M P Renukacharya
M P Renukacharya 
ಸುದ್ದಿಗಳು

ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ 72 ಮಾಧ್ಯಮ ಸಂಸ್ಥೆಗಳಿಗೆ ನ್ಯಾಯಾಲಯ ನಿರ್ಬಂಧ

Siddesh M S

ಬಿಜೆಪಿಯ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ ಅಥವಾ ವ್ಯಂಗ್ಯದ ಭಾವನೆ ಉಂಟು ಮಾಡುವ ಸುದ್ದಿ ಅಥವಾ ವಿಡಿಯೊವನ್ನು ಮುದ್ರಣ, ವಿದ್ಯುನ್ಮಾನ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದಂತೆ ನಿರ್ಬಂಧ ವಿಧಿಸಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಬುಧವಾರ ಪ್ರತಿಬಂಧಕಾದೇಶ ಹೊರಡಿಸಿದೆ.

ವಕೀಲ ಸಂದೀಪ್‌ ಪಾಟೀಲ್‌ ಮೂಲಕ ಎಂ ಪಿ ರೇಣುಕಾಚಾರ್ಯ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ಬೆಂಗಳೂರಿನ 20ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ನಿಂಗೌಡ ಬಿ ಪಾಟೀಲ್‌ ಅವರು ಮಧ್ಯಂತರ ಪ್ರತಿಬಂಧಕಾದೇಶ ಹೊರಡಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 4ಕ್ಕೆ ಮುಂದೂಡಿದ್ದಾರೆ.

ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್‌ ಮಾಧ್ಯಮ ಸೇರಿದಂತೆ 72 ಸ್ಥಳೀಯ, ರಾಷ್ಟ್ರೀಯ ಮತ್ತು ಸಾಮಾಜಿಕ ಮಾಧ್ಯಮಗಳನ್ನು ರೇಣುಕಾಚಾರ್ಯ ಅವರ ಮನವಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.

“ಫಿರ್ಯಾದುದಾರರನ್ನು (ಎಂ ಪಿ ರೇಣುಕಾಚಾರ್ಯ) ನಕಾರಾತ್ಮಕವಾಗಿ ಅವರ ಘನತೆಗೆ ಚ್ಯುತಿಯಾಗುವ ರೀತಿಯಲ್ಲಿ ಅಥವಾ ಅವರ ವಿರುದ್ಧ ವ್ಯಂಗ್ಯದ ಭಾವನೆ ಉಂಟು ಮಾಡುವ ವಿಡಿಯೊ ಅಥವಾ ಚಿತ್ರಗಳನ್ನು, ಆರೋಪಿಸಲಾದ ಸಿ ಡಿ ಅಥವಾ ಹೇಳಿಕೆ ಅಥವಾ ಅಂಶಗಳನ್ನು ಪ್ರಕಟ/ಪ್ರಸಾರ/ಹಂಚಿಕೆ ಮಾಡದಂತೆ ಪ್ರತಿವಾದಿಗಳು ಅಥವಾ ಅವರ ಪರವಾಗಿ ಯಾರೂ ಅದನ್ನು ಮಾಡದಂತೆ ಮುಂದಿನ ದಿನಾಂಕದವರೆಗೆ ಮಧ್ಯಂತರ ಪ್ರತಿಬಂಧಕಾದೇಶ ಹೊರಡಿಸಲಾಗಿದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ರೇಣುಕಾಚಾರ್ಯ ಪರ ವಕೀಲರು ಮನವಿಯಲ್ಲಿ “ಜುಲೈ 21ರಂದು ಕೆಲವು ಮಾಧ್ಯಮ ಸಂಸ್ಥೆಗಳು ಸಿ ಡಿ/ ಅಶ್ಲೀಲ ಚಿತ್ರಗಳನ್ನು ಒಳಗೊಂಡ ಸುದ್ದಿಯನ್ನು ತಮ್ಮ ವೇದಿಕೆಯಲ್ಲಿ ರೇಣುಕಾಚಾರ್ಯ ಅವರ ಹೆಸರು ತಳುಕು ಹಾಕಿ ಪ್ರಕಟ/ಪ್ರಸಾರ ಮಾಡಿವೆ. ಈ ಮೂಲಕ ದಶಕಗಳ ಕಾಲ ಅವರು ಶ್ರಮವಹಿಸಿ ಕಟ್ಟಿಕೊಂಡಿರುವ ಸಾರ್ವಜನಿಕ ಬದುಕಿಗೆ ಧಕ್ಕೆ ಉಂಟು ಮಾಡುವ ಯತ್ನ ಮಾಡಲಾಗುತ್ತಿದೆ. ಇಂಥ ಮಾಹಿತಿಯನ್ನು ಪ್ರಸಾರ/ಪ್ರಕಟ ಮಾಡಲು ಮಾಧ್ಯಮಗಳಿಗೆ ಅವಕಾಶ ಮಾಡಿಕೊಟ್ಟರೆ ಅವರ ಘನತೆ ಮತ್ತು ವರ್ಚಸ್ಸಿಗೆ ಚ್ಯುತಿ ಉಂಟಾಗಲಿದೆ. ಹೀಗಾಗಿ, ಅವರ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಸಿ ಡಿ ಇತ್ಯಾದಿಯ ಮೂಲಕ ಯಾವುದೇ ಸುದ್ದಿ ಪ್ರಸಾರ/ಪ್ರಕಟ ಮಾಡುವ ಹಕ್ಕು ಹೊಂದಿಲ್ಲ” ಎಂದು ವಾದಿಸಿದ್ದರು.

