Supreme Court, PMLA 
ಸುದ್ದಿಗಳು

ಪಿಎಂಎಲ್ಎ: ವಿಜಯ್ ಮದನ್‌ಲಾಲ್‌ ಪ್ರಕರಣ ತೀರ್ಪು ಪ್ರಶ್ನಿಸಿದ್ದ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ

ವಿಜಯ್ ಮದನ್‌ಲಾಲ್‌ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಪಿಎಂಎಲ್ಎಯ ಸಿಂಧುತ್ವ ಎತ್ತಿಹಿಡಿದು ಜುಲೈ 2022ರಲ್ಲಿ ನೀಡಿದ್ದ ತೀರ್ಪಿನ ಸೂಕ್ತತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.

Bar & Bench

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸಿಂಧುತ್ವ ಎತ್ತಿ ಹಿಡಿದು ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿದ್ದ ಅರ್ಜಿಗಳನ್ನು ನವೆಂಬರ್ 27ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ತಿಳಿಸಿದೆ [ಕಾರ್ತಿ ಚಿದಂಬರಂ ಮತ್ತು ಇ ಡಿ ನಡುವಣ ಪ್ರಕರಣ]

ಪ್ರಕರಣದಲ್ಲಿ ವಾದ ಮಂಡಿಸಬೇಕಾದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೊಂದು ಪೀಠದಲ್ಲಿ ನಿರತರಾಗಿರುವುದರಿಂದ ಪ್ರಕರಣ ಮುಂದೂಡಬೇಕೆಂಬ ಮನವಿ ಮೇರೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ಸಿ ಟಿ ರವಿಕುಮಾರ್ ಹಾಗೂ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ವಿಚಾರಣೆ ಮುಂದೂಡಿತು.

ವಿಜಯ್ ಮದನ್‌ಲಾಲ್ ಪ್ರಕರಣದಲ್ಲಿ ಪಿಎಂಎಲ್‌ಎ ಸಿಂಧುತ್ವವನ್ನು ಎತ್ತಿಹಿಡಿದ ನ್ಯಾಯಾಲಯದ ತೀರ್ಪಿನ ಸೂಕ್ತತೆಯನ್ನು ಪ್ರಶ್ನಿಸಿ 241 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ತ್ರಿಸದಸ್ಯ ಪೀಠ ಜುಲೈ 2022ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪಿನ ಸೂಕ್ತತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳು ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ನಿಗದಿಯಾಗಿದ್ದವು.

ವಿಜಯ್‌ ಮದನ್‌ಲಾಲ್‌ ತೀರ್ಪಿಗೂ ಮುನ್ನ ನವೆಂಬರ್ 2017ರಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು  ರೋಹಿಂಟನ್ ನಾರಿಮನ್ ಅವರಿದ್ದ ವಿಭಾಗೀಯ ಪೀಠ  ಜಾಮೀನಿಗೆ ಅವಳಿ ಷರತ್ತುಗಳನ್ನು ವಿಧಿಸುವ ಪಿಎಂಎಲ್‌ಎಯ ಸೆಕ್ಷನ್‌ ಸೆಕ್ಷನ್ 45 (1)ನ್ನು ರದ್ದುಗೊಳಿಸಿತ್ತು. ನಿಕೇಶ್ ತಾರಾಚಂದ್ ಶಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ಪ್ರಕಟವಾಗಿತ್ತು .

ಆದರೆ ವಿಜಯ್ ಮದನ್‌ಲಾಲ್ ಚೌಧರಿ ಪ್ರಕರಣದ ತೀರ್ಪಿನ ಮೂಲಕ  ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ , ದಿನೇಶ್ ಮಹೇಶ್ವರಿ  ಮತ್ತು  ಸಿ ಟಿ ರವಿಕುಮಾರ್ ಅವರಿದ್ದ ತ್ರಿಸದಸ್ಯ ಪೀಠ ಜುಲೈ 2022ರಲ್ಲಿ ನಿಕೇಶ್ ತಾರಾಚಂದ್ ಪ್ರಕರಣದ ತೀರ್ಪನ್ನು ರದ್ದುಗೊಳಿಸಿತು .

ತೀರ್ಪಿನಲ್ಲಿ ಕಾಯಿದೆಯ ಸೆಕ್ಷನ್ 3 (ಅಕ್ರಮ ಹಣ ವರ್ಗಾವಣೆ ವ್ಯಾಖ್ಯಾನ), 5 (ಆಸ್ತಿ ಮುಟ್ಟುಗೋಲು), 8(4) [ಮುಟ್ಟುಗೋಲಾದ ಆಸ್ತಿಯ ಸ್ವಾಧೀನ), 17 (ಶೋಧಕಾರ್ಯ ಮತ್ತು ವಶ), 18 (ವ್ಯಕ್ತಿಗಳ ಶೋಧಕಾರ್ಯ), 19 ( ಬಂಧನದ ಅಧಿಕಾರ), 24 (ಆರೋಪಿಗಳೇ ತಾವು ನಿರಪರಾಧಿಗಳು ಎಂದು ಸಾಬೀತುಪಡಿಸಬೇಕಾದ ಹೊರೆ), 44 (ವಿಶೇಷ ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುವ ಅಪರಾಧಗಳು), 45 ಅನ್ನು (ಸಂಜ್ಞೇಯವಾಗಿರುವಂತಹ ಅಪರಾಧಗಳು, ಅಸಂಜ್ಞೇಯ ಅಪರಾಧಗಳು ಮತ್ತು ನ್ಯಾಯಾಲಯದಿಂದ ಜಾಮೀನು ಪಡೆಯಲು ವಿಧಿಸುವ ಅವಳಿ ಷರತ್ತುಗಳು) ನ್ಯಾಯಾಲಯ ಎತ್ತಿ ಹಿಡಿದಿತ್ತು.

ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್‌) ಆಂತರಿಕ ದಾಖಲೆಯಾಗಿರುವುದರಿಂದ ಅದನ್ನು ಎಫ್‌ಐಆರ್‌ಗೆ ಹೋಲಿಸಲಾಗದು. ಹೀಗಾಗಿ ಪಿಎಂಎಲ್‌ಎ ಅಡಿಯಲ್ಲಿ ಆರೋಪಿಗೆ ಇಸಿಐಆರ್‌ ನೀಡುವುದು ಕಡ್ಡಾಯವಲ್ಲ. ಬಂಧನದ ಸಮಯದಲ್ಲಿ ಆತನನ್ನು ಏಕೆ ಸೆರೆ ಹಿಡಿಯಲಾಗುತ್ತಿದೆ ಎಂಬ ಮಾಹಿತಿ ನೀಡಿದರೆ ಸಾಕು ಎಂದು ಕೂಡ ತೀರ್ಪಿನಲ್ಲಿ ಪೀಠ ತಿಳಿಸಿತ್ತು.

ಅಕ್ರಮ ಹಣ ವರ್ಗಾವಣೆ ಕಾಯಿದೆಯನ್ನು (ಪಿಎಂಎಲ್‌ಎ)   ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದ 2022ರ ತೀರ್ಪನ್ನು ವಿವಿಧ ವಲಯಗಳು ಟೀಕಿಸಿದವು. ಈ ಹಿನ್ನೆಲೆಯಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ಯು. ಇದೀಗ ಈ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನವೆಂಬರ್ 27 ರಂದು ನಡೆಯಲಿದೆ.