

ಭಾರತದಲ್ಲಿ ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಂದಿರುವ ಅತಿಯಾದ ನಿಯಂತ್ರಣಕ್ಕೆ ಇದೀಗ ಕಾನೂನು ಮಾನ್ಯತೆ ದೊರೆತಂತಾಗಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಕಟುವಾಗಿ ಹೇಳಿದೆ.
ರಾಷ್ಟ್ರಿಯ ಕ್ರಿಕೆಟ್ ತಂಡವನ್ನು ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡ ಎಂದು ಉಲ್ಲೇಖಿಸದಂತೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾ. ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಬಿಸಿಸಿಐ ಎಂಬುದು ತಮಿಳುನಾಡು ಸೊಸೈಟೀಸ್ ನೋಂದಣಿ ಕಾಯಿದೆಯಡಿ ನೋಂದಾಯಿಸಲಾದ ಖಾಸಗಿ ಸಂಸ್ಥೆಯಾಗಿದ್ದು, ಅದು ಸಂವಿಧಾನದ ವಿಧಿ 12ರ ಅರ್ಥದಲ್ಲಿ ಕಾನೂನುಬದ್ಧ ಸಂಸ್ಥೆಯೂ ಅಲ್ಲ, ಸರ್ಕಾರವೂ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ಪೀಠಕ್ಕೆ ಅರ್ಜಿದಾರರು ತಿಳಿಸಿದರು.
ಈ ಹಿನ್ನೆಲೆಯಲ್ಲಿ, ಬಿಸಿಸಿಐಯ ಸಂಸ್ಥಾತ್ಮಕ ಸ್ವರೂಪದ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ, ಹಣದ ಪ್ರಭಾವದಿಂದ “ಬಾಲವೇ ನಾಯಿಯನ್ನು ಅಲ್ಲಾಡಿಸಿದಂತೆ” ಎಂಬ ರೀತಿಯ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಬಿಸಿಸಿಐಯ ವ್ಯಾಪಕ ನಿಯಂತ್ರಣಕ್ಕೆ ಈಗ ಕಾನೂನು ಮಾನ್ಯತೆ ದೊರೆತಿದೆ ಎಂಬುದನ್ನೂ ಅವರು ಸೂಚಿಸಿದರು.
"ಒಂದೊಮ್ಮೆ ಕೇಂದ್ರ ಸರ್ಕಾರವು ಇಲ್ಲಿಗೆ (ನ್ಯಾಯಾಲಯಕ್ಕೆ) ಬಂದಿದ್ದರೆ ಆಗ ವಿಷಯ ಬೇರೆ ತಿರುವು ಪಡೆಯುತ್ತಿತ್ತು. ಅದರೆ, ಅವರಿಗೆ (ಬಿಸಿಸಿಐ) ಅತಿಶಯವಾದ ಬೆಂಬಲ ನೀಡಲಾಗುತ್ತದೆ. ಅವರು ಹೊಂದಿರುವ ವ್ಯಾಪಕವಾದ ನಿಯಂತ್ರಣವನ್ನು ಶಾಸನಾತ್ಮಕವಾಗಿ ಗುರುತಿಸಲಾಗಿದೆ. ಸಮಸ್ಯೆ ಎಂದರೆ, ಕೆಲವೊಮ್ಮೆ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತದೆ, ಏಕೆಂದರೆ ಇಲ್ಲಿ ಹಣದ ವಿಚಾರವಿದೆ," ಎಂದಿತು.
ಅಂತಿಮವಾಗಿ, ಅರ್ಜಿಯನ್ನು ಗಂಭೀರವಾಗಿ ಪರಿಗಣಿಸದ ನ್ಯಾಯಾಲಯ ಅದನ್ನು ವಜಾಗೊಳಿಸಿತು. ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಇಂತಹ ಅರ್ಜಿಗಳಿಂದ ನ್ಯಾಯಾಲಯದ ಮೇಲೆ ಅನಗತ್ಯ ಹೊರೆ ಬೀಳುತ್ತಿದೆ ಎಂದು ಹೇಳಿತು. ಅಲ್ಲದೆ ಭಾರೀ ದಂಡ ವಿಧಿಸಬೇಕಾಗುತ್ತದೆ ಎಂತಲೂ ಅದು ಎಚ್ಚರಿಕೆ ನೀಡಿತು.
ಮನೆಯಲ್ಲೇ ಕುಳಿತು ಅರ್ಜಿಗಳನ್ನು ರಚಿಸುವ ಮೂಲಕ ನ್ಯಾಯಾಲಯದ ಸಮಯ ವ್ಯರ್ಥ ಮಾಡಬೇಡಿ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಕಟುವಾಗಿ ನುಡಿದರು.
2025ರ ಅಕ್ಟೋಬರ್‌ನಲ್ಲಿ ವಕೀಲ ರೀಪಕ್ ಕನ್ಸಲ್ ಸಲ್ಲಿಸಿದ್ದ ಇದೇ ಬಗೆಯ ಪಿಐಎಲ್ ಬಗ್ಗೆ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಭಾರತವನ್ನು ಪ್ರತಿನಿಧಿಸುತ್ತಿರುವ ತಂಡ ಭಾರತವನ್ನು ಪ್ರತಿನಿಧಿಸುತ್ತಿಲ್ಲ ಎಂದು ನೀವು ಹೇಳುತ್ತಿದ್ದೀರಾ?” ಎಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಪ್ರಶ್ನಿಸಿದ್ದರು. ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಅವರು, ಈ ಪಿಐಎಲ್ ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸಿದಂತೆ ಎಂದು ಅಭಿಪ್ರಾಯಪಟ್ಟಿದ್ದರು.
ಯುವಜನ ಮತ್ತು ಕ್ರೀಡಾ ಸಚಿವಾಲಯದ ಆರ್‌ಟಿಐ ಉತ್ತರಗಳನ್ನು ಉಲ್ಲೇಖಿಸಿದ್ದ ಅರ್ಜಿ ಬಿಸಿಸಿಐಯನ್ನು ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಸರ್ಕಾರ ಗುರುತಿಸಿಲ್ಲ ಹಾಗೂ ಧನಸಹಾಯವನ್ನೂ ಅದು ನೀಡುತ್ತಿಲ್ಲ. ಆದರೆ ಸರ್ಕಾರದ ವೇದಿಕೆಗಳು ಬಿಸಿಸಿಐ ತಂಡವನ್ನು “ಟೀಮ್ ಇಂಡಿಯಾ” ಅಥವಾ “ಭಾರತೀಯ ರಾಷ್ಟ್ರೀಯ ತಂಡ” ಎಂದು ಕರೆಯುತ್ತಿದ್ದು, ಕ್ರಿಕೆಟ್ ಪ್ರಸಾರದ ವೇಳೆ ರಾಷ್ಟ್ರಧ್ವಜದಂತಹ ಚಿಹ್ನೆ ಬಳಸಲಾಗುತ್ತಿದೆ ಎಂದು ಆಕ್ಷೇಪಿಸಿತ್ತು.