Bombay High Court Nagpur bench, Justice Pushpa Ganediwala
Bombay High Court Nagpur bench, Justice Pushpa Ganediwala  
ಸುದ್ದಿಗಳು

ದೊರೆಯದ ಪಿಂಚಣಿ: ಸ್ವಯಂ ನಿವೃತ್ತಿ ಘೋಷಿಸಿದ್ದ ನ್ಯಾ ಪುಷ್ಪಾ ಗನೇದಿವಾಲಾ ಬಾಂಬೆ ಹೈಕೋರ್ಟ್‌ಗೆ ಅರ್ಜಿ

Bar & Bench

ಚರ್ಮದಿಂದ ಚರ್ಮ ಸ್ಪರ್ಶಿಸಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂಬ‌ ವಿವಾದಾತ್ಮಕ ತೀರ್ಪು ನೀಡಿ 2021ರ ಜನವರಿಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ ಹಾಗೂ ಆನಂತರ ಸ್ವಯಂ ಪ್ರೇರಿತವಾಗಿ ನಿವೃತ್ತಿ ಪಡೆದಿದ್ದ ಬಾಂಬೆ ಹೈಕೋರ್ಟ್‌ನ ಅಂದಿನ ನ್ಯಾಯಮೂರ್ತಿ ಪುಷ್ಪಾ ವಿ ಗನೇದಿವಾಲಾ ಅವರು ಇದೀಗ ತಮಗೆ ನಿವೃತ್ತಿ ನಂತರದ ಪಿಂಚಣಿ ದೊರೆಯುತ್ತಿಲ್ಲ ಎಂದು ದೂರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಅನ್ವಯವಾಗುವ ಪಿಂಚಣಿ ಸೌಲಭ್ಯಗಳನ್ನು ತನಗೆ ನೀಡುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅವರು ಬಾಂಬೆ ಹೈಕೋರ್ಟ್‌ ನಾಗಪುರ ಪೀಠದ ಕದ ತಟ್ಟಿದ್ದಾರೆ.

ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ತಾನು ಫೆಬ್ರವರಿ 2022ರಲ್ಲಿ ರಾಜೀನಾಮೆ ನೀಡಿದ್ದೆ. ಆ ಬಳಿಕ ಯಾವುದೇ ಪಿಂಚಣಿ ಸೌಲಭ್ಯ ದೊರೆಯುತ್ತಿಲ್ಲ ಎಂದು ತಿಳಿಸಿ ಹೈಕೋರ್ಟ್‌ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಪಿಂಚಣಿ ಪಡೆಯುವ ಅರ್ಹತೆ ಇಲ್ಲ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಮಾಹಿತಿ ನೀಡಿದ್ದಾರೆ ಎಂದು ಪ್ರಸ್ತುತ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಪುಷ್ಪಾ ಅವರು ಮನವಿಯಲ್ಲಿ ವಿವರಿಸಿದ್ದಾರೆ.

ನ್ಯಾಯವಾದಿ ಅಕ್ಷಯ್ ನಾಯಕ್ ಅವರ ಮೂಲಕ ಜುಲೈ 19ರಂದು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ರಿಜಿಸ್ಟ್ರಾರ್‌ ನೀಡಿರುವ ಮಾಹಿತಿಯನ್ನು ಪ್ರಶ್ನಿಸಿದ್ದಾರೆ. ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.

ಪುಷ್ಪಾ ಅವರು 2007ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ನ್ಯಾಯಾಂಗ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಫೆಬ್ರವರಿ 8, 2019 ರಂದು ಎರಡು ವರ್ಷಗಳ ಅವಧಿಗೆ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರನ್ನು ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಜನವರಿ 12, 2021ರಂದು, ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ ಅವರು ನೀಡಿದ ಕೆಲ ವಿವಾದಾತ್ಮಕ ತೀರ್ಪುಗಳ ಬಳಿಕ ಕೊಲಿಜಿಯಂ ಆ ನಿರ್ಧಾರ ಹಿಂಪಡೆಯಿತು.

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಪೋಕ್ಸೊ ಕಾಯಿದೆಯಡಿ ಆರೋಪ ಎದುರಿಸುತ್ತಿದ್ದವರನ್ನು ಒಂದೇ ವಾರದ ಅವಧಿಯಲ್ಲಿ ಅವರು ಖುಲಾಸೆಗೊಳಿಸಿದ್ದರು. ಚರ್ಮದಿಂದ ಚರ್ಮ ಸ್ಪರ್ಶಿಸಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂಬ‌ ವಿವಾದಾತ್ಮಕ ತೀರ್ಪು ನೀಡಿದ ವಾರವೇ ಅವರು ಇನ್ನೆರಡು ವಿವಾದಾತ್ಮಕ ತೀರ್ಪುಗಳ ಮೂಲಕವೂ ಸುದ್ದಿಯಲ್ಲಿದ್ದರು.

ಜನವರಿ 14, 2021 ರಂದು ನೀಡಲಾದ ತೀರ್ಪಿನಲ್ಲಿ, ಅತ್ಯಾಚಾರ ಎಸಗಿದ್ದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ವಾದವನ್ನು ಬೆಂಬಲಿಸುವ ಅಂಶಗಳಿಲ್ಲ ಎಂದ ಅವರು ಆರೋಪಿ ವಿರುದ್ಧದ ಆದೇಶ ರದ್ದುಗೊಳಿಸಿದ್ದರು (ಜಗೇಶ್ವರ್ ವಾಸುದೇವ್‌ ಕಾವ್ಲೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ).

