ದಾರೆ ಎಂದು ದೂರಲಾಗಿತ್ತು.
ನಿಯಂತ್ರಕ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಮತ್ತೆ ವಿಶ್ವಾಸ ಇಡುವಂತಾಗಲು ಆರೋಪಗಳ ಕುರಿತು ಭಾರತೀಯ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಹಿಂಡೆನ್ ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 2024ರೊಳಗೆ ತನಿಖೆ ಪೂರ್ಣಗೊಳಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತಾದರೂ ಅಂತಿಮ ವರದಿ ಸಲ್ಲಿಕೆಯಾಗಿಲ್ಲ ಎಂದು ಅರ್ಜಿ ಗಮನ ಸೆಳೆದಿದೆ.
ಅಲ್ಲದೆ ಈಗ ದೊರೆತಿರುವ ಹೊಸ ಪುರಾವೆಗಳು ಅದಾನಿ ಸಮೂಹದ ಕಿರು ಮಾರಾಟ ಪ್ರವೃತ್ತಿ ಅಮೆರಿಕದಲ್ಲಿ ಮಾಡಲದ ಇಂಥದ್ದೇ ಆರೋಪಗಳ ಬಗ್ಗೆ ಸೆಬಿ ನಡೆಎಸುತ್ತಿರುವ ತನಿಖೆಗೂ ಇರಬಹುದಾದ ಸಂಬಂಧವನ್ನು ಸೂಚಿಸುತ್ತವೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಅದರಂತೆ ಹೆಚ್ಚುವರಿ ದಾಖಲೆಗಳನ್ನು ಪಡೆದು ಅಮೆರಿಕ ಸರ್ಕಾರದ ದೋಷಾರೋಪ ಮತ್ತು ಎಸ್‌ಇಸಿ ದೂರು ಬಹಿರಂಪಗಡಿಸಿರುವ ಹೊಸ ಆರೋಪಗಳ ತನಿಖೆ ಮಾಡಲು ಭಾರತೀಯ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