Police Image for representational purposes only
ಸುದ್ದಿಗಳು

ಸಾಮಾಜಿಕ ಮಾಧ್ಯಮಗಳಲ್ಲಿ ಪೊಲೀಸ್ ಕಾರ್ಯಾಚರಣೆಯ ಫೋಟೋ, ವಿಡಿಯೋ: ಮಾರ್ಗಸೂಚಿ ರೂಪಿಸಲು ಪಂಜಾಬ್ ಹೈಕೋರ್ಟ್ ಸೂಚನೆ

ಸಂಚಾರ ಪೊಲೀಸರು ತಡೆದಾಗ ತಾನು ಜಿಲ್ಲಾಧಿಕಾರಿ ಎಂದು ಹೇಳಿಕೊಂಡಿದ್ದಕ್ಕಾಗಿ ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

Bar & Bench

ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಸೆರೆಹಿಡಿದ ಯಾವುದೇ ವಿಡಿಯೋ ಅಥವಾ ಛಾಯಾಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಕಟಿಸುವ ಕುರಿತು ಮಾರ್ಗಸೂಚಿ ರೂಪಿಸುವಂತೆ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನ ನೀಡಿದೆ [ ಪ್ರಕಾಶ್ ಸಿಂಗ್ ಮಾರ್ವಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]

ಅಂತಹ ವಸ್ತುವಿಷಯವನ್ನು ಪ್ರಕಟಿಸುವುದರಿಂದ ತನಿಖಾ ಸಂಸ್ಥೆಗೆ, ಸಂತ್ರಸ್ತರಿಗೆ ಅಥವಾ ಆರೋಪಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಮಾರ್ಗಸೂಚಿ ರೂಪಿಸುವುದು ಅಗತ್ಯ ಎಂದು  ನ್ಯಾಯಮೂರ್ತಿ ಕುಲದೀಪ್ ತಿವಾರಿ ಹೇಳಿದರು.

"ಆದೇಶ ಹೊರಡಿಸಿದ ಮೂರು ತಿಂಗಳೊಳಗೆ ಅಂತಹ ನಿರ್ದೇಶನ ಅಥವಾ ಸೂಚನೆ ನೀಡಬೇಕು " ಎಂದು ನ್ಯಾಯಾಲಯ ಆದೇಶಿಸಿತು.

ಸಂಚಾರ ಪೊಲೀಸರು ತಡೆದಾಗ ತಾನು ಜಿಲ್ಲಾಧಿಕಾರಿ ಎಂದು ಹೇಳಿಕೊಂಡಿದ್ದಕ್ಕಾಗಿ ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ತನ್ನ ಘನತೆಯಿಂದ ಬದುಕುವ ಹಕ್ಕು ಮತ್ತು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಮಾರ್ವಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಡಿಯೋವನ್ನು ಪ್ರಕಟಿಸುವುದು ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಗಾರರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2021ರ ನಿಯಮ 3(1)(ಡಿ)ರ ಉಲ್ಲಂಘನೆ ಎಂದು ಅವರು ಹೇಳಿದ್ದರು. ಹಾಗಾಗಿ ಅದನ್ನು ಸಾಮಾಜಿಕ ಮಾಧ್ಯಮ ಜಾಲತಾಣಗಳಿಂದ ತೆಗೆದುಹಾಕಲು ಕೋರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಚಂಡೀಗಢ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಯಾರು ಪ್ರಕಟಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ. ವಿಡಿಯೋವನ್ನು ತೆಗೆದುಹಾಕಲು ಸೂಚಿಸಲಾಗಿದೆ ಎಂದು ಹೇಳಿದ್ದರು.

ಮೂಲ ವಿಡಿಯೋ ಚಿತ್ರೀಕರಿಸಿದ್ದ ಕಾನ್‌ಸ್ಟೆಬಲ್ ಯೋಗೇಶ್ ಅವರ ಮೊಬೈಲ್ ಫೋನ್ ಅನ್ನು ಶೀಘ್ರದಲ್ಲೇ ಮುಟ್ಟುಗೋಲು ಹಾಕಿಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಡಬೇಕು ಎಂದು ಮೇ 29ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದ ಛಾಯಾಚಿತ್ರ ಅಥವಾ ವಿಡಿಯೋವನ್ನು ಪ್ರಕಟಿಸಬಾರದು ಎಂದು ಸಂಚಾರ ಪೊಲೀಸ್‌ ವಿಭಾಗದ ಹಿರಿಯ ಅಧಿಕಾರಿಗಳು ನಿರ್ದಿಷ್ಟ ಸೂಚನೆ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ "ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ವಿಡಿಯೋವನ್ನು ತೆಗೆದುಹಾಕಲು ಪೊಲೀಸ್ ಅಧಿಕಾರಿಗಳೇ ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಈ ಹಂತದಲ್ಲಿ, ಪ್ರಕರಣದ ಸಂಬಂಧ ಹೆಚ್ಚಿನ ನಿರ್ದೇಶನ ನೀಡುವ ಅಗತ್ಯವಿಲ್ಲ" ಎಂದಿತು.