<div class="paragraphs"><p>Bombay High Court, PM Narendra Modi</p></div>

Bombay High Court, PM Narendra Modi

 
ಸುದ್ದಿಗಳು

ಪಿಎಂ ಕೇರ್ಸ್‌ಗೆ ಪ್ರಧಾನಿ ಚಿತ್ರ ಬಳಕೆ ಸಮರ್ಥಿಸಿ ಪ್ರಧಾನಿ ಕಚೇರಿಯಿಂದ ಬಾಂಬೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ

Bar & Bench

ಪಿಎಂ ಕೇರ್ಸ್ ನಿಧಿ ಟ್ರಸ್ಟ್‌ನಿಂದ ಮತ್ತು ಟ್ರಸ್ಟ್‌ನ ಅಧಿಕೃತ ಜಾಲತಾಣದಿಂದ ನರೇಂದ್ರ ಮೋದಿಯವರ ಹೆಸರು ಮತ್ತು ಚಿತ್ರವನ್ನು ಅಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಮನವಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ [ವಿಕ್ರಾಂತ್ ಚವಾಣ್ ಮತ್ತು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ನಿಧಿ ನಡುವಣ ಪ್ರಕರಣ].

ಪ್ರಧಾನ ಮಂತ್ರಿ ಕೇರ್ಸ್ ನಿಧಿ ಮತ್ತು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್‌) ಎರಡಕ್ಕೂ ಪ್ರಧಾನಮಂತ್ರಿಯವರೇ ಅಧ್ಯಕ್ಷರು ಎಂದು ಪ್ರಧಾನ ಮಂತ್ರಿ ಕಚೇರಿಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಪಿಎಂಎನ್‌ಆರ್‌ಎಫ್‌ಗೆ ಪ್ರಧಾನ ಮಂತ್ರಿಯ ಹೆಸರು ಮತ್ತು ಛಾಯಾಚಿತ್ರ ಮತ್ತು ರಾಷ್ಟ್ರೀಯ ಲಾಂಛನವನ್ನು ಬಳಸಲಾಗುತ್ತಿರುವುದರಿಂದ ಅವುಗಳನ್ನು ಪ್ರಧಾನ ಮಂತ್ರಿ ಕೇರ್ಸ್ ಫಂಡ್‌ಗೂ ಬಳಸಲಾಗುತ್ತಿದೆ ಎಂದು ಅಫಿಡವಿಟ್‌ ವಿವರಿಸಿದೆ.

ಟ್ರಸ್ಟ್‌ನ ಅಧಿಕೃತ ಜಾಲತಾಣದಿಂದ ರಾಷ್ಟ್ರೀಯ ಲಾಂಛನ ಮತ್ತು ರಾಷ್ಟ್ರಧ್ವಜದ ಚಿತ್ರಗಳನ್ನು ಸಹ ತೆಗೆದುಹಾಕುವಂತೆ ಕೋರಿ ಕಾಂಗ್ರೆಸ್‌ ಸದಸ್ಯ ವಿಕ್ರಾಂತ್ ಚವಾಣ್ ಸಲ್ಲಿಸಿದ ಪಿಐಎಲ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ.

ಲಾಂಛನ ಮತ್ತು ಹೆಸರು (ಅಸಮರ್ಪಕ ಬಳಕೆ ತಡೆ) ಕಾಯಿದೆ-1950ರ ಕೆಲ ನಿಬಂಧನೆಗಳನ್ನು ಹೊರತುಪಡಿಸಿ ರಾಷ್ಟ್ರಧ್ವಜ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು, ಸಂಪ್ರದಾಯ, ಆಚರಣೆ ಮತ್ತು ಸೂಚನೆಗಳನ್ನು ಭಾರತದ ಧ್ವಜ ಸಂಹಿತೆ ಒಟ್ಟುಗೂಡಿಸಲಿದ್ದು ಸಾರ್ವಜನಿಕ ಸದಸ್ಯರು ಖಾಸಗಿ ಸಂಸ್ಥೆ, ಶಿಕ್ಷಣ ಸಂಸ್ಥೆ, ಇತ್ಯಾದಿಗಳು ಧ್ವಜ ಪ್ರದರ್ಶನ ಮಾಡುವುದಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಆಡಳಿತಾತ್ಮಕ ಪರಿಹಾರಗಳನ್ನು ಪೂರ್ಣಗೊಳಿಸಿಲ್ಲ. ಲಾಂಛನ ಮತ್ತು ಹೆಸರು (ಅಸಮರ್ಪಕ ಬಳಕೆ ತಡೆ) ಕಾಯಿದೆ ಮತ್ತು ನಿಯಮಾವಳಿ ಹಾಗೂ ಭಾರತದ ರಾಷ್ಟ್ರ ಲಾಂಛನ ಕಾಯಿದೆ ಮತ್ತು ನಿಯಮಾವಳಿಗಳಡಿಯೇ ಪರಿಹಾರ ಲಭ್ಯವಿದೆ ಎಂದು ಅಫಿಡವಿಟ್‌ ತಿಳಿಸಿದೆ.

ಮನವಿಯಲ್ಲಿನ ತಕರಾರೊಂದಕ್ಕೆ ಪ್ರತಿಕ್ರಿಯಿಸಿರುವ ಅಫಿಡವಿಟ್‌ ಕೇವಲ ಟ್ರಸ್ಟ್‌ನ ಆಡಳಿತಾತ್ಮಕ ಅನುಕೂಲಕ್ಕಾಗಿ ಮತ್ತು ಸುಗಮ ಆಡಳಿತಕ್ಕಾಗಿ ಪ್ರಧಾನ ಮಂತ್ರಿ ಅವರು ಪಿಎಂ ಕೇರ್ಸ್ ಫಂಡ್‌ನ ಪದನಿಮಿತ್ತ ಅಧ್ಯಕ್ಷರಾಗಿದ್ದು ರಕ್ಷಣಾ ಖಾತೆ, ಗೃಹ ಹಾಗೂ ಹಣಕಾಸು ಸಚಿವರುಗಳು ನಿಧಿಯ ಪದನಿಮಿತ್ತ ಟ್ರಸ್ಟಿಗಳಾಗಿದ್ದಾರೆ ಎಂದಿದೆ.