“ಕಾನೂನಿನ ವ್ಯಾಪ್ತಿಗೆ ಒಳಪಟ್ಟಿರುವ ಮಾಧ್ಯಮ ಸಂಸ್ಥೆಗಳು ಟಿಆರ್‌ಪಿ ಮತ್ತು ತಮ್ಮ ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳುವುದಕ್ಕಾಗಿ ತಮ್ಮೆಲ್ಲಾ ಇತಿಮಿತಿಗಳನ್ನು ದಾಟಿ ಸಾರ್ವಜನಿಕ ಬದುಕಿನಲ್ಲಿರುವವರ ಘನತೆ ಮತ್ತು ವರ್ಚಸ್ಸನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿವೆ. ಈ ಮೂಲಕ ಅವರಿಗೆ ತುಂಬಲಾರದ ನಷ್ಟ ಉಂಟು ಮಾಡುತ್ತಿವೆ. ಸದರಿ ಪ್ರಕರಣ ಇತ್ಯರ್ಥವಾಗಲು ಕಾಲಾವಕಾಶ ಬೇಕಾಗಿರುವುದರಿಂದ ಮಧ್ಯಂತರ ಪರಿಹಾರವಾಗಿ ಪ್ರತಿಬಂಧಕಾದೇಶ ಹೊರಡಿಸಬೇಕು” ಎಂದು ಕೋರಿದ್ದರು.

ನಿಕಟ ಪೂರ್ವ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ‌ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತಲ್ಲದೇ ಅವರ ತಲೆದಂಡಕ್ಕೆ ಕಾರಣವಾಗಿತ್ತು. ಉದ್ಯೋಗ ಕೊಡಿಸುವ ಆಮಿಷವೊಡ್ಡಿ ತನ್ನನ್ನು ರಮೇಶ ಜಾರಕಿಹೊಳಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮನವಿಗಳು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಒಳಪಟ್ಟಿವೆ.

ರಮೇಶ ಜಾರಕಿಹೊಳಿ ಸಿ ಡಿ ಪ್ರಕರಣ ಸ್ಫೋಟಗೊಳ್ಳುತ್ತಿದ್ದಂತೆ ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿದ್ದ ಹಾಗೂ ಹಿಂದಿನ ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಾ. ಡಿ ಸುಧಾಕರ್‌, ಬೈರತಿ ಬಸವರಾಜ್‌, ಎಸ್‌ ಟಿ ಸೋಮಶೇಖರ್‌, ಕೆ ಸಿ ನಾರಾಯಣಗೌಡ, ಶಿವರಾಮ್‌ ಹೆಬ್ಬಾರ್‌ ಮತ್ತು ಬಿ ಸಿ ಪಾಟೀಲ್‌ ಅವರು ತಮ್ಮ ವಿರುದ್ಧ ಯಾವುದೇ ತೆರನಾದ ಮಾನಹಾನಿಕಾರ ಸುದ್ದಿ ಪ್ರಕಟಿಸಿದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಫಿರ್ಯಾದುದಾರರ ಕೋರಿಯನ್ನು ನ್ಯಾಯಾಲಯ ಮನ್ನಿಸಿತ್ತು. ಆದರೆ, ಸಂಪುಟ ದರ್ಜೆ ಸಚಿವರ ಕೋರಿಕೆಯು ದೇಶಾದ್ಯಂತ ಚರ್ಚೆಗೆ ನಾಂದಿ ಹಾಡಿತ್ತು.

ಈ ಮಧ್ಯೆ, ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ ಅವರು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರಿ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರು ತಮ್ಮ ತೇಜೋವಧೆಯಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮತ್ತೊಂದು ಕಡೆ ಬೆಡ್‌ ಬ್ಲಾಕಿಂಗ್‌ ಹಗರಣದಲ್ಲಿ ತಮ್ಮ ಹೆಸರನ್ನು ವಿನಾಕಾರಣ ತಗುಲು ಹಾಕಲಾಗುತ್ತಿದೆ. ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸಬಾರದು ಎಂದು ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಅವರು ಈಚೆಗೆ 40ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದಿಂದ ಮಧ್ಯಂತರ ಪ್ರತಿಬಂಧಕಾಜ್ಞೆ ಪಡೆದುಕೊಂಡಿದ್ದಾರೆ.

MP Renukacharya.php.pdf
Preview