ಮಾಧ್ಯಮಗೋಷ್ಠಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ ವಿರುದ್ಧ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳನ್ನು ಉತ್ತರಪ್ರದೇಶಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ [ಪವನ್ ಖೇರಾ ಮತ್ತು ಅಸ್ಸಾಂ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಮೂರೂ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ಒಂದೇ ಪೊಲೀಸ್ ಠಾಣೆಗೆ ವರ್ಗಾಯಿಸುವಂತೆ ಖೇರಾ ಅವರು ಮಾಡಿದ್ದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಈ ಆದೇಶ ನೀಡಿದೆ.
"ವಾರಾಣಸಿ ಮತ್ತು ಅಸ್ಸಾಂನಲ್ಲಿ ದಾಖಲಾದ ಎಫ್‌ಐಆರ್‌ಗಳನ್ನು ಲಖನೌನ ಹಜರತ್‌ಗಂಜ್ ಪೊಲೀಸ್ ಠಾಣೆಗೆ ವರ್ಗಾಯಿಸುವಂತೆ ನಾವು ಆದೇಶಿಸುತ್ತಿದ್ದೇವೆ. (ಖೇರಾ ಅವರಿಗೆ ನೀಡಲಾಗಿರುವ) ಮಧ್ಯಂತರ ರಕ್ಷಣೆಯನ್ನು ಏಪ್ರಿಲ್ 10, 2023 ರವರೆಗೆ ವಿಸ್ತರಿಸಲಾಗಿದೆ. ಸಂಬಂಧಪಟ್ಟ ಅಧಿಕಾರ ವ್ಯಾಪ್ತಿ ಇರುವ ನ್ಯಾಯಾಲಯದ ಮುಂದೆ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ," ಎಂದು ನ್ಯಾಯಾಲಯ ಹೇಳಿದೆ.
ಗೌತಮ್ ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ತನಿಖೆ ನಡೆಸುವಂತೆ ಖೇರಾ ಅವರು ಒತ್ತಾಯಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಉದ್ದೇಶಪೂರ್ವಕವಾಗಿ ಅವಮಾನ ಉಂಟುಮಾಡುವಂತಹ ಮಾತುಗಳನ್ನಾಡಿದ ಆರೋಪ ಅವರ ವಿರುದ್ಧ ಕೇಳಿಬಂದಿತ್ತು. ಪತ್ರಿಕಾಗೋಷ್ಠಿಯ ವೇಳೆ ಖೇರಾ ಅವರು, "(ಮಾಜಿ ಪ್ರಧಾನಿ) ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸುವುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚನೆ ಮಾಡುವುದಾದರೆ, ನರೇಂದ್ರ ಗೌತಮ್ ದಾಸ್... ಕ್ಷಮಿಸಿ ದಾಮೋದರ ದಾಸ್ ಮೋದಿ ಅವರಿಗೆ ಜೆಪಿಸಿ ರಚಿಸಲು ಏನು ಸಮಸ್ಯೆ " ಎಂದು ಕೇಳಿದ್ದರು. ಪ್ರಧಾನಿ ಅವರ ತಂದೆ ದಾಮೋದರ್ ದಾಸ್ ಹೆಸರನ್ನು ಪ್ರಸ್ತಾಪಿಸುವ ಕಡೆ ಗೌತಮ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಖೇರಾ ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದಲ್ಲಿ ದ್ವೇಷ ಉಂಟು ಮಾಡುವ ಮತ್ತು ಸೌಹಾರ್ದತೆಗೆ ಧಕ್ಕೆ ತರುವಂತಹ ಕೃತ್ಯಗಳಿಗೆ ಶಿಕ್ಷೆ ), ಐಪಿಸಿ ಸೆಕ್ಷನ್ 295ಎ (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಘಾಸಿ) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಅದೇ ದಿನ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಅವರು ಮಧ್ಯಂತರ ಜಾಮೀನು ನೀಡುವಂತೆ ಮತ್ತು ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ಒಂದೇ ಪೊಲೀಸ್ ಠಾಣೆಗೆ ವರ್ಗಾಯಿಸಲು ಎರಡೂ ರಾಜ್ಯಗಳಿಗೆ ಸೂಚಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಂತರ ಜಾಮೀನು ವಿಸ್ತರಿಸಿತ್ತು.
ಇದನ್ನು ಪ್ರಶ್ನಿಸಿ ಅಸ್ಸಾಂ ಮತ್ತು ಉತ್ತರಪ್ರದೇಶ ಸರ್ಕಾರಗಳು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದವು. ಇಂದಿನ ವಿಚಾರಣೆ ವೇಳೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎಫ್‌ಐಆರ್‌ಗಳನ್ನು ಒಗ್ಗೂಡಿಸಲು ಯಾವುದೇ ಅಭ್ಯಂತರ ಇಲ್ಲ. ಅವುಗಳನ್ನು ಸೇರಿಸಿ ಅಸ್ಸಾಂಗೆ ವರ್ಗಾಯಿಸುವಂತೆ ವಿನಂತಿಸಿದರು. ಆದರೆ ಪ್ರಕರಣವನ್ನು ಮೊದಲು ಎಫ್‌ಐಆರ್ ದಾಖಲಾದ ಸ್ಥಳಕ್ಕೆ (ಉತ್ತರ ಪ್ರದೇಶ) ವರ್ಗಾಯಿಸುವುದಾಗಿ ತಿಳಸಿದ ನ್ಯಾಯಾಲಯ ಲಖನೌಗೆ ವರ್ಗಾಯಿಸಿತು.