ಸುದ್ದಿಗಳು

ತಾರಕಕ್ಕೇರಿದ ತಾಪಮಾನ: ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದ ರಾಜಸ್ಥಾನ ಹೈಕೋರ್ಟ್

"ಜನರನ್ನು ದನಗಳಂತೆ ಕಾಣಲಾಗದು. ಪ್ರತಿಯೊಬ್ಬ ಮನುಷ್ಯ ಅಂತೆಯೇ, ಪ್ರತಿಯೊಂದು ಜೀವಿ, ಅದು ಪ್ರಾಣಿಯಾಗಿರಲಿ ಅಥವಾ ಪಕ್ಷಿಯಾಗಿರಲಿ ಅವುಗಳಿಗೆ ಬದುಕುವ ಹಕ್ಕಿದೆ" ಎಂದು ನ್ಯಾಯಾಲಯ ಹೇಳಿದೆ.

Bar & Bench

ತೀವ್ರ ತಾಪಮಾನದಿಂದ ಜನರನ್ನು ರಕ್ಷಿಸಲು ರಾಜಸ್ಥಾನ ಸರ್ಕಾರ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ರಾಜಸ್ಥಾನ ಹೈಕೋರ್ಟ್‌ ಗುರುವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.

ರಾಜಸ್ಥಾನದಲ್ಲಿ ಸಾರ್ವಜನಿಕ ಆರೋಗ್ಯದ ಪಾಲಿಗೆ ಬೇಸಿಗೆ ಪ್ರಮುಖ ಸವಾಲೊಡ್ಡುತ್ತಿದ್ದರೂ ತಾಪಮಾನದಿಂದ ಜನರನ್ನು ರಕ್ಷಿಸಲು ರಾಜ್ಯ ಸರ್ಕಾರ ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ ಎಂದು ನ್ಯಾ. ಅನೂಪ್‌ ಕುಮಾರ್‌ ಧಂಡ್‌ ತಿಳಿಸಿದರು. ಕಳೆದ ವರ್ಷ ಇದೇ ರೀತಿಯ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ ನೀಡಿದ್ದ ನಿರ್ದೇಶನಗಳನ್ನು ಸರ್ಕಾರ ಪಾಲಿಸಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

"ಜನರನ್ನು ದನಗಳಂತೆ ಕಾಣಲಾಗದು. ಪ್ರತಿಯೊಬ್ಬ ಮನುಷ್ಯ ಅಂತೆಯೇ, ಪ್ರತಿಯೊಂದು ಜೀವಿ, ಅದು ಪ್ರಾಣಿಯಾಗಿರಲಿ ಅಥವಾ ಪಕ್ಷಿಯಾಗಿರಲಿ ಅವುಗಳಿಗೆ ಬದುಕುವ ಹಕ್ಕಿದೆ" ಎಂದು ಅದು ಹೇಳಿತು.

ಅಲ್ಲದೆ ಸರ್ಕಾರದ ವೈಫಲ್ಯಗಳನ್ನು ಅದು ಪಟ್ಟಿ ಮಾಡಿತು:

- ಜನಸಂದಣಿ ಹೆಚ್ಚಾಗಿರುವ ರಸ್ತೆಗಳಲ್ಲಿ ನೀರು ಸಿಂಪಡಿಸಲು ರಾಜ್ಯವು ಇಲ್ಲಿಯವರೆಗೆ ಯಾವುದೇ ವ್ಯವಸ್ಥೆ ಮಾಡಿಲ್ಲ.

- ಸಂಚಾರ ಸಿಗ್ನಲ್‌, ರಸ್ತೆಬದಿಯ ಸ್ಥಳ ಮತ್ತು ಜನನಿಬಿಡ ಪ್ರದೇಶಗಳಲ್ಲಿ ತಣ್ಣನೆ ನೆಲೆ ಅಥವಾ ನೆರಳಿನ ಪ್ರದೇಶಗಳನ್ನು ಒದಗಿಸಲಾಗಿಲ್ಲ.

