ಪಿಎಂ ಕೇರ್ಸ್‌ ನಿಧಿ, ಪ್ರಧಾನಿ ನರೇಂದ್ರ ಮೋದಿ 
ಸುದ್ದಿಗಳು

ಪಿಎಂ ಕೇರ್ಸ್‌ನಿಂದ ಎನ್‌ಡಿಆರ್‌ಎಫ್ ಗೆ ಹಣ ವರ್ಗಾವಣೆ ಕೋರಿದ್ದ ಅರ್ಜಿಯ ತೀರ್ಪು ಮರುಪರಿಶೀಲನೆಗೆ ಸುಪ್ರೀಂನಲ್ಲಿ ಮನವಿ

ಪ್ರಧಾನಮಂತ್ರಿಯನ್ನಾಗಲೀ, ಮುಖ್ಯಮಂತ್ರಿಗಳನ್ನಾಗಲೀ ಟ್ರಸ್ಟಿಗಳನ್ನಾಗಿ ಮಾಡಲು ಶಾಸನ ರಚಿಸದ ವಿನಾ ಪಿಎಂ ಕೇರ್ಸ್ ಮಾತ್ರವಲ್ಲ, ಪಿಎಂಎನ್ಆರ್‌ಎಫ್ ಮತ್ತು ಸಿಎಂಆರ್‌ಎಫ್‌ ಕೂಡ ಅಸಾಂವಿಧಾನಿಕ ಎನ್ನುತ್ತದೆ ಮರುಪರಿಶೀಲನಾ ಅರ್ಜಿ.

Bar & Bench

ಪಿ ಎಂ ಕೇರ್ಸ್ ನಿಧಿಯ ಸಿಂಧುತ್ವವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಮುಖೇಶ್‌ ಕುಮಾರ್‌ ಎನ್ನುವವರು ಸಲ್ಲಿಸಿದ್ದಾರೆ. ಈ ಹಿಂದೆ, ಪಿಎಂ ಕೇರ್ಸ್‌ ನಿಧಿಯಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್‌ಡಿಆರ್‌ಎಫ್) ಹಣವನ್ನು ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಪ್ರಕರಣದಲ್ಲಿ ಇವರು ಮಧ್ಯಪ್ರವೇಶಕಾರರಾಗಿದ್ದರು.

ತೀರ್ಪು ನೀಡುವಾಗ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಹಾಗೂ ಎಂ.ಆರ್ ಶಾ ಅವರಿದ್ದ ಪೀಠ ಕೋವಿಡ್ 19ಗಾಗಿ ಹೊಸ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯನ್ನು ಸ್ಥಾಪಿಸುವ ಅಗತ್ಯವಿಲ್ಲ. ಕೋವಿಡ್-19ಗೂ ಮೊದಲು ವಿಪತ್ತು ನಿರ್ವಹಣಾ ಕಾಯ್ದೆಯಡಿ ನೀಡಲಾಗಿದ್ದ ಪರಿಹಾರ ಮಾನದಂಡಗಳೇ ಸಾಕು ಎಂದು ಅಭಿಪ್ರಾಯಪಟ್ಟಿತ್ತು.

ಎನ್ ಡಿಆರ್‌ಎಫ್‌ಗೆ ಹಣ ವರ್ಗಾಯಿಸುವ ಸಂಬಂಧ ಸೂಕ್ತ ಎನಿಸುವ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರ ಮುಕ್ತವಾಗಿದೆ. ಹಾಗೆಯೇ ಎನ್‌ಡಿಆರ್‌ಎಫ್‌ ಗೆ ದೇಣಿಗೆ ನೀಡಲು ವ್ಯಕ್ತಿಗಳು ಸ್ವತಂತ್ರರು ಎಂದು ಕೂಡ ನ್ಯಾಯಪೀಠ ತಿಳಿಸಿತ್ತು.

