ರಾಜಸ್ಥಾನದ ವಿಶ್ವಪ್ರಸಿದ್ಧ ಅಜ್ಮೀರ್ ದರ್ಗಾವನ್ನು ಶಿವನ ದೇಗುಲದ ಮೇಲೆ ನಿರ್ಮಿಸಲಾಗಿದ್ದು ಅದನ್ನು ಭಗವಾನ್ ಶ್ರೀ ಸಂಕಟ್ಮೋಚನ್ ಮಹಾದೇವ್ ವಿರಾಜಮಾನ ದೇವಸ್ಥಾನ ಎಂದು ಘೋಷಿಸುವಂತೆ ಕೋರಿದ್ದ ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ಮುಸ್ಲಿಂ ಪಕ್ಷಕಾರರಿಗೆ ನವೆಂಬರ್ 27ರಂದು ಅಜ್ಮೀರ್ ನ್ಯಾಯಾಲಯ ನೋಟಿಸ್ ನೀಡಿದೆ.
ಸಿವಿಲ್ ನ್ಯಾಯಾಧೀಶ (ಕಿರಿಯ ವಿಭಾಗ) ಮನ್ ಮೋಹನ್ ಚಂಡೇಲ್ ಅವರು ಈ ನೋಟಿಸ್ ನೀಡಿದ್ದು ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 20ರಂದು ನಡೆಯಲಿದೆ.
ದರ್ಗಾ ಸಮಿತಿಯನ್ನು ಪೂಜಾ ಸ್ಥಳದ ಆವರಣದಿಂದ ತೆರವುಗೊಳಿಸಲು ಕೋರಿ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ವಕೀಲ ಶಶಿ ರಂಜನ್ ಕುಮಾರ್ ಸಿಂಗ್ ಮೂಲಕ ಮೊಕದ್ದಮೆ ಹೂಡಿದ್ದಾರೆ.
ದರ್ಗಾದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಮೊಕದ್ದಮೆ ಕೋರಿದೆ. ಅಜ್ಮೀರ್ ದರ್ಗಾವು ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿ ಸ್ಥಳವಾಗಿದ್ದು ದೇಶ ವಿದೇಶಗಳಿಂದ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ಮುಖ್ಯ ಪ್ರವೇಶ ದ್ವಾರದ ಮೇಲ್ಛಾವಣಿಯ ವಿನ್ಯಾಸ ಹಿಂದೂ ರಚನೆಯನ್ನು ಹೋಲುವುದರಿಂದ ಮೂಲತಃ ಇದು ದೇವಾಲಯವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಹಿಂದೂ ಶೈಲಿಯ ವಿನ್ಯಾಸ ದುರದೃಷ್ಟವಶಾತ್ ಬಣ್ಣದ ಪದರಗಳಲ್ಲಿ ಮುಚ್ಚಿ ಹೋಗಿದೆ. ಅದನ್ನು ತೆಗೆದರೆ ನಿಜವಾದ ಗುರುತು ಕಾಣಿಸಲಿದೆ ಎಂದು ಅರ್ಜಿ ಹೇಳಿದೆ.
ಅಜ್ಮೀರ್ ದರ್ಗಾವನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಬದಲಿಗೆ ಮಹದೇವ ದೇಗುಲ ಮತ್ತು ಜೈನ ಮಂದಿರಗಳು ಅಲ್ಲಿದ್ದವು ಎಂಬುದನ್ನು ಇತಿಹಾಸದ ದಾಖಲೆಗಳು ಸೂಚಿಸುತ್ತವೆ. ಆದ್ದರಿಂದ, ವಿವಾದಿತ ಆಸ್ತಿಯ ಸ್ಥಳದಲ್ಲಿ ಭಗವಾನ್ ಶ್ರೀ ಸಂಕಟ್ಮೋಚನ್ ಮಹಾದೇವ್ ದೇವಾಲಯವನ್ನು ಪುನರ್ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ದಾವೆ ಕೋರಿದೆ.