ಮರುದಿನ ಅಂದರೆ ಜನವರಿ 15, 2021ರಂದು ನೀಡಿದ ಪ್ರತ್ಯೇಕ ತೀರ್ಪೊಂದರಲ್ಲಿ ಅಪ್ರಾಪ್ತೆಯ ಕೈಹಿಡಿದಿರುವುದು ಅಥವಾ ನಿರ್ದಿಷ್ಟ ಸಮಯದಲ್ಲಿ ಆರೋಪಿಯು ಪ್ಯಾಂಟ್‌ ಜಿಪ್‌ ತೆರೆದುಕೊಂಡಿರುವುದು ಪೋಕ್ಸೊ ಕಾಯಿದೆ ಸೆಕ್ಷನ್‌ 7ರ ಅಡಿ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದಿದ್ದರು (ಲಿಬ್ನುಸ್‌ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ).

ಮೂರನೇ ತೀರ್ಪು ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದ ʼಆರೋಪಿಯ ಚರ್ಮ ಸಂತ್ರಸ್ತೆಯ ಚರ್ಮವನ್ನು ಸ್ಪರ್ಶಿಸಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ʼ ಎಂಬುದಾಗಿತ್ತು. ತೀರ್ಪು ಬಂದದ್ದು ಜ. 19ರಂದು. “ಅಪ್ರಾಪ್ತೆಯ ಸ್ತನವನ್ನು ಬಟ್ಟೆ ತೆಗೆಯದೆ ಸ್ಪರ್ಶಿಸಿದರೆ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 7ರ ಅಡಿಯಲ್ಲಿ ʼಲೈಂಗಿಕ ದೌರ್ಜನ್ಯʼ ಆಗುವುದಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದರು. (ಸತೀಶ್‌ ರಗ್ಡೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ). ಕಡೆಗೆ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತು.

ವಿವಾದಾತ್ಮಕ ತೀರ್ಪುಗಳ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಮೂರ್ತಿಯಾಗಿ ಕಾಯಂಗೊಳಿಸದಿರುವ ಮತ್ತು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಇನ್ನೂ ಒಂದು ವರ್ಷ ಅಧಿಕಾರ ವಿಸ್ತರಿಸದಿರಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ನಿರ್ಧಾರಿಸಿತ್ತು. ಈ ಶಿಫಾರಸನ್ನು ಫೆಬ್ರವರಿ 21, 2021ರಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಅಂಗೀಕರಿಸಿತ್ತು.  

ಒಂದು ವರ್ಷದ ನಂತರ, ತಮ್ಮ ಹುದ್ದೆಯನ್ನು ಕೊಲಿಜಿಯಂ ಕಾಯಂಗೊಳಿಸದ ಅಥವಾ ಹೆಚ್ಚುವರಿ ನ್ಯಾ ಯಮೂರ್ತಿಯಾಗಿ ಅಧಿಕಾರಾವಧಿ ವಿಸ್ತರಿಸದ ಹಿನ್ನೆಲೆಯಲ್ಲಿ ಅವರು ಫೆಬ್ರವರಿ 2022ರಲ್ಲಿ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಸಲ್ಲಿಸಿದರು.

ನಿವೃತ್ತಿ ಹೊಂದಿರಲಿ ಇಲ್ಲವೇ ಸ್ವಯಂ ನಿವೃತ್ತಿ ಪಡೆದಿರಲಿ ತಾವು ಪಿಂಚಣಿಗೆ ಅರ್ಹರು ತಾನು 3 ವರ್ಷಗಳ ಕಾಲ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 11 ವರ್ಷ ಮತ್ತು 3 ತಿಂಗಳುಗಳಿಗಿಂತ ಹೆಚ್ಚು ಕಾಲ ಜಿಲ್ಲಾ ನ್ಯಾಯಾಧೀಶೆಯಾಗಿ ಕೆಲಸ ಮಾಡಿದ್ದೇನೆ ಎಂದು ಪುಷ್ಪಾ ವಾದಿಸಿದ್ದಾರೆ.

ಪುಷ್ಪಾ ಅವರು ಪಿಂಚಣಿಗಾಗಿ ಹೈಕೋರ್ಟ್‌ ಆಡಳಿತಾಂಗಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಹಾರಾಷ್ಟ್ರದ ಅಂದಿನ ಅಡ್ವೊಕೇಟ್‌ ಜನರಲ್‌ ಅಶುತೋಷ್‌ ಕುಂಭಕೋಣಿ ಅವರು  ಪುಷ್ಪಾ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನಿವೃತ್ತಿಯಾಗದೇ ಇರುವುದರಿಂದ ಅವರು ಅದೇ ಶ್ರೇಣಿಯ ಪಿಂಚಣಿ ಪಡೆಯಲು ಅರ್ಹರಲ್ಲ ಎಂಬ ಅಭಿಪ್ರಾಯ ನೀಡಿದ್ದರು.

ಪುಷ್ಪಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ರಿಜಿಸ್ಟ್ರಾರ್‌ ಜನರಲ್‌ ಮೂಲಕ ಹೈಕೋರ್ಟ್‌, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಹಾಗೂ ರಾಜ್ಯ ಕಾನೂನು ಮತ್ತು ನ್ಯಾಯಾಂಗ ಇಲಾಖೆಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.