BBC's documentary , Delhi high court
BBC's documentary , Delhi high court  
ಸುದ್ದಿಗಳು

ಮೋದಿ ಸಾಕ್ಷ್ಯಚಿತ್ರ: ಗುಜರಾತ್ ಖಾಸಗಿ ಸಂಸ್ಥೆಯಿಂದ ಮೊಕದ್ದಮೆ; ಬಿಬಿಸಿಗೆ ದೆಹಲಿ ಹೈಕೋರ್ಟ್ ಸಮನ್ಸ್

Bar & Bench

ಭಾರತ, ಅದರ ನ್ಯಾಯಾಂಗ ಮತ್ತು ಸ್ವತಃ ಪ್ರಧಾನಿಯ ಪ್ರತಿಷ್ಠೆಗೆ 'ಇಂಡಿಯಾ: ದ ಮೋದಿ ಕ್ವೆಶ್ಚನ್' ಹೆಸರಿನ ಸಾಕ್ಷ್ಯಚಿತ್ರ ಮಸಿ ಬಳಿದಿದೆ ಎಂದು ಆರೋಪಿಸಿ ಹೂಡಲಾದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ  ದೆಹಲಿ ಹೈಕೋರ್ಟ್ ಸೋಮವಾರ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪನಿಗೆ (ಬಿಬಿಸಿ) ಸಮನ್ಸ್‌ ನೀಡಿದೆ.

ಸಮನ್ಸ್ ಜಾರಿಗೊಳಿಸಿದ ನ್ಯಾಯಮೂರ್ತಿ ಸಚಿನ್ ದತ್ತಾ  ಸೆಪ್ಟೆಂಬರ್‌ನಲ್ಲಿ ವಿಚಾರಣೆ ನಡೆಸುವುದಕ್ಕಾಗಿ ಪ್ರಕರಣವನ್ನು ಪಟ್ಟಿ ಮಾಡಿದರು.

“ಸಾಕ್ಷ್ಯಚಿತ್ರ ದೇಶ, ನ್ಯಾಯಾಂಗ ಪ್ರತಿಷ್ಠ ಹಾಗೂ ದೇಶದ ಪ್ರಧಾನಿ ವಿರುದ್ಧ ಮಾನಹಾನಿಕರ ಆರೋಪ ಮತ್ತು ಜಾತಿ ನಿಂದನೆ ಮಾಡಲಾಗಿದೆ ಎಂದು ವಾದಿಸಲಾಗಿದೆ. ಎಲ್ಲಾ ಅನುಮತಿಸುವ ವಿಧಾನಗಳ ಮೂಲಕ ಪ್ರತಿವಾದಿಗಳಿಗೆ ನೋಟಿಸ್ ನೀಡಿ” ಎಂದು ಏಕಸದಸ್ಯ ಪೀಠ ಆದೇಶಿಸಿತು.

ʼಜಸ್ಟಿಸ್ ಆನ್ ಟ್ರಯಲ್ʼ ಎಂಬ ಗುಜರಾತ್ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆ ಮಾನನಷ್ಟ ಮೊಕದ್ದಮೆ ಹೂಡಿದೆ. ಸಂಸ್ಥೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಅವರು ಭಾರತ ಮತ್ತು ನ್ಯಾಯಾಂಗ ಸೇರಿದಂತೆ ಇಡೀ ವ್ಯವಸ್ಥೆಗೆ ಸಾಕ್ಷ್ಯಚಿತ್ರ ಕಳಂಕ ತಂದಿದೆ ಎಂದರು.

ಈ ಹಿಂದೆ ಬಿಜೆಪಿ ನಾಯಕ ಬಿನಯ್ ಕುಮಾರ್ ಸಿಂಗ್ ಅವರು ತಮ್ಮ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ಕುರಿತು ದೆಹಲಿಯ ಜಿಲ್ಲಾ ನ್ಯಾಯಾಲಯವು ಬಿಬಿಸಿಗೆ ಸಮನ್ಸ್ ಜಾರಿ ಮಾಡಿತ್ತು.

ಭಾರತ ಸರ್ಕಾರ ಸಾಕ್ಷ್ಯಚಿತ್ರ ನಿಷೇಧಿಸಿದ್ದರೂ, ವಿಕಿಪೀಡಿಯ ಪುಟ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಲಿಂಕ್‌ಗಳನ್ನು ಒದಗಿಸುತ್ತದೆ ಮತ್ತು ಸಾಕ್ಷ್ಯಚಿತ್ರದ ವಸ್ತುವಿಷಯ ಇಂಟರ್ನೆಟ್ ಆರ್ಕೈವ್‌ನಲ್ಲಿ ಇನ್ನೂ ಲಭ್ಯವಿದೆ ಎಂದು ಸಿಂಗ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಬಿಬಿಸಿ ಅರ್ಜಿ ಆಲಿಸಲು ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇಲ್ಲ ಎಂದಿತ್ತು. ಆ ಪ್ರಕರಣದ ವಿಚಾರಣೆ ಮೇ 26ರಂದು ನಡೆಯಲಿದೆ.

ಏಪ್ರಿಲ್‌ನಲ್ಲಿ, ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಿದ್ದಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಷ್ಟ್ರೀಯ ಕಾರ್ಯದರ್ಶಿ ಲೋಕೇಶ್ ಚುಗ್ ಅವರನ್ನು ವಿವಿಯಿಂದ ಡಿಬಾರ್‌ ಮಾಡಿದ್ದ ದೆಹಲಿ ವಿಶ್ವವಿದ್ಯಾಲಯ (ಡಿಯು) ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿತ್ತು.