Droupadi Murmu and Supreme Court 
ಸುದ್ದಿಗಳು

ಮಸೂದೆಗೆ ಅಂಕಿತ: 'ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ?' ದ್ರೌಪದಿ ಮುರ್ಮು ಪ್ರಶ್ನೆ

ಸಂವಿಧಾನದ 143(1) ನೇ ವಿಧಿಯು ಕಾನೂನು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಪಡೆಯಲು ಅವಕಾಶ ನೀಡುತ್ತದೆ.

Bar & Bench

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕಲು ಗಡುವು ವಿಧಿಸಿ ಸುಪ್ರೀಂ ಕೋರ್ಟ್‌ ಈಚೆಗೆ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143 (1)ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದಾರೆ.

ಸಂವಿಧಾನದ 143(1) ನೇ ವಿಧಿಯು ಕಾನೂನು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಪಡೆಯಲು ಅವಕಾಶ ನೀಡುತ್ತದೆ. ಪತ್ರಕ್ಕೆ ಉತ್ತರ ನೀಡಲು ಸುಪ್ರೀಂ ಕೋರ್ಟ್‌ ಇದೀಗ ಸಾಂವಿಧಾನಿಕ ಪೀಠ ರಚಿಸಬೇಕಿದೆ.

ಮಸೂದೆಗಳಿಗೆ ಒಪ್ಪಿಗೆ ನೀಡಲು ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಗಡುವು ಪಾಲಿಸದೆ ಹೋದರೆ ಆಗ ಅದನ್ನು ಅವರಿಂದ ಸಮ್ಮತಿ ದೊರೆತಿದೆ ಎಂದು ಭಾವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನವನ್ನು ರಾಷ್ಟ್ರಪತಿ ಮುರ್ಮು ಅವರು ನಿರ್ದಿಷ್ಟವಾಗಿ ಪ್ರಶ್ನಿಸಿದ್ದಾರೆ.

ಗಡುವು ಪಾಲಿಸದೆ ಹೋದರೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ದೊರೆತಿದೆ ಎಂದು ಪಗಿಗಣಿಸಲಾಗುತ್ತದೆ ಎಂಬ ಪರಿಕಲ್ಪನೆ ಸಾಂವಿಧಾನಿಕ ವ್ಯವಸ್ಥೆಗೆ ಪರಕೀಯವಾಗಿದ್ದು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಅಧಿಕಾರವನ್ನು ಮೂಲತಃ ಆವರಿಸಿಕೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ.

ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆ ನೀಡುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂವಿಧಾನದ 200 ಮತ್ತು 201 ನೇ ವಿಧಿಗಳು ಯಾವುದೇ ಗಡುವನ್ನು ಅಥವಾ ನಿರ್ದಿಷ್ಟ ಕಾರ್ಯವಿಧಾನದ ಅವಶ್ಯಕತೆಗಳನ್ನು ಸೂಚಿಸುವುದಿಲ್ಲ ಎಂದು ಒತ್ತಿ ಹೇಳಿರುವ ರಾಷ್ಟ್ರಪತಿ ಮುರ್ಮು ಅವರು ಸುಪ್ರೀಂ ಕೋರ್ಟ್‌ನ ಅಭಿಪ್ರಾಯಕ್ಕಾಗಿ 14 ವಿವಿಧ ಪ್ರಶ್ನೆಗಳನ್ನು ಕಳುಹಿಸಿದ್ದಾರೆ.

ರಾಷ್ಟ್ರಪತಿಗಳು ಕೇಳಿರುವ 14 ಪ್ರಶ್ನೆಗಳು

1. ಸಂವಿಧಾನದ 200 ನೇ ವಿಧಿಯಡಿ ಮಸೂದೆ ಮಂಡಿಸಿದಾಗ ರಾಜ್ಯಪಾಲರ ಮುಂದೆ ಇರುವ ಸಾಂವಿಧಾನಿಕ ಆಯ್ಕೆಗಳು ಯಾವುವು?

2. ಸಂವಿಧಾನದ 200ನೇ ವಿಧಿಯಡಿ ಮಸೂದೆ ಮಂಡಿಸಿದಾಗ ರಾಜ್ಯಪಾಲರು ತಮ್ಮೊಂದಿಗೆ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಚಲಾಯಿಸುವಾಗ ಸಚಿವ ಸಂಪುಟ ನೀಡುವ ಸಹಾಯ ಮತ್ತು ಸಲಹೆಗೆ ಬದ್ಧರೇ?

3. ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ಸಾಂವಿಧಾನಿಕ ವಿವೇಚನೆ ಚಲಾಯಿಸುವುದು ನ್ಯಾಯಸಮ್ಮತವೇ?

