IFS officer R Ravi Shankar and Minister Muniratna Facebook
ಸುದ್ದಿಗಳು

[ಅತ್ಯಾಚಾರ ಪ್ರಕರಣ] ಐಎಫ್‌ಎಸ್‌ ಅಧಿಕಾರಿ ರವಿಶಂಕರ್‌, ಸಚಿವ ಮುನಿರತ್ನ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ

Siddesh M S

ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಐಎಫ್‌ಎಸ್‌ ಅಧಿಕಾರಿ ಆರ್‌ ರವಿಶಂಕರ್‌, ತೋಟಗಾರಿಕೆ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಎನ್‌ ಮುನಿರತ್ನ ಸೇರಿದಂತೆ 11 ಮಂದಿಯ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಬೆಂಗಳೂರು ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಈಚೆಗೆ ತಡೆ ನೀಡಿದ್ದು, ಸಂತ್ರಸ್ತೆಗೆ ನೋಟಿಸ್‌ ಜಾರಿ ಮಾಡಿದೆ.

ಐಎಫ್‌ಎಸ್‌ ಅಧಿಕಾರಿ ಆರ್‌ ರವಿಶಂಕರ್‌ ಅವರು ಸಲ್ಲಿಸಿರುವ ಕ್ರಿಮಿನಲ್‌ ತೀರ್ಪು ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ 46ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್‌ ಅವರು ಈ ಆದೇಶ ಮಾಡಿದ್ದಾರೆ.

ಸಂತ್ರಸ್ತೆ ಸಲ್ಲಿಸಿರುವ ಖಾಸಗಿ ದೂರು ಆಧರಿಸಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮಾಜಿ ಹಾಗೂ ಹಾಲಿ ಸಂಸದರು, ಶಾಸಕರ ವಿರುದ್ಧದ ಮ್ಯಾಜಿಸ್ಟ್ರೇಟ್‌ ವಿಚಾರಣೆ ನಡೆಸಬಹುದಾದ ಪ್ರಕರಣಗಳಿಗಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಧೀಶೆ ಪ್ರೀತ್‌ ಜೆ ಅವರ ಮುಂದಿರುವ ಎಲ್ಲಾ ವಿಚಾರಣಾ ಪ್ರಕ್ರಿಯೆಗೆ ಮುಂದಿನ ಆದೇಶವರೆಗೆ ತಡೆ ವಿಧಿಸಲಾಗಿದೆ ಎಂದು ಸೆಷನ್ಸ್‌ ನ್ಯಾಯಾಲಯ ಆದೇಶದಲ್ಲಿ ಹೇಳಿದ್ದು, ಸೆಪ್ಟೆಂಬರ್‌ 27ಕ್ಕೆ ವಿಚಾರಣೆ ಮುಂದೂಡಿದೆ.

ಐಎಫ್‌ಎಸ್‌ ಅಧಿಕಾರಿ ಆರ್‌ ರವಿಶಂಕರ್‌ ಅವರು ಸಂತ್ರಸ್ತೆಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ ಎಂಬುದು ಆರೋಪ. ಇದಕ್ಕೆ ಪ್ರತಿಯಾಗಿ ಸಂತ್ರಸ್ತೆಯನ್ನೇ ಆಪಾದಿತೆಯನ್ನಾಗಿ ಮಾಡುವ ಉದ್ದೇಶದಿಂದ ಸಚಿವ ಮುನಿರತ್ನ ಮತ್ತು ಅವರ ಕೆಲವು ಆಪ್ತರು ಸಂಚು ರೂಪಿಸಿ ಮಹಿಳೆಯನ್ನು ಟ್ರ್ಯಾಪ್‌ ಮಾಡಿದ್ದರು. ಇದರಲ್ಲಿ ರವಿಶಂಕರ್‌ ಅವರ ಪತ್ನಿ ಐಎಎಸ್‌ ಅಧಿಕಾರಿ ತುಳಸಿ ಮದ್ದಿನೇನಿ, ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ಪ್ರಕರಣದಲ್ಲಿ ಕಳೆದ ಫೆಬ್ರವರಿಯಲ್ಲಿ ಸಚಿವ ಮುನಿರತ್ನ ಅವರು ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ತೆರನಾದ ಸಾರ್ವಜನಿಕ ಹೇಳಿಕೆಯನ್ನು ಸಂತ್ರಸ್ತೆ ನೀಡದಂತೆ ಅಧೀನ ನ್ಯಾಯಾಲಯದಿಂದ ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆದುಕೊಂಡಿದ್ದನ್ನು ಇಲ್ಲಿ ನೆನಯಬಹುದಾಗಿದೆ.