CJI DY Chandrachud 
ಸುದ್ದಿಗಳು

ಅಯೋಧ್ಯೆ ವಿವಾದ ಇತ್ಯರ್ಥಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೆ: ಸಿಜೆಐ ಡಿ ವೈ ಚಂದ್ರಚೂಡ್

ಅಯೋಧ್ಯೆ ಪ್ರಕರಣ ಇತ್ಯರ್ಥಗೊಳಿಸುವುದು ಕಷ್ಟಕರ ಎಂದು ತಿಳಿದುಬಂದಿದ್ದರಿಂದ ಪರಿಹಾರಕ್ಕಾಗಿ ತಾವು ದೇವರ ಮೊರೆ ಹೋಗಿದ್ದಾಗಿ ಅವರು ತಿಳಿಸಿದ್ದಾರೆ.

Bar & Bench

ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದ ಇತ್ಯರ್ಥಕ್ಕಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ.

ಭಾನುವಾರ ತಮ್ಮ ಹುಟ್ಟೂರಾದ ಮಹಾರಾಷ್ಟ್ರದ ಖೇಡ್ ತಾಲೂಕಿನ ಕನ್ಹೇರ್‌ಸರ್‌ ಗ್ರಾಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹಾಲಿ ಸಿಜೆಐ ಚಂದ್ರಚೂಡ್‌ ಅವರು ಶತಮಾನದಷ್ಟು ಹಳೆಯದಾದ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಕಾಲ ವಿಚಾರಣೆ ನಡೆಸಿ ಹಿಂದೂ ಪಕ್ಷಕಾರರ ಪರ ತೀರ್ಪು ನೀಡಿದ್ದ  ಸಿಜೆಐ ರಂಜನ್‌ ಗೊಗೊಯ್‌ ಅವರ ನೇತೃತ್ವದ ಪೀಠದ ಭಾಗವಾಗಿದ್ದರು. ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್‌ ಎ ಬೊಬ್ಡೆ, ಅಶೋಕ್ ಭೂಷಣ್ ಹಾಗೂ ಎಸ್ ಅಬ್ದುಲ್ ನಜೀರ್ ಅವರು ಕೂಡ ಇದ್ದರು.

ಅಯೋಧ್ಯೆ ವಿವಾದ ಇತ್ಯರ್ಥಪಡಿಸಲು ಕಷ್ಟಕರವಾದ ಪ್ರಕರಣವಾಗಿತ್ತು. ಈ ಹಿನ್ನೆಲೆಯಲ್ಲಿ ದೇವರೆದುರು ಕುಳಿತು ಪರಿಹಾರಕ್ಕಾಗಿ ಧ್ಯಾನಿಸಿದ್ದೆ ಎಂದು ಸಿಜೆಐ ಹೇಳಿದ್ದನ್ನು ಪಿಟಿಐ ವರದಿ ಮಾಡಿದೆ.

“ಕೆಲವೊಮ್ಮೆ ನಮ್ಮೆದುರು ಇತ್ಯರ್ಥಪಡಿಸಲಾಗದಂತಹ ಪ್ರಕರಣಗಳು ಬರುತ್ತವೆ. ಮೂರು ತಿಂಗಳ ಕಾಲ ನನ್ನೆದುರು ಇದ್ದ ಅಯೋಧ್ಯೆ(ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ) ಪ್ರಕರಣ ಕೂಡ ಅಂಥದ್ದೇ ಆಗಿತ್ತು. ದೇವರೆದುರು ಕುಳಿತ ನಾನು ಪರಿಹಾರ ಕೋರಿದೆ” ಎಂದು ಅವರು ವಿವರಿಸಿದ್ದಾರೆ.

ತಾವು ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ ಅವರು "ನನ್ನನ್ನು ನಂಬಿ, ನಿಮಗೆ ನಂಬಿಕೆ ಇದ್ದರೆ, ದೇವರು ಯಾವುದೋ ವಿಧದಲ್ಲಿ ನಿಮಗೆ ದಾರಿ ತೋರುತ್ತಾನೆ” ಎಂದು ಅವರು ಹೇಳಿದರು.