ಸುಪ್ರೀಂ ಕೋರ್ಟ್ ನೀಡಿದ ಅಯೋಧ್ಯೆ ತೀರ್ಪಿನಿಂದ ಮಸೀದಿಗಳ ಮೇಲೆ ಹಕ್ಕು ಸಾಧಿಸಲು ಬಲಪಂಥೀಯರಿಗೆ ಅನುವು: ನ್ಯಾ. ಗೋಪಾಲಗೌಡ

ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳನ್ನು ಪ್ರತಿಗಾಮಿ ಶಕ್ತಿಗಳು ಸ್ವಾಧೀನಪಡಿಸಿಕೊಳ್ಳುತ್ತಿದ್ದು ಪ್ರಭುತ್ವವು ಫ್ಯಾಸಿಸ್ಟ್ ಹಿಂದೂ ಆಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ವಿಷಾದಿಸಿದರು.
Former Supreme Court judge Justice V Gopala Gowda
Former Supreme Court judge Justice V Gopala Gowda
Published on

ಬಾಬರಿ ಮಸೀದಿ ಇರುವ ವಿವಾದಿತ ಸ್ಥಳವನ್ನು ಹಿಂದೂ  ಪಕ್ಷಕಾರರಿಗೆ ನೀಡಿದ್ದ ಅಯೋಧ್ಯೆ ವಿವಾದ ಕುರಿತಂತೆ 2019ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ ಗೋಪಾಲಗೌಡ ಟೀಕಿಸಿದರು.

ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್‌ಯು) ದೆಹಲಿ ಪತ್ರಕರ್ತರ ಒಕ್ಕೂಟ (ಡಿಯುಜೆ) ಹಾಗೂ ಪ್ರಜಾಸತ್ತಾತ್ಮಕ ಶಿಕ್ಷಕರ ವೇದಿಕೆ (ಡಿಟಿಎಫ್‌) ಜಂಟಿಯಾಗಿ ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ  ʼಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿʼ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

Also Read
ಚುನಾವಣಾ ಬಾಂಡ್ ಪ್ರಕರಣ ಕೈಗೆತ್ತಿಕ್ಕೊಳ್ಳದ ಸುಪ್ರೀಂ ಕೋರ್ಟ್ ನಡೆ ಬಗ್ಗೆ ನ್ಯಾ. ಗೋಪಾಲಗೌಡ ಬೇಸರ

ಜ್ಞಾನವಾಪಿ ಮಸೀದಿ ಸೇರಿದಂತೆ ದೇಶಾದ್ಯಂತ ಇರುವ ಮಸೀದಿಗಳ ಮೇಲೆ ಹಕ್ಕು ಸಾಧಿಸಲು ಬಲ- ಪ್ರತಿಗಾಮಿ ಶಕ್ತಿಗಳಿಗೆ ಈ ತೀರ್ಪು ಬಾಗಿಲು ತೆರೆಯಿತು. ಇದು ಭಾರತ ಗಣರಾಜ್ಯಕ್ಕೆ ದೊಡ್ಡ ಅಪಾಯ ಎಂದು ಅವರು ಹೇಳಿದರು.

ಭಾಷಣದ ಪ್ರಮುಖಾಂಶಗಳು

  • ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳನ್ನು ಪ್ರತಿಗಾಮಿ ಶಕ್ತಿಗಳು ಸ್ವಾಧೀನಪಡಿಸಿಕೊಳ್ಳುತ್ತಿದ್ದು ಪ್ರಭುತ್ವವು ಫ್ಯಾಸಿಸ್ಟ್ ಹಿಂದೂ ಆಗಿ ಪರಿವರ್ತನೆಗೊಳ್ಳುತ್ತಿದೆ.   

  • ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವು ಭಾರತೀಯ ಸಂವಿಧಾನ ಹೇಳುವ ತ್ರಿಮೂರ್ತಿಗಳಾಗಿವೆ. ಪ್ರತಿಗಾಮಿ ಶಕ್ತಿಗಳು ಮತ್ತು ಪ್ರಭುತ್ವವು ಫ್ಯಾಸಿಸ್ಟ್ ಹಿಂದೂ ಆಗಿ ರೂಪಾಂತರಗೊಳ್ಳುವುದರಿಂದ ಈಗ ಇವು ಅಳಿವಿನಂಚಿನಲ್ಲಿವೆ. ಎಲ್ಲಾ ಸ್ತಂಭಗಳನ್ನು ಅಂತಹ ಶಕ್ತಿಗಳು ಸ್ವಾಹ ಮಾಡುತ್ತಿವೆ. ಉದಾಹರಣೆಗೆ, ಪೌರತ್ವ ತಿದ್ದುಪಡಿ ಕಾಯಿದೆಯು ( ಸಿಎಎ) ಸಮಾನ ಪೌರತ್ವವನ್ನು ನಿರಾಕರಿಸುತ್ತದೆ; ಇದು ನಮ್ಮ ಪ್ರಜಾಪ್ರಭುತ್ವದ ತಳಹದಿಯಾಗಿರುವ ಜಾತ್ಯತೀತತೆಗೆ ವಿರುದ್ಧ.

  • ಸಂವಿಧಾನದ 370ನೇ ವಿಧಿ ರದ್ದತಿ, ರಾಜ್ಯಗಳ ಆರ್ಥಿಕ ಅಧಿಕಾರ ಮೊಟಕು, ರಾಜ್ಯಪಾಲರಿಂದ ಅಧಿಕಾರ ದುರುಪಯೋಗ, ಹೊಸ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದಿದೆ.

  • ನೋಟು ರದ್ದತಿ ಕುರಿತ ತೀರ್ಪು ನೀಡುವಾಗ ಅಗತ್ಯ ಕ್ರಮಗಳನ್ನು ಪಾಲಿಸಿಲ್ಲ.

  • ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಅತಿಸಣ್ಣ ಸಣ್ಣ ಹಾಗೂ ಮಧ್ಯಮ ಉದ್ಯಮಗಳು ತೊಂದರೆಗೀಡಾದವು. ಆರ್ಥಿಕತೆ ಕುಸಿದು ಅಭಿವೃದ್ಧಿ ಸ್ಥಗಿತಗೊಂಡಿತು.

  •  ಸಿಎಜಿ ಭಾರತೀಯ ಚುನಾವಣಾ ಆಯೋಗ ಮತ್ತಿತರ ಕೇಂದ್ರೀಯ ಸಂಸ್ಥೆಗಳು ಕಾರ್ಯಾಂಗದ ವಿಸ್ತೃತ ಅಂಗಗಳಾಗಿ ಮಾರ್ಪಟ್ಟಿವೆ.  ತನ್ನ ನೆಚ್ಚಿನ ವ್ಯಕ್ತಿಯಾದ ರಾಕೇಶ್‌ ಆಸ್ತಾನರನ್ನು ಸರ್ಕಾರ ಸಿಬಿಐಗೆ ಮುಖ್ಯಸ್ಥರನ್ನಾಗಿ ಮಾಡಿದೆ.  ಆರ್‌ಬಿಐ ಗವರ್ನರ್‌ಗಳಾದ ರಘುರಾಮ್ ರಾಜನ್ ಮತ್ತು ಊರ್ಜಿತ್ ಪಟೇಲ್ ರಾಜೀನಾಮೆ ನೀಡಲು ಒತ್ತಡ ಹೇರಲಾಯಿತು.  

  • (ದಿವಂಗತ ಜನರಲ್ ಬಿಪಿನ್ ರಾವತ್ ಅವರನ್ನು ಸೇನಾ ಮುಖ್ಯಸ್ಥರಾಗಿ ನೇಮಕ ಮಾಡಿದ್ದನ್ನು ಉಲ್ಲೇಖಿಸಿಸುತ್ತಾ )ಸಶಸ್ತ್ರಪಡೆಗಳಲ್ಲಿ ಉತ್ತರಾಧಿಕಾರ ಸಮಸ್ಯೆ ಉದ್ಭವಿಸಿದೆ.   

  • ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ 15 ಮತ್ತು 16ನೇ ವಿಧಿಗಳನ್ನು ನಿರ್ಲಕ್ಷಿಸಿ ಸರ್ಕಾರ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ (ಇಡಬ್ಲ್ಯೂಎಸ್‌) ಮೀಸಲಾತಿ ಒದಗಿಸುವ ಕಾನೂನು ಜಾರಿಗೆ ತಂದಿತು. ಇದನ್ನು ಸುಪ್ರೀಂ ಕೋರ್ಟ್‌ 3:2 ಬಹುಮತದಿಂದ ಎತ್ತಿಹಿಡಿಯಿತು.

  • ಸಂಸತ್ತು ವಿಧೇಯಕಗಳನ್ನು ಮಂಡಿಸುವ ಮತ್ತು ಅಂಗೀಕರಿಸುವ ರೀತಿಯನ್ನು ನೀವೆಲ್ಲಾ ಕೃಷಿ ಕಾಯಿದೆಯಲ್ಲಿ ಕಂಡಿರಬೇಕು. ದೊಡ್ಡ ವ್ಯಾಪಾರಸ್ಥರಿಗೆ ಅವಕಾಶ ನೀಡಿದ ಮಸೂದೆಗಳು ಕೃಷಿ ಭೂಮಿ  ಖರೀದಿಸಲು (ಭೂಸ್ವಾಧೀನ ಕಾನೂನುಗಳ ಅಡಿಯಲ್ಲಿ) ಹಾದಿ ಮಾಡಿಕೊಟ್ಟವು. ಇದು ಕೂಡ ಸಂವಿಧಾನಕ್ಕೆ ವಿರುದ್ಧ.

  • ವಿಮರ್ಶಾತ್ಮಕವಾಗಿ ವರದಿ ಮಾಡಿದ್ದಕ್ಕಾಗಿ ಅನೇಕ ಪತ್ರಕರ್ತರನ್ನು ಕೊಲ್ಲಲಾಯಿತು (ಹತ್ಯೆಗೀಡಾದ) ಗೌರಿ ಲಂಕೇಶ್‌ ಮತ್ತು (ಬಂಧನಕ್ಕೊಳಗಾದ) ಸಿದ್ದಿಕ್‌ ಕಪ್ಪನ್‌ ಅವರಿಗೆ ಒದಗಿದ ದುಸ್ಥಿತಿಯನ್ನು ನೋಡಿ.

  • ಸರ್ಕಾರವು ಎನ್‌ಜಿಒಗಳಿಗೆ ವಿದೇಶಿ ನಿಧಿಯ ಮೇಲೆ ನಿರ್ಬಂಧ ಹೇರಿದೆ. 20,000 ಎನ್‌ಜಿಒಗಳು ತಮ್ಮ ಪರವಾನಗಿ ಕಳೆದುಕೊಂಡಿವೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಕಾರ್ಯ ಸ್ಥಗಿತಗೊಳಿಸುವಂತೆ ಮಾಡಲಾಯಿತು. ಸರ್ಕಾರದ ಬಗ್ಗೆ ಅಭಿಪ್ರಾಯ ಭೇದ ಹೊಂದಿರುವವರ ಸದ್ದಡಗಿಸಲು ಬಳಸಲಾಗುತ್ತಿದೆ ಎಂದು ದೂರಿ ವಿಶ್ವಸಂಸ್ಥೆಯಲ್ಲಿ ಕೂಡ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಯಿತು.

ಕಾರ್ಯಕ್ರಮದಲ್ಲಿ ದೆಹಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೇಖಾ ಶರ್ಮಾ, ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ಬಿಕಾಶ್ ರಂಜನ್ ಭಟ್ಟಾಚಾರ್ಯ, ರಾಜು ರಾಮಚಂದ್ರನ್ ಹಾಗೂ ಪಿ ವಿ ಸುರೇಂದ್ರನಾಥ್  ಉಪಸ್ಥಿತರಿದ್ದರು.

Kannada Bar & Bench
kannada.barandbench.com