ನ್ಯಾಯಾಲಯದ ಅನುಮೋದನೆಯಿಲ್ಲದೆ ಪೊಲೀಸರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಅಥವಾ ಸ್ಥಗಿತಗೊಳಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ [ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಲಿಮಿಟೆಡ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಅಪರಾಧದ ಗಳಿಕೆಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 106ರ ಅಡಿ ಈ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಸಾಕ್ಷ್ಯಾಧಾರಕ್ಕಾಗಿ ಆಸ್ತಿ ಜಪ್ತಿ ಮಾಡುವ ಅಧಿಕಾರವನ್ನಷ್ಟೇ ಸೆಕ್ಷನ್ 106 ಪೊಲೀಸರಿಗೆ ನೀಡುತ್ತದೆ. ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ಸ್ಥಗಿತಗೊಳಿಸುವ ಯಾವುದೇ ಅಧಿಕಾರವನ್ನು ಅದು ಪೊಲೀಸರಿಗೆ ನೀಡುವುದಿಲ್ಲ. ಇಂತಹ ಕ್ರಮವನ್ನು ಸೆಕ್ಷನ್ 107ರ ಅಡಿಯಲ್ಲಿ, ಸಕ್ಷಮ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದೊಂದಿಗೆ ಮತ್ತು ಕಾನೂನು ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮಾತ್ರವೇ ಕೈಗೊಳ್ಳಬಹುದು ಎಂದು ನ್ಯಾಯಮೂರ್ತಿಗಳು ವಿವರಿಸಿದ್ದಾರೆ.
ತನಿಖೆಯಲ್ಲಿರುವ ಅಪರಾಧದಲ್ಲಿ ಖಾತೆದಾರರು ಆರೋಪಿಯಾಗಲೀ ಅಥವಾ ಶಂಕಿತರಾಗಲೀ ಅಲ್ಲದಿರುವಾಗ, ಬ್ಯಾಂಕ್ ಖಾತೆಗಳನ್ನು ಸಂಪೂರ್ಣವಾಗಿ ಅಥವಾ ಅಸಮಾನವಾಗಿ ಮುಟ್ಟುಗೋಲು ಹಾಕಿಕೊಳ್ಳುವುದು ಸ್ಪಷ್ಟವಾಗಿ ನಿರಂಕುಶವಾಗುತ್ತದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಹೀಗೆ ಮಾಡುವುದು ಸಂವಿಧಾನದ 19(1)(ಜಿ) ವಿಧಿ ಮತ್ತು 21ನೇ ವಿಧಿಯಡಿ ಖಚಿತಪಡಿಸಲಾದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದ್ದು, ಈ ವಿಧಿಗಳು ಜೀವನೋಪಾಯದ ಹಕ್ಕು ಹಾಗೂ ವ್ಯಾಪಾರ–ವ್ಯವಹಾರ ನಡೆಸುವ ಸ್ವಾತಂತ್ರ್ಯವನ್ನು ಒಳಗೊಂಡಿವೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ ಯಾವುದೇ ರೀತಿಯ ಭಾಗವಹಿಸುವಿಕೆ ಕಂಡುಬರದೆ ಇದ್ದರೂ, ಬ್ಯಾಂಕ್ ಖಾತೆಯನ್ನು ಈ ರೀತಿ ಸ್ಥಗಿತಗೊಳಿಸುವುದು ನಿರ್ದೋಷಿ ಸಂಸ್ಥೆಯ ದಿನಿತ್ಯದ ವ್ಯಾಪಾರ ಚಟುವಟಿಕೆಗಳ ಮೇಲೆ ಕಾರ್ಮೋಡ ಕವಿಯುವಂತಹ ಪರಿಣಾಮ ಉಂಟುಮಾಡುತ್ತದೆ. ಇದರಿಂದ ಸಂಸ್ಥೆಯ ವಾಣಿಜ್ಯಿಕ ವರ್ಚಸ್ಸಿಗೆ ಧಕ್ಕೆ ಒದಗಿ ಆರ್ಥಿಕ ನಷ್ಟ ಉಂಟಾಗುತ್ತದೆ. ಅಪರಾಧದಲ್ಲಿ ಭಾಗಿಯಾಗದ ಖಾತೆದಾರನನ್ನು ದಂಡಿಸುವಂತಹ ಪರಿಣಾಮ ಬೀರುತ್ತದೆ ಎಂದು ಅದು ವಿವರಿಸಿದೆ.
ಎಫ್‌ಐಆರ್‌ನಲ್ಲಿ ತನ್ನ ಹೆಸರಿಲ್ಲ. ಯಾವುದೇ ತನಿಖೆಯಲ್ಲಿಯೂ ತಾನು ಆರೋಪಿಯಲ್ಲ. ಕಾನೂನನ್ನು ಅಗತ್ಯವಾಗಿ ಪಾಲಿಸಿದ್ದರೂ ಹಲವು ಬ್ಯಾಂಕ್‌ಗಳು ಖಾತೆಗಳಲ್ಲಿ ಭಾರೀ ಮೊತ್ತದ ಹಣವನ್ನು ತಡೆಹಿಡಿದ ಕಾರಣ, ಕಂಪನಿಯ ದಿನನಿತ್ಯದ ವ್ಯಾಪಾರ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ ಎಂದು ಮಲಬಾರ್ ಗೋಲ್ಡ್ ವಾದಿಸಿತ್ತು.
ಕಂಪನಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಯಾವುದೇ ನ್ಯಾಯಸಮ್ಮತ ಕಾರಣವಿಲ್ಲ ಎಂದ ಹೈಕೋರ್ಟ್ ಅವುಗಳನ್ನು ಸ್ಥಗಿತಗೊಳಿಸದಂತೆ ಆದೇಶಿಸಿದೆ. ಆದರೆ ಕಂಪೆನಿ ಅಪರಾಧದಲ್ಲಿ ತೊಡಗಿರುವ ಬಗ್ಗೆ ಸ್ಪಷ್ಟ ಸಾಕ್ಷ್ಯ ಇದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಸ್ವಾತಂತ್ರ್ಯ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.