ಸುದ್ದಿಗಳು

ಪಿಒಕೆ ಭಾರತದ ಅವಿಭಾಜ್ಯ ಅಂಗ ಎಂದ ಕಾಶ್ಮೀರ ನ್ಯಾಯಾಲಯ: ವಿದೇಶಿಗರ ಕಾಯಿದೆಯಡಿ ಬಂಧಿತರಾಗಿದ್ದ ಆರೋಪಿಗಳ ಖುಲಾಸೆ

ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಭಾಗವಲ್ಲ; ಅದು ಇನ್ನೊಂದು ದೇಶದ ಅಕ್ರಮ ಆಕ್ರಮಣದಲ್ಲಿದ್ದರೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿದಿದೆ ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿದ್ದು ಆರೋಪಿತರ ವಿರುದ್ಧ ವಿದೇಶಿಗರ ಕಾಯಿದೆ ವಿಧಿಗಳನ್ನು ಅನ್ವಯಿಸಲು ಅವರ ವಿದೇಶ ಪೌರತ್ವ ಅಥವಾ ಒಳನುಸುಳುವಿಕೆ ಸಾಬೀತುಪಡಿಸುವಂತ ದೃಢ ಮತ್ತು ನಂಬಲರ್ಹ ಸಾಕ್ಷ್ಯಗಳು ಇರಬೇಕು ಎಂದು ಕಾಶ್ಮೀರದ  ನ್ಯಾಯಾಲಯ ತಿಳಿಸಿದೆ [ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರಮತ್ತು ಮೊಹಮ್ಮದ್‌ ಮಕ್ಬೂಲ್‌ ರಾಥರ್‌ ಇನ್ನಿತರರ ನಡುವಣ ಪ್ರಕರಣ].

ಪಿಒಕೆ ಪಾಕಿಸ್ತಾನದ ಭಾಗವಲ್ಲ. ಅದು ಮತ್ತೊಂದು ದೇಶದ ಅಕ್ರಮ ಆಕ್ರಮಣದಲ್ಲಿದ್ದರೂ ಸಹ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿದಿದೆ. ಆದ್ದರಿಂದ, ಪ್ರಕರಣದ ವಾಸ್ತವಾಂಶಗಳ ಆಧಾರದಲ್ಲಿ ಆರೋಪಿತರ ವಿರುದ್ಧ ವಿದೇಶಿಗರ ಕಾಯ್ದೆಯನ್ನು ಅನ್ವಯಿಸಲಾಗದು ಎಂದು ಚಾಡೂರಾದ ನ್ಯಾಯಾಲಯದ ನ್ಯಾಯಮೂರ್ತಿ ಸಯ್ಯದ್ ತಯೂಬ್ ಬುಖಾರಿ ಅವರು ತಿಳಿಸಿದರು.

ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಆರೋಪಿತರ ಅಕ್ರಮ ಪ್ರವೇಶ, ಶಸ್ತ್ರ ತರಬೇತಿ ಅಥವಾ ವಿದೇಶಿಗರ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಪ್ರವಾಸ ದಾಖಲೆಗಳು, ಗಡಿ ದಾಟಿದ ವಿವರಗಳು, ಜಪ್ತಿ ಮೆಮೊಗಳು, ಗುಪ್ತಚರ ಮಾಹಿತಿ ಅಥವಾ ಇತರೆ ವಸ್ತುನಿಷ್ಠ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದೆ. ಜೊತೆಗೆ, ಪಿಒಕೆ ಪಾಕಿಸ್ತಾನದ ಭಾಗವಲ್ಲ; ಅದು ಭಾರತದ ಅವಿಭಾಜ್ಯ ಅಂಗವಾಗಿದ್ದು, ಇನ್ನೊಂದು ದೇಶದ ಅಕ್ರಮ ಆಕ್ರಮಣದಲ್ಲಿ ಇದೆ. ಹೀಗಾಗಿ ಆರೋಪಿತರ ಮೇಲೆ ವಿದೇಶಿಗರ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಅದು ವಿವರಿಸಿತು.

ಮೊಹಮ್ಮದ್ ಮಕ್ಬೂಲ್ ರಾಥರ್ ಸುಮಾರು ಎರಡು ದಶಕಗಳ ಹಿಂದೆ ಪಿಒಕೆಗೆತೆರಳಿ, ಅಲ್ಲಿ ಶಸ್ತ್ರ ತರಬೇತಿ ಪಡೆದಿದ್ದು ಅಲ್ಲಿಯೇ ವಿವಾಹವಾಗಿದ್ದರು. ನಂತರ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ತನ್ನ ಪತ್ನಿ ಪರ್ವೀನಾ ಅಖ್ತರ್ ಮತ್ತು ಮಕ್ಕಳೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿದ್ದಾನೆ ಎಂದು ಆರೋಪಿಸಲಾಗಿತ್ತು.

ಸಾಕ್ಷಿಗಳು ಹೇಳಿಕೆ- ಕೇಳಿಕೆಗಳನ್ನು ಆಧರಿಸಿದ್ದು ನಂಬಲರ್ಹವಾಗಿಲ್ಲ ಎಂದ ನ್ಯಾಯಾಲಯ ಸಂಶಯ ಎಷ್ಟೇ ಗಂಭೀರವಾಗಿದ್ದರೂ ಅದು ಸಂಶಯಾತೀತ ಸಾಕ್ಷ್ಯಕ್ಕೆ ಪರ್ಯಾಯವಾಗಲಾರದು ಎಂಬ ಅಪರಾಧಿಕ ನ್ಯಾಯಶಾಸ್ತ್ರದ ಮೂಲ ತತ್ವವನ್ನು ವಿವರಿಸಿತು.

ಪ್ರಾಸಿಕ್ಯೂಷನ್ ಉಲ್ಲೇಖಿಸಿದ ಎಂಟು ಸಾಕ್ಷಿಗಳಲ್ಲಿ ಕೇವಲ ಇಬ್ಬರನ್ನಷ್ಟೇ ವಿಚಾರಣೆ ಮಾಡಲಾಗಿದ್ದು, ತನಿಖಾಧಿಕಾರಿಯಂತಹ ಪ್ರಮುಖ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು. ಅಂತೆಯೇ ಇಬ್ಬರೂ ಆರೋಪಿತರನ್ನು ಖುಲಾಸೆಗೊಳಿಸಿದ ನ್ಯಾಯಾಲಯ ಅವರಿಗೆ ವಿಧಿಸಲಾಗಿದ್ದ ಜಾಮೀನು ಬಾಂಡ್‌ಗಳನ್ನು ರದ್ದುಗೊಳಿಸಿದೆ. ಯಾವುದೇ ಆಸ್ತಿ ಜಪ್ತಿ ಮಾಡಿದ್ದರೆ ಅದನ್ನು ಮರಳಿಸುವಂತೆ ಆದೇಶಿಸಿದೆ.

[ಆದೇಶದ ಪ್ರತಿ]

STATE_VS_MAQBOOL_FINAL.pdf
Preview