ತಮ್ಮ ಅವಲೋಕನ ಹಾಗೂ ತೀರ್ಮಾನಗಳ ಕಾರಣಕ್ಕೆ ಸಾಮಾಜಿಕವಾಗಿ ದಾಳಿಗೊಳಗಾದ ನ್ಯಾಯಾಧೀಶರು ಹೇಗೆ ತಾನೇ ಭಯ ಅಥವಾ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಸ್ಥಾನದ ಜೈಪುರದಲ್ಲಿ ನಡೆದ 18ನೇ ಅಖಿಲ ಭಾರತ ಕಾನೂನು ಸೇವಾ ಪ್ರಾಧಿಕಾರಗಳ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಗೆಹ್ಲೋಟ್ ಮಾತನಾಡಿದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹಾಗೂ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಕಾರ್ಯಕ್ರಮದಲ್ಲಿದ್ದರು.
ಇತ್ತೀಚೆಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ , ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಜೆ ಬಿ ಪರ್ದಿವಾಲಾ ಅವರು ಹೇಗೆ ಅವಹೇಳನಗಳಿಗೆ ತುತ್ತಾದರು ಎಂದು ಗೆಹ್ಲೋಟ್ ಒತ್ತಿ ಹೇಳಿದರು. ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು ಹೇಗೆ ಅವರ ವಿರುದ್ಧ ಮುಗಿಬಿದ್ದರು ಎಂಬುದನ್ನು ಅವರು ವಿವರಿಸಿದರು.
“ಇತ್ತೀಚೆಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಪರ್ದಿವಾಲಾ ಅವರು ವಿಷಯವೊಂದನ್ನು ಹೇಳಿದರು. ನ್ಯಾಯಾಂಗವನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಶಾಹಿ, ಅಧಿಕಾರಿಗಳು ಸೇರಿದಂತೆ 116 ಮಂದಿಯನ್ನು ನ್ಯಾಯಮೂರ್ತಿಗಳ ವಿರುದ್ಧ ನಿಲ್ಲುವಂತೆ ಮಾಡಲಾಯಿತು. ಇದನ್ನು ಹೇಗೆ ನಿರ್ವಹಿಸಲಾಯಿತು ಮತ್ತು ಇದರಿಂದ ಉಂಟಾದ ಪರಿಣಾಮವೇನೋ ನನಗೆ ಗೊತ್ತಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಅವಲೋಕನದಿಂದಾಗಿ ಈ ವಾತಾವರಣ ಸೃಷ್ಟಿಸಲಾಯಿತು” ಎಂದರು.
ನ್ಯಾಯಾಧೀಶರ ನಿವೃತ್ತಿ ನಂತರದ ಆಸಕ್ತಿಗಳು ಹೇಗೆ ಹಾಲಿ ನ್ಯಾಯಮೂರ್ತಿಗಳ ಕಾರ್ಯ ನಿರ್ವಹಣೆ ಬಗ್ಗೆ ವಿವರಿಸುತ್ತವೆ ಎಂಬುದನ್ನು ಎತ್ತಿ ತೋರಿಸಿದ ಗೆಹ್ಲೋಟ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೊಗೋಯಿ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದನ್ನು ಉದಾಹರಿಸಿದರು. ಗೆಹ್ಲೋಟ್ ಭಾಷಣದ ಪ್ರಮುಖಾಂಶಗಳು ಹೀಗಿವೆ:
ಊಹಿಸಿಕೊಳ್ಳಿ, ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು 'ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂದು ಹೇಳಿದರು. ಹಾಗೆ ಹೇಳಿದವರಲ್ಲಿ (ನಿವೃತ್ತ) ಸಿಜೆಐ ರಂಜನ್ ಗೊಗೊಯ್ ಕೂಡ ಇದ್ದರು. ನಾನು ಭಾರತದ ರಾಷ್ಟ್ರಪತಿಗಳನ್ನು, ‘ನ್ಯಾ. ಗೊಗೊಯ್ ಅವರು ಮೊದಲು (ಸುಪ್ರೀಂ ಕೋರ್ಟ್ ಅಧಿಕಾರಾವಧಿಯಲ್ಲಿ) ಸರಿಯಾಗಿದ್ದರಾ, ಈಗ ಸರಿಯಾಗಿದ್ದಾರಾ?’ ಎಂದು ಪ್ರಶ್ನಿಸಿದೆ. ಇದು ನನ್ನ ತಿಳುವಳಿಕೆ ಮೀರಿದ್ದಾಗಿದೆ. ನಂತರ ಅವರು ಸಂಸತ್ ಸದಸ್ಯರಾದರು.
ರಾಜ್ಯ ಸರಕಾರಗಳನ್ನು ಉರುಳಿಸಲಾಗುತ್ತಿದೆ. ಗೋವಾ, ಮಣಿಪುರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಹೀಗೆ ಈ ನಾಟಕ ನಡೆಯುತ್ತಲೇ ಇದೆ. ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆಯೇ? ಕುದುರೆ ವ್ಯಾಪಾರದಿಂದ ಚುನಾಯಿತ ಸರ್ಕಾರಗಳು ಉರುಳಿವೆ. ನನ್ನ ಸರ್ಕಾರ ಹೇಗೆ ಉಳಿದಿದೆಯೋ ಗೊತ್ತಿಲ್ಲ. ಇಲ್ಲದೇ ಹೋಗಿದ್ದರೆ ನಾನು ಇಂದು ನಿಮ್ಮ ಮುಂದೆ ನಿಲ್ಲುತ್ತಿರಲಿಲ್ಲ. ಬೇರೊಬ್ಬ ಮುಖ್ಯಮಂತ್ರಿಯನ್ನು ಇಂದು ನೀವು ಭೇಟಿಯಾಗಿರುತ್ತಿದ್ದಿರಿ.
ದೇಶದಲ್ಲಿ ಪರಿಸ್ಥಿತಿ ಕೋಮು ಉದ್ವಿಗ್ನತೆಯಿಂದ ಕೂಡಿದೆ. ಪ್ರಜಾಪ್ರಭುತ್ವ ಎಂಬುದು ಸಹಿಷ್ಣುತೆಯ ಮೇಲೆ ನಿಂತಿದೆ. ಜನರು ಪ್ರಧಾನಿ ನರೇಂದ್ರ ಮೋದಿಯವರ ಮಾತು ಕೇಳುತ್ತಾರೆ. ಹೀಗಾಗಿಯೇ ಜನ ಅವರಿಗೆ ಮತ ಹಾಕುತ್ತಾರೆ. ಪ್ರಧಾನಿಯವರು ದೇಶವನ್ನುದ್ದೇಶಿಸಿ ಏಕತೆ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಬೇಕಲ್ಲವೇ? ನಾನು ಹಿಂಸೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಅವರು ಹೇಳಬೇಕು. ಕಾನೂನು ಸಚಿವರು (ರಿಜಿಜು) ಅವರಿಗೆ ಇದನ್ನು ಮನವರಿಕೆ ಮಾಡಿಕೊಡುತ್ತಾರೆ ಎಂದು ನಂಬುತ್ತೇನೆ. ಅವರು (ಪ್ರಧಾನಿ ಮೋದಿ) ನಮ್ಮ ಮಾತು ಕೇಳುವುದಿಲ್ಲ. ಇಂದು ಪರಿಸ್ಥಿತಿ ಸಾಕಷ್ಟು ಉದ್ವಿಗ್ನತೆ ಸೃಷ್ಟಿಸುತ್ತಿದೆ