4. ಸಂವಿಧಾನದ 200ನೇ ವಿಧಿಯಡಿಯಲ್ಲಿ ರಾಜ್ಯಪಾಲರ ಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಪರಿಶೀಲನೆಯನ್ನು ಸಂವಿಧಾನದ 361ನೇ ವಿಧಿ ಸಂಪೂರ್ಣ ನಿರ್ಬಂಧಿಸುತ್ತದೆಯೇ?

5. ಸಂವಿಧಾನಾತ್ಮಕವಾಗಿ ನಿಗದಿಪಡಿಸಿದ ಗಡುವು ಮತ್ತು ರಾಜ್ಯಪಾಲರು ಅಧಿಕಾರಗಳನ್ನು ಚಲಾಯಿಸುವ ವಿಧಾನ ಇಲ್ಲದಿದ್ದಾಗ, ಸಂವಿಧಾನದ 200ನೇ ವಿಧಿಯಡಿಯಲ್ಲಿ ರಾಜ್ಯಪಾಲರು ಎಲ್ಲಾ ಅಧಿಕಾರಗಳನ್ನು ಚಲಾಯಿಸಲು ನ್ಯಾಯಾಂಗ ಆದೇಶಗಳ ಮೂಲಕ ಗಡುವು ವಿಧಿಸಬಹುದೇ ಮತ್ತು ಚಲಾಯಿಸುವ ವಿಧಾನವನ್ನು ಸೂಚಿಸಬಹುದೇ?

6. ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿಗಳು ಸಾಂವಿಧಾನಿಕ ವಿವೇಚನಾಧಿಕಾರ ಚಲಾಯಿಸುವುದು ನ್ಯಾಯಸಮ್ಮತವೇ?

7. ಸಂವಿಧಾನಾತ್ಮಕವಾಗಿ ನಿಗದಿಪಡಿಸಿದ ಗಡುವು ಮತ್ತು ರಾಷ್ಟ್ರಪತಿಗಳು ಅಧಿಕಾರ ಚಲಾಯಿಸುವ ವಿಧಾನ ಇಲ್ಲದಿದ್ದಾಗ, ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿಗಳು ವಿವೇಚನಾಧಿಕಾರ ಚಲಾಯಿಸಲು ನ್ಯಾಯಾಂಗ ಆದೇಶಗಳ ಮೂಲಕ ಗಡುವು ವಿಧಿಸಬಹುದೇ ಮತ್ತು ಪ್ರಕ್ರಿಯೆಯ ವಿಧಾನವನ್ನು ಸೂಚಿಸಬಹುದೇ?

8. ರಾಷ್ಟ್ರಪತಿಗಳ ಅಧಿಕಾರಗಳನ್ನು ನಿಯಂತ್ರಿಸುವ ಸಾಂವಿಧಾನಿಕ ಸ್ವರೂಪದಡಿ ಗಮನಿಸಿದಾಗ, ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದಾಗ ರಾಷ್ಟ್ರಪತಿಗಳು ಸಂವಿಧಾನದ 143ನೇ ವಿಧಿಯ ಉಲ್ಲೇಖದ ಮೂಲಕ ಸುಪ್ರೀಂ ಕೋರ್ಟ್‌ನ ಸಲಹೆಪಡೆಯಬೇಕೇ ಮತ್ತು ಸುಪ್ರೀಂ ಕೋರ್ಟ್‌ ಅಭಿಪ್ರಾಯ ತೆಗೆದುಕೊಳ್ಳಬೇಕೇ?

9. ಸಂವಿಧಾನದ 200ನೇ ವಿಧಿ ಮತ್ತು 201ನೇ ವಿಧಿಯಡಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ತೆಗೆದುಕೊಳ್ಳುವ ನಿರ್ಧಾರಗಳು ಕಾನೂನು ಜಾರಿಗೆ ಬರುವ ಮೊದಲು ಒಂದು ಹಂತದಲ್ಲಿ ನ್ಯಾಯಸಮ್ಮತವೇ? ಮಸೂದೆಯು ಕಾಯಿದೆಯಾಗುವ ಮೊದಲು ಅದರ ವಿಷಯಗಳ ಬಗ್ಗೆ ನ್ಯಾಯಾಲಯಗಳು ಯಾವುದೇ ರೀತಿಯಲ್ಲಿ ನ್ಯಾಯಾಂಗ ತೀರ್ಪು ನೀಡಲು ಅನುಮತಿ ಇದೆಯೇ?

10. ಸಂವಿಧಾನದ 142ನೇ ವಿಧಿಯಡಿ ಸಾಂವಿಧಾನಿಕ ಅಧಿಕಾರ ಚಲಾವಣೆ ಮತ್ತು ರಾಷ್ಟ್ರಪತಿಗಳು ಇಲ್ಲವೇ ರಾಜ್ಯಪಾಲರು ನೀಡುವ ಆದೇಶಗಳನ್ನು ಯಾವುದೇ ರೀತಿಯಲ್ಲಿ ಬದಲಿಸಬಹುದೇ?

