ಸುದ್ದಿಗಳು

ಪುಣೆ ಪೋಶ ಕಾರು ಅಪಘಾತ: ಬಾಲ ಆರೋಪಿ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಆದೇಶ

ಪ್ರಕರಣದ ತೀರ್ಪನ್ನು ಜೂನ್ 2ರಂದು ಕಾಯ್ದಿರಿಸಿದ್ದ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ಪೀಠ ಇಂದು ಆದೇಶ ನೀಡಿತು.

Bar & Bench

ಪುಣೆ ಪೋಶ ಕಾರು ಅಪಘಾತ ಪ್ರಕರಣದ ಬಾಲ ಆರೋಪಿಯನ್ನು ವೀಕ್ಷಣಾಲಯದಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಪ್ರಕರಣದ ತೀರ್ಪನ್ನು ಜೂನ್ 2ರಂದು ಕಾಯ್ದಿರಿಸಿದ್ದ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರಿದ್ದ ಪೀಠ ಇಂದು ಆದೇಶ ನೀಡಿತು. 

ವೀಕ್ಷಣಾಲಯದಲ್ಲಿರಿಸಿಕೊಳ್ಳುವಂತೆ ನೀಡಿರುವ ಆದೇಶ ಕಾನೂನುಬಾಹಿರ ಮತ್ತು ಅಧಿಕಾರ ವ್ಯಾಪ್ತಿಯಿಲ್ಲದೆ ಹೊರಡಿಸಲಾಗಿದೆ ಎಂದ ನ್ಯಾಯಾಲಯ ಬಾಲ ಆರೋಪಿಯನ್ನು ಆತನ ಚಿಕ್ಕಮ್ಮನ ಸುಪರ್ದಿಗೆ ನೀಡುವಂತೆ ನಿರ್ದೇಶಿಸಿತು.

ನ್ಯಾಯಾಲಯದ ಪ್ರಾಥಮಿಕ ಗುರಿಯಂತೆ ಆತ ಈಗಾಗಲೇ ತನ್ನಲ್ಲಿ ಸುಧಾರಣೆ ಕಾಣುತ್ತಿದ್ದು ಮನಶ್ಶಾಸ್ತ್ರಜ್ಞರು ಆತನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಬಾಲನ್ಯಾಯ ಮಂಡಳಿ (ಜೆಜೆಬಿ) ಕಾನೂನುಬಾಹಿರವಾಗಿ ಮತ್ತು ನಿರಂಕುಶ ರೀತಿಯಲ್ಲಿ ಆತನನ್ನು ವೀಕ್ಷಣಾಲಯದಲ್ಲಿ ಬಂಧಿಸಿದೆ ಎಂದು ಆರೋಪಿಸಿ ಬಾಲಕನ ಚಿಕ್ಕಮ್ಮ ಹೈಕೋರ್ಟ್‌ಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು.

ಪುಣೆಯ ಪ್ರಮುಖ ಬಿಲ್ಡರ್‌ ಒಬ್ಬರ ಮಗನಾದ ಅಪ್ರಾಪ್ತ ಆರೋಪಿ, ಕಲ್ಯಾಣಿನಗರ ಪ್ರದೇಶದಲ್ಲಿ ತನ್ನ ಪೋಷ ಕಾರನ್ನು ಮೋಟಾರ್‌ಸೈಕಲ್‌ಗೆ ಗುದ್ದಿಸಿ ಇಬ್ಬರ ಪ್ರಾಣಕ್ಕೆ ಎರವಾಗಿದ್ದ. ಅಪಘಾತಕ್ಕೂ ಮುನ್ನ ಆತ ಪಬ್‌ನಲ್ಲಿ ಮದ್ಯಪಾನ ಮಾಡಿದ್ದ ಅಂಶ ಬೆಳಕಿಗೆ ಬಂದಿತ್ತು.

ಅಪಘಾತ ನಡೆದಿದ್ದ ಮೇ 19ರಂದೇ ಆತನಿಗೆ ಜಾಮೀನು ದೊರೆತಿದ್ದಾದರೂ ನಂತರ ವೀಕ್ಷಣಾಲಯಕ್ಕೆ ಕಳುಹಿಸಲಾಗಿತ್ತು.

ಇಂದಿನ ವಿಚಾರಣೆ ವೇಳೆ ಪುಣೆ ಪೊಲೀಸರನ್ನು ಪ್ರತಿನಿಧಿಸಿದ್ದ ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾಂವ್ಕರ್ ಅವರು ಹೇಬಿಯಸ್‌ ಕಾರ್ಪಸ್‌ ಅರ್ಜಿಗೆ ಆಕ್ಷೇಪಿಸಿದರು. ಆದರೆ ಬಾಲಾಪರಾಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬಾದ್‌ ಪೋಂಡಾ ವ್ಯಕ್ತಿಯ ಸ್ವಾತಂತ್ರ್ಯದ ವಿಚಾರಕ್ಕೆ ಬಂದಾಗ ವ್ಯವಸ್ಥೆಯನ್ನು ನಿಗ್ರಹಿಸಬಹುದು ಎಂದು ಸುಪ್ರೀಂ ಕೋರ್ಟ್‌ ಪದೇ ಪದೇ ಹೇಳಿರುವುದಾಗಿ ತಿಳಿಸಿದರು.

"ಬಾಲಕ ಸುಮಾರು 35 ದಿನಗಳ ಕಾಲ ವೀಕ್ಷಣಾಲಯದಲ್ಲಿದ್ದಾನೆ. ಈಗಾಗಲೇ ಜಾಮೀನು ನೀಡಿರುವಾಗ ಈ ರೀತಿ ಮಾಡುವುದು ಸಂಪೂರ್ಣ ಕಾನೂನುಬಾಹಿರವಾಗುತ್ತದೆ" ಎಂದು ಅವರು ದೂರಿದರು.