Gurmeet Ram Rahim; picture of security measures outside Panchkula District Court in 2017. 
ಸುದ್ದಿಗಳು

ಡೇರಾ ಹಿಂಸಾಚಾರ: ಪ್ರಕರಣ ಮುಕ್ತಾಯಗೊಳಿಸದಿರಲು ಪಂಜಾಬ್ ಹೈಕೋರ್ಟ್ ತೀರ್ಮಾನ

ಗುರ್ಮೀತ್ ರಾಮ್ ರಹೀಮ್ ಅಪರಾಧಿ ಎಂದು 2017ರಲ್ಲಿ ತೀರ್ಪು ನೀಡಿದ ನಂತರ ನಡೆದ ಹಿಂಸಾಚಾರದಲ್ಲಿ 36 ಜನರು ಸಾವನ್ನಪ್ಪಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಗೆ ತುತ್ತಾಗಿತ್ತು.

Bar & Bench

ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಶಿಕ್ಷೆಗೊಳಗಾದ ನಂತರ 2017ರಲ್ಲಿ ಪಂಜಾಬ್ ಮತ್ತು ಹರಿಯಾಣದ ವಿವಿಧ ಪ್ರದೇಶಗಳಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅಂತ್ಯಗೊಳಿಸದಿರಲು ರಾಜ್ಯ  ಹೈಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ.

ತೀರಾ ವಿಳಂಬವಾಗಿರುವುದರಿಂದ ಪ್ರಕರಣ ಮುಕ್ತಾಯಗೊಳಿಸಲು ಆರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು , ನ್ಯಾಯಮೂರ್ತಿಗಳಾದ ವಿನೋದ್ ಎಸ್ ಭಾರದ್ವಾಜ್ ಹಾಗೂ ವಿಕ್ರಮ್ ಅಗರ್‌ವಾಲ್‌ ಅವರಿದ್ದ ಪೂರ್ಣ ಪೀಠ ಒಲವು ತೋರಿತಾದರೂ ಪ್ರಕರಣದ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಅನುಪಮ್ ಗುಪ್ತಾ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಆ ನಿರ್ಧಾರ ಹಿಂಪಡೆಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 2017ರಲ್ಲಿ ರೂಪಿಸಲಾದ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಅವರು ನ್ಯಾಯಾಲಯವನ್ನು ಕೋರಿದರು. ಇಷ್ಟು ಗಂಭೀರ ಘಟನೆಗಳಲ್ಲಿ ಪೀಠ ಉತ್ತರ ನೀಡದೆ ಹೋದರೆ ಇದು ನ್ಯಾಯಾಂಗದ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಹಿಂಸಾಚಾರ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಮತ್ತು ಹರಿಯಾಣ ಸರ್ಕಾರ ಡೇರಾ ಸಚ್ಚಾ ಸೌದಾವನ್ನು ಬೆಂಬಲಿಸುತ್ತಿರುವ ಬಗೆಯನ್ನು ಪರಿಶೀಲಿಸುವಂತೆ ಅವರು ನ್ಯಾಯಾಲಯವನ್ನು ಕೇಳಿದರು. ರಾಜಕೀಯ ಕಾರಣಗಳಿಗಾಗಿ ಡೇರಾಗೆ ಸಹಾಯ ಮಾಡಲು ಇನ್ನಿಲ್ಲದ ಯತ್ನ ನಡೆಯುತ್ತಿದೆ ಎಂದರು.

ವಾದ ಆಲಿಸಿದ ನ್ಯಾಯಾಲಯ ಪ್ರಕರಣ ವಿಲೇವಾರಿ ಮಾಡುವ ಬದಲು ವಿಚಾರಣೆ ಮುಂದುವರೆಸಲು ನಿರ್ಧರಿಸಿತು.

ಗುರ್ಮೀತ್ ರಾಮ್ ರಹೀಮ್ ಅಪರಾಧಿ ಎಂದು 2017ರಲ್ಲಿ ತೀರ್ಪು ನೀಡಿದ ನಂತರ ನಡೆದ ಹಿಂಸಾಚಾರದಲ್ಲಿ 36 ಜನರು ಸಾವನ್ನಪ್ಪಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಗೆ ತುತ್ತಾಗಿತ್ತು.

ಹಿಂಸಾಚಾರ ನಡೆದ ವರ್ಷವೇ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಮುಂದೆ ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಪೊಲೀಸರು ಕೈಗೊಂಡ ಕ್ರಮ, ಆಸ್ತಿಪಾಸ್ತಿಗೆ ಉಂಟಾದ ಹಾನಿ, ಗಲಭೆ ತಡೆಯುವಲ್ಲಿ ಹರಿಯಾಣ ಸರ್ಕಾರದ ವೈಫಲ್ಯ ಸೇರಿದಂತೆ ಎಂಟು ಕಾನೂನು ಪ್ರಶ್ನೆಗಳನ್ನು ರೂಪಿಸಿತ್ತು.  ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಅಮಿಕಸ್‌ ಇಂದು ಮನವಿ ಮಾಡಿಕೊಟ್ಟರು.

ದೀಪಾವಳಿ ರಜೆಯ ನಂತರ ಕನಿಷ್ಠ ನಾಲ್ಕು ಪ್ರಮುಖ ಪ್ರಶ್ನೆಗಳ ಕುರಿತು ವಾದ ಆಲಿಸಲು ನ್ಯಾಯಾಲಯ ನಿರ್ಧರಿಸಿದೆ. ಸಾರ್ವಜನಿಕ ಶಾಂತಿ ಸುವ್ಯವಸ್ಥೆ ವಿಚಾರದಲ್ಲಿ ಮುಂಜಾಗ್ರತಾ ಕ್ರಮವಾಗಿ ಪಿಐಎಲ್‌ ಸಲ್ಲಿಸಲು ಯಾವಾಗ ಅವಕಾಶ ನೀಡಬೇಕು? ವಿಧಿ 226ರ ಅಡಿಯಲ್ಲಿ ಗುಂಪುಗಲಭೆ ಸಂದರ್ಭದಲ್ಲಿ ಪರಿಹಾರ ನಿಗದಿಪಡಿಸುವುದು ಹೇಗೆ? ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ನಷ್ಟ ಉಂಟಾದಾಗ ಸುರಕ್ಷತಾ ವೆಚ್ಚ ವಸೂಲು ಮಾಡಬಹುದೇ ಹಾಗೂ ಹರಿಯಾಣ ಸರ್ಕಾರ ಕರ್ತವ್ಯ ನಿರ್ವಹಿಸಲು ವಿಫಲವಾಯಿತೆ ಅಥವಾ ಹಿಂಸೆಗೆ ಸಹಕರಿಸಿತ್ತೆ ಎಂಬುದರ ಕುರಿತು ಅದು ವಿಚಾರಣೆ ನಡೆಸಲಿದೆ.