11. ರಾಜ್ಯ ಶಾಸಕಾಂಗವು ಮಾಡಿದ ಕಾನೂನು, ಸಂವಿಧಾನದ 200 ನೇ ವಿಧಿಯಡಿ ನೀಡಲಾದ ರಾಜ್ಯಪಾಲರ ಒಪ್ಪಿಗೆಯಿಲ್ಲದೆ ಕಾನೂನಾಗಿ ಜಾರಿಯಾಗುತ್ತದೆಯೇ?

12. ಭಾರತದ ಸಂವಿಧಾನದ 145(3) ನೇ ವಿಧಿಯ ನಿಬಂಧನೆಯನ್ನು ಗಮನದಲ್ಲಿಟ್ಟುಕೊಂಡು, ಈ ಗೌರವಾನ್ವಿತ ನ್ಯಾಯಾಲಯದ ಯಾವುದೇ ಪೀಠವು ಮೊದಲು ತನ್ನ ಮುಂದೆ ಇರುವ ವಿಚಾರಣೆಯಲ್ಲಿ ಒಳಗೊಂಡಿರುವ ಪ್ರಶ್ನೆಯು ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಕಾನೂನಿನ ಗಣನೀಯ ಪ್ರಶ್ನೆಗಳನ್ನು ಒಳಗೊಂಡಿರುವ ಸ್ವರೂಪದ್ದಾಗಿದೆಯೇ ಎಂದು ನಿರ್ಧರಿಸುವುದು ಮತ್ತು ಅದನ್ನು ಕನಿಷ್ಠ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ಉಲ್ಲೇಖಿಸುವುದು ಕಡ್ಡಾಯವಲ್ಲವೇ?

13. ಸಂವಿಧಾನದ 142ನೇ ವಿಧಿಯಡಿ ಸುಪ್ರೀಂ ಕೋರ್ಟ್‌ನ ಅಧಿಕಾರಗಳು ಪ್ರಕ್ರಿಯಾತ್ಮಕ ಕಾನೂನು ಅಥವಾ ಸಂವಿಧಾನದ 142 ನೇ ವಿಧಿಯ ಪ್ರಕರಣಗಳಿಗೆ ಸೀಮಿತವಾಗಿವೆಯೇ? ಸಂವಿಧಾನದ ಅಥವಾ ಜಾರಿಯಲ್ಲಿರುವ ಕಾನೂನಿನ ಅಸ್ತಿತ್ವದಲ್ಲಿರುವ ಅರ್ಥಪೂರ್ಣ ಅಥವಾ ಕಾರ್ಯವಿಧಾನದ ನಿಬಂಧನೆಗಳಿಗೆ ವಿರುದ್ಧವಾದ ಅಥವಾ ಅಸಮಂಜಸವಾದ ನಿರ್ದೇಶನಗಳನ್ನು ನೀಡುವ ಅಥವಾ ಆದೇಶಗಳನ್ನು ನೀಡುವ ಅಧಿಕಾರ ಹೊಂದಿವೆಯೇ?

14. ಸಂವಿಧಾನದ 131ನೇ ವಿಧಿಯಡಿ ಮೊಕದ್ದಮೆ ಹೂಡುವುದನ್ನು ಹೊರತುಪಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವ್ಯಾಜ್ಯ ಪರಿಹರಿಸಲು ಸುಪ್ರೀಂ ಕೋರ್ಟ್‌ನ ಯಾವುದೇ ಇತರ ನ್ಯಾಯವ್ಯಾಪ್ತಿಯನ್ನು ಸಂವಿಧಾನ ನಿಷೇಧಿಸುತ್ತದೆಯೇ?

ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ರಾಜ್ಯ ಶಾಸಕಾಂಗ ಮಂಡಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಿವರಿಸುವ ಮಹತ್ವದ ತೀರ್ಪನ್ನು ಏಪ್ರಿಲ್ 8ರಂದು ನೀಡಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ  ಜೆ ಬಿ ಪರ್ದಿವಾಲಾ  ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ  ಆ ಮೂಲಕ ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳ ಅಧಿಕಾರಗಳಿಗೆ ಇರುವ ಮಿತಿಯನ್ನೂ ವ್ಯಾಖ್ಯಾನಿಸಿತ್ತು.

ತಮಿಳುನಾಡು ಸರ್ಕಾರ ಹೂಡಿದ್ದ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಉಪರಾಷ್ಟ್ರಪತಿ  ಜಗದೀಪ್‌ ಧನಕರ್‌ ಸೇರಿದಂತೆ ಹಲವರು ಟೀಕಿಸಿದ್ದರು. ಇದೀಗ ತೀರ್ಪಿನ ಕುರಿತಂತೆ ರಾಷ್ಟ್ರಪತಿ ಅವರು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಕೇಳಿ ಪತ್ರ ಬರೆದಿದ್ದಾರೆ.