Karnataka HC (Kalburgi Bench) and Divya Hagaragi
Karnataka HC (Kalburgi Bench) and Divya Hagaragi 
ಸುದ್ದಿಗಳು

[ಪಿಎಸ್‌ಐ ಹಗರಣ] ಬಿಜೆಪಿ ನಾಯಕಿ ದಿವ್ಯಾ, ವೈಜನಾಥ್‌ರಿಂದ ಜಾಮೀನು ಅರ್ಜಿ ಸಲ್ಲಿಕೆ; ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

Siddesh M S

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಬಿಜೆಪಿಯ ನಾಯಕಿ ಹಾಗೂ ಕಲಬುರ್ಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) ಸಹಾಯಕ ಕಮಾಡೆಂಟ್‌ (ಡಿವೈಎಸ್ಪಿ) ವೈಜನಾಥ್‌ ಕಲ್ಯಾಣಿ ರೇವೂರ ಅವರು ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ದಿವ್ಯಾ ಮತ್ತು ವೈಜನಾಥ್‌ ಅವರು ಪ್ರತ್ಯೇಕವಾಗಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ಕಲಬುರ್ಗಿಯಲ್ಲಿ ಪಿಎಸ್‌ಐ ಪರೀಕ್ಷಾ ಕೇಂದ್ರವಾಗಿದ್ದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ತನ್ನ ಶಾಲೆಯ ಶಿಕ್ಷಕಿಯರ ಮೂಲಕ ದಿವ್ಯಾ ಅವರು ತಮಗೆ ಹಣ ನೀಡಿದ ಅಭ್ಯರ್ಥಿಗಳು ಓಎಂಆರ್‌ ಶೀಟ್‌ ತಿದ್ದಿಸಿದ್ದಾರೆ. ಅಲ್ಲದೇ, ಅಫಜಲಪುರ ತಾಲ್ಲೂಕು ಸೊನ್ನದ ಆರ್‌ ಡಿ ಪಾಟೀಲ ಸಹೋದರರ ಅಭ್ಯರ್ಥಿಗಳಿಂದ ಹಣ ಪಡೆದು ಬ್ಲೂಟೂತ್‌ ಮೂಲಕ ಅವರಿಗೆ ಉತ್ತರ ನೀಡಿದ್ದಾರೆ ಎಂಬುದು ಸೇರಿದಂತೆ ಹಲವು ಆರೋಪಗಳು ಅವರ ಮೇಲಿವೆ.

ವೈಜನಾಥ್‌ ಅವರು ಅಭ್ಯರ್ಥಿಗಳು ಅಕ್ರಮವಾಗಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ನೆರವಾದ ಆರೋಪ ಎದುರಿಸುತ್ತಿದ್ದಾರೆ. ಏಪ್ರಿಲ್‌ 29ರಂದು ದಿವ್ಯಾ ಹಾಗರಗಿ ಸೇರಿದಂತೆ ಐವರನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದರು. ಮೇ 6ರಂದು ವೈಜನಾಥ್‌ ಅವರನ್ನು ಬಂಧಿಸಲಾಗಿತ್ತು. ದಿವ್ಯಾ ಹಾಗರಗಿ ಅವರು ಪ್ರಕರಣದಲ್ಲಿ 18ನೇ ಆರೋಪಿಯಾಗಿದ್ದಾರೆ.

ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವೀರೇಶ ನಿಡಗುಂದಾ ಎಂಬ ಅಭ್ಯರ್ಥಿ ಬಂಧನದೊಂದಿಗೆ ಅಕ್ರಮ ಬಯಲಿಗೆ ಬಂದಿತ್ತು. ಆರೋಪಿಗಳ ವಿರುದ್ಧ ಕಲಬುರ್ಗಿಯ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 120 (ಬಿ), 465, 468, 471, 410 ಜೊತೆಗೆ 34ರ ಅಡಿ ಪ್ರಕರಣ ದಾಖಲಾಗಿದೆ.