ಹರಿಯಾಣದ ಹಿಸಾರ್‌ನಲ್ಲಿರುವ ತನ್ನ ಕುದುರೆ ತಳಿ ಸಾಕಣೆ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಡೈರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಭಾರತೀಯ ಸೇನೆ ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿದ್ದ ಆದೇಶವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ [ವಿನೋದ್ ಕುಮಾರ್ ಮತ್ತು ಕುದುರೆ ತಳಿ ಅಧ್ಯಯನ ಕೇಂದ್ರ ಇನ್ನಿತರರ ನಡುವಣ ಪ್ರಕರಣ].
ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ ಕಾಯಿದೆ) ಅಡಿಯಲ್ಲಿ ಕೋರಿರುವ ಮಾಹಿತಿಗೂ ತಮಗೂ ಹೇಗೆ ಸಂಬಂಧ ಎಂಬದುನ್ನು ಅರ್ಜಿದಾರ ವಿನೋದ್ ಕುಮಾರ್ ವಿವರಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಮೂರ್ತಿ ಹರ್‌ಸಿಮ್ರಾನ್ ಸಿಂಗ್ ಸೇಥಿ ಹೇಳಿದರು.
ಆರ್‌ಟಿಐ ಕಾಯಿದೆಯಡಿಯಲ್ಲಿ ಮಾಹಿತಿ ಪಡೆಯುವಾಗ ಅರ್ಜಿದಾರರು ತಮ್ಮ ಉದ್ದೇಶವನ್ನು ಬಹಿರಂಗಪಡಿಸುವ ಅಗತ್ಯವಿಲ್ಲದಿದ್ದರೂ, ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿ ಪಡೆಯುವಾಗ ನ್ಯಾಯಾಲಯ ಅವರ ಉದ್ದೇಶದ ಬಗ್ಗೆ ಕೇಳಬಹುದು ಎಂದು ಏಕಸದಸ್ಯ ಪೀಠ ತಿಳಿಸಿತು.
"ಸೇನೆ ಹಿಸಾರ್‌ನಲ್ಲಿ ಕುದುರೆ ತಳಿ ಸಾಕಣಿಕೆ ಕೇಂದ್ರ (ಸ್ಟಡ್ ಫಾರ್ಮ್) ಸ್ಥಾಪಿಸಿದೆ. ಅಲ್ಲಿ ಅರ್ಜಿದಾರರ ಪ್ರಕಾರ, ಡೈರಿ ಕೂಡ ನಡೆಸಲಾಗುತ್ತಿದೆ. ಸ್ಟಡ್ ಫಾರ್ಮ್‌ನಲ್ಲಿರುವ ಪ್ರಾಣಿಗಳು ಸೇನೆ ಸೂಕ್ತವೆಂದು ಪರಿಗಣಿಸುವ ಉದ್ದೇಶಗಳಿಗಾಗಿ ಇದೆಯೇ ವಿನಾ ಸಾರ್ವಜನಿಕರಿಗಾಗಿ ಅಲ್ಲ ಎಂಬುದನ್ನು ಗಮನಿಸಬೇಕು. ಇಲ್ಲಿ ಬಹಿರಂಗಪಡಿಸಲಾಗುವ ಯಾವುದೇ ಮಾಹಿತಿ ಯಾವುದೇ ರೀತಿಯ ಪ್ರಮುಖ ಮಾಹಿತಿ ಸೋರಿಕೆಗೆ ಕಾರಣವಾಗಬಹುದು " ಎಂದು ನ್ಯಾಯಾಲಯ ಹೇಳಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಕುಮಾರ್ ಅವರು ಈಕ್ವೈನ್ ಬ್ರೀಡಿಂಗ್ ಸ್ಟಡ್ ಕೇಂದ್ರದಲ್ಲಿ ಡೈರಿ ನಡೆಸಲು ಅನುಮೋದನೆ ನೀಡುವ ಬಗ್ಗೆ ಮಾಹಿತಿ ಕೇಳಿದ್ದರು. ಜೊತೆಗೆ ಅಲ್ಲಿ ಒಂದು ತಿಂಗಳಲ್ಲಿ ಉತ್ಪಾದಿಸುವ ಮೊಟ್ಟೆಗಳ ಸಂಖ್ಯೆ ಮತ್ತು ಅಲ್ಲಿ ಸಾಕಿರುವ ಹಸುಗಳು, ಮೇಕೆಗಳು ಮತ್ತು ಕೋಳಿಗಳ ಸಂಖ್ಯೆಯ ಬಗ್ಗೆಯೂ ವಿವರ ಕೇಳಿದ್ದರು.
ಮಾಹಿತಿಯನ್ನು ಯಾವುದೇ ಉಪಯುಕ್ತ ಉದ್ದೇಶಕ್ಕಾಗಿ ಪಡೆಯುತ್ತಿಲ್ಲ, ಬದಲಾಗಿ ಅರ್ಜಿದಾರರಿಗೆ ಚೆನ್ನಾಗಿ ತಿಳಿದಿರುವ ಬೇರೆ ಕಾರಣಗಳಿಗಾಗಿಯಷ್ಟೇ ಪಡೆಯಲಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಡೇರಿ ನಡೆಸಲು ರಕ್ಷಣಾ ಸಚಿವಾಲಯ ನೀಡಿದ ಅನುಮೋದನೆಯ ಬಗ್ಗೆ ಮಾತ್ರ ತಿಳಿದುಕೊಳ್ಳಲು ಬಯಸುತ್ತೇನೆ ಎಂಬ ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ,
ಒಮ್ಮೆ ಈ ಭೂಮಿ ಭಾರತೀಯ ಸೇನೆಯ ವಶದಲ್ಲಿದ್ದು, ಭಾರತೀಯ ಸೇನೆ ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸುತ್ತಿದ್ದಾಗ, ಆ ಭೂಮಿಯಲ್ಲಿ ಡೈರಿ ನಡೆಸಲು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದಿಂದ ಅನುಮೋದನೆ ನೀಡಲಾಗಿದೆಯೋ ಇಲ್ಲವೋ ಎಂಬುದು ಅರ್ಜಿದಾರರು ಕಾಳಜಿ ವಹಿಸಬೇಕಾದ ವಿಚಾರವಲ್ಲ ಮತ್ತು ಇಂತಹ ಮಾಹಿತಿ ಬಯಸುವುದು ಸೇನೆ ತನ್ನ ಸ್ವಂತ ಉದ್ದೇಶಕ್ಕಾಗಿ ನಡೆಸುತ್ತಿರುವ ಸಂಸ್ಥೆಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಬಹುದು ಎಂಬುದಾಗಿ ನ್ಯಾಯಾಲಯ ವಿವರಿಸಿದೆ.