ನಿಧಿ ಸ್ಥಾಪನೆ ಸಂಬಂಧ ಅನೇಕ ಲೋಪಗಳು ಇರುವುದನ್ನು ಮರುಪರಿಶೀಲನಾ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿಯಲ್ಲಿರುವ ಪ್ರಮುಖಾಂಶಗಳು

  • ಪ್ರಧಾನಮಂತ್ರಿಯನ್ನಾಗಲೀ, ಮುಖ್ಯಮಂತ್ರಿಗಳನ್ನಾಗಲೀ ಟ್ರಸ್ಟಿಗಳನ್ನಾಗಿ ಮಾಡಲು ಶಾಸನ ರಚಿಸದ ವಿನಾ ಪಿಎಂ ಕೇರ್ಸ್ ಮಾತ್ರವಲ್ಲ, ಪಿಎಂಎನ್ಆರ್‌ಎಫ್ ಮತ್ತು ಸಿಎಂಆರ್‌ಎಫ್ ಕೂಡ ಅಸಾಂವಿಧಾನಿಕ.

  • ಯಾರೇ ಒಬ್ಬ ವ್ಯಕ್ತಿ/ ಕೊಡುಗೆ ನೀಡುವವರು ಯಾವುದೇ ನಿಧಿ (ಪಿಎಂ ಕೇರ್ಸ್, ಪಿಎಂಎನ್ಆರ್‌ಎಫ್ ಅಥವಾ ಸಿಎಂಆರ್‌ಎಫ್ ಇರಲಿ) ಅಥವಾ ಸಂಘ ಸಂಸ್ಥೆಗಳು ಟ್ರಸ್ಟುಗಳಿಗೆ ವೈಯಕ್ತಿಕ ದೇಣಿಗೆ ನೀಡಿದರೆ ಆ ಹಣ ಹೇಗೆ ವಿನಿಯೋಗವಾಗಿದೆ ಎಂದು ತಿಳಿಯುವ ಹಕ್ಕು ಆ ವ್ಯಕ್ತಿಗೆ ಇರುತ್ತದೆ.

  • ಸಂವಿಧಾನದ 53 (3) (ಬಿ) ವಿಧಿಯ ಅಡಿಯಲ್ಲಿ ಯಾವುದೇ ಶಾಸನಬದ್ಧ ಬೆಂಬಲ ಪಡೆಯದೆ ಪಿಎಂ ಕೇರ್ಸ್ ನಿಧಿಯನ್ನು ಸಚಿವ ಮಂಡಳಿ ನಿರ್ವಹಿಸುತ್ತಿದೆ. ಸಿಎಜಿ ಅಥವಾ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೂ ಈ ನಿಧಿ ಒಳಪಡುತ್ತಿಲ್ಲ.

  • ಆಗಸ್ಟ್ 18 ರಂದು ಸುಪ್ರೀಂ ಕೋರ್ಟ್‌ನ ತೀರ್ಪು ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ.

  • ಸಂವಿಧಾನ ಆರಂಭವಾದ ನಂತರ ಸ್ಥಾಪಿಸಲಾದ ಸಂಸ್ಥೆಗಳು ಅಥವಾ ಸ್ವಾಯತ್ತ ಸಂಸ್ಥೆಗಳು ಸಾಂವಿಧಾನಿಕ ನಿಬಂಧನೆಗಳ ಅಡಿ ಪರಿಶೀಲನೆಗೆ ಒಳಪಡಬೇಕಾಗುತ್ತದೆ.

  • 2005ರ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2 (ಎಚ್) ಅಡಿ ಪಿಎಂಎನ್‌ಆರ್‌ಎಫ್ ನಿಧಿಯು ‘ಸಾರ್ವಜನಿಕ ಪ್ರಾಧಿಕಾರ’ವಾಗಿರುವುದಿಲ್ಲ ಎಂದು ದೆಹಲಿ ಹೈಕೋರ್ಟ್ 2018ರಲ್ಲಿ ತೀರ್ಪು ನೀಡಿದೆ. ದುರದೃಷ್ಟವಶಾತ್ ಅದರಲ್ಲಿ ಪಿಎಂಎನ್‌ಆರ್‌ಎಫ್ ನಿಧಿ ಸ್ಥಾಪಿಸುವ ಸಾಂವಿಧಾನಿಕ ಸಾಧ್ಯತೆಯ ಬಗ್ಗೆ ಚರ್ಚೆ ನಡೆದಿಲ್ಲ.