Gurmeet Ram RahimTwitter  
ಸುದ್ದಿಗಳು

ಗುರ್ಮೀತ್ ರಾಮ್ ರಹೀಮ್‌ಗೆ ಪೆರೋಲ್: ತಡೆಯಾಜ್ಞೆ ತೆರವುಗೊಳಿಸಿದ ಪಂಜಾಬ್ ಹೈಕೋರ್ಟ್

ಡೇರಾ ಮುಖ್ಯಸ್ಥನನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲು ಕಾನೂನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಪ್ರಶ್ನಿಸಿ 2023ರಲ್ಲಿ ಎಸ್‌ಜಿಪಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ವಿಲೇವಾರಿ ಮಾಡಿದೆ.

Bar & Bench

ಹರಿಯಾಣ ಸನ್ನಡತೆ ಕೈದಿಗಳ ಕಾಯಿದೆ - 2022ರ ಅಡಿಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಪೆರೋಲ್‌ ನೀಡಲು ಹರಿಯಾಣ ಸರ್ಕಾರ ಮುಕ್ತವಾಗಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ಹೇಳಿದೆ [ಗುರ್ಮೀತ್ ರಾಮ್ ರಹೀಮ್ ಸಿಂಗ್‌ (ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ) ಮತ್ತು ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ]

ತನ್ನ ಅನುಮತಿಯಿಲ್ಲದೆ ಡೇರಾ ಮುಖ್ಯಸ್ಥರಿಗೆ ಪೆರೋಲ್ ನೀಡದಂತೆ ಹೈಕೋರ್ಟ್ ಈ ವರ್ಷದ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ತಡೆ ನೀಡಿತ್ತು . ಶುಕ್ರವಾರದ ಹೈಕೋರ್ಟ್‌ ಆದೇಶ ಈ ಹಿಂದಿನ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.

ಆ ಮೂಲಕ ಡೇರಾ ಮುಖ್ಯಸ್ಥನನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲು ಕಾನೂನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಪ್ರಶ್ನಿಸಿ 2023ರಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ಜಿಪಿಸಿ) ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಅನಿಲ್ ಕ್ಷೇತ್ರಪಾಲ್ ಅವರಿದ್ದ ವಿಭಾಗೀಯ ಪೀಠ ವಿಲೇವಾರಿ ಮಾಡಿದೆ.

ಡೇರಾ ಮುಖ್ಯಸ್ಥ ಸಿಂಗ್‌ಗೆ ಪೆರೋಲ್‌ ನೀಡಲು ರಾಜ್ಯ ಸರ್ಕಾರ ಸನ್ನಡತೆ ಆಧಾರದಲ್ಲಿ ಕೈದಿಗಳ (ತಾತ್ಕಾಲಿಕ ಬಿಡುಗಡೆ) ಕಾಯಿದೆ- 2022ಅನ್ನು ಸೂಕ್ತ ರೀತಿಯಲ್ಲೇ ಅನ್ವಯಿಸಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ರಾಮ್ ರಹೀಮ್ ಪ್ರಕರಣದಲ್ಲಿ ಹರಿಯಾಣ ಉತ್ತಮ ನಡತೆ ಕೈದಿಗಳ (ತಾತ್ಕಾಲಿಕ ಬಿಡುಗಡೆ) ಕಾಯಿದೆ-1988ನ್ನು ಅನ್ವಯಿಸಬೇಕಾಗಿತ್ತು ಎಂಬ ವಾದವನ್ನು ಅದು ತಿರಸ್ಕರಿಸಿತು .

ಅವರಿಗೆ ನೀಡಲಾದ 40 ದಿನಗಳ ಪೆರೋಲ್ ಅವಧಿ ಮಾರ್ಚ್ 2023 ರಲ್ಲಿಯೇ ಮುಗಿದಿರುವಾಗ ಪ್ರಕರಣವನ್ನು ಅರ್ಹತೆಯ ಆಧಾರದಲ್ಲಿ ಏಕೆ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಪ್ರಶ್ನಿಸಿದೆ. ಮುಂದಿನ ದಿನಗಳಲ್ಲಿ ಅವರು ತಾತ್ಕಾಲಿಕ ಬಿಡುಗಡೆ ಕೋರಿದಲ್ಲಿ ಯಾವುದೇ ಹಸ್ತಕ್ಷೇಪವಿಲ್ಲದೆ 2022ರ ಕಾಯಿದೆಯನ್ವಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

 ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮಾತ್ರವಲ್ಲದೆ ಡೇರಾದಲ್ಲಿನ ಲೈಂಗಿಕ ಕಿರುಕುಳದ ಬಗ್ಗೆ ವರದಿ ಪ್ರಕಟಿಸಿದ ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಚತರ್‌ಪತಿ ಹತ್ಯೆಗೆ ಸಂಬಂಧಿಸಿದಂತೆ ಗುರ್ಮೀತ್ ರಾಮ್‌ ರಹೀಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.