- ಪ್ರಮುಖ ಸಂಚಾರ ಸಿಗ್ನಲ್‌ಗಳ ಬಳಿ ನೆರಳು ಕಲ್ಪಿಸಿಲ್ಲ, ಪಾದಚಾರಿಗಳು ಮತ್ತು ಪ್ರಯಾಣಿಕರಿಗೆ ಸುಡುವ ಸೂರ್ಯ ಮತ್ತು ತೀವ್ರ ಶಾಖದಿಂದ ಯಾವುದೇ ರಕ್ಷಣೆ ನೀಡಿಲ್ಲ;

- ನೀರು ಸಿಂಪಡಿಸುವುದು, ಒಆರ್‌ಎಸ್‌ ಪ್ಯಾಕೆಟ್‌ ವಿತರಣೆ, ತಂಪು ಪಾನೀಯದಂತಹ ಸೌಲಭ್ಯಗಳನ್ನು ಸಾರ್ವಜನಿಕರಿಗೆ, ಶ್ರಮಿಕರಿಗೆ ನೀಡಿಲ್ಲ.

- ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಕುಡಿಯುವ ನೀರಿನ ಸೌಲಭ್ಯ ವ್ಯವಸ್ಥೆ ಮಾಡಲಾಗಿಲ್ಲ;

- ಬೇಸಿಗೆಯಲ್ಲಿ ಗರಿಷ್ಠ ತಾಪಮಾನ ಇರುವಾಗ ಮಧ್ಯಾಹ್ನ 12ರಿಂದ ಮಧ್ಯಾಹ್ನ 3ರವರೆಗೆ ವಿಶ್ರಾಂತಿ ಪಡೆಯುವಂತೆ ಶ್ರಮಿಕರಿಗೆ ಸಲಹೆ ನೀಡಿಲ್ಲ.

- ಹವಾಮಾನ ವೈಪರೀತ್ಯ/ಉಷ್ಣ ಅಲೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಕಿರು ಸಂದೇಶ ಸೇವೆ (ಎಸ್‌ಎಂಎಸ್), ಎಫ್‌ಎಂ ರೇಡಿಯೋ, ದೂರದರ್ಶನ, ಮೊಬೈಲ್ ಅಪ್ಲಿಕೇಶನ್‌ಗಳು, ಮುದ್ರಣ/ಎಲೆಕ್ಟ್ರಾನಿಕ್/ಸಾಮಾಜಿಕ ಮಾಧ್ಯಮ, ಪತ್ರಿಕೆಗಳು ಇತ್ಯಾದಿಗಳ ಮೂಲಕ ಉಷ್ಣ ಅಲೆಯ ಎಚ್ಚರಿಕೆಗಳನ್ನು ನೀಡಲು ಕ್ರಮಗಳನ್ನು ತೆಗೆದುಕೊಂಡಿಲ್ಲ.

ಸರ್ಕಾರಿ ಅಧಿಕಾರಿಗಳ ಮೊಂಡುತನಕ್ಕೆ ಈ ಪ್ರಕರಣ ದೃಗ್ಗೋಚರ ಉದಾಹರಣೆ ಎಂದಿರುವ ಏಕಸದಸ್ಯ ಪೀಠ  ಏಪ್ರಿಲ್ 24 ರಂದು ಈ ಹಿಂದಿನ ಸ್ವಯಂ ಪ್ರೇರಿತ ಪ್ರಕರಣದ ಜೊತೆಗೆ ವಿಚಾರಣೆ ನಡೆಸುವುದಾಗಿ ತಿಳಿಸಿತು. ಅಲ್ಲದೆ ತನ್ನ ನಿರ್ದೇಶನ ಪಾಲಿಸದಿರುವುದಕ್ಕೆ ಕಾರಣ ನೀಡುವಂತೆ ಅದು ತಾಕೀತು ಮಾಡಿತು.