ಸುದ್ದಿಗಳು

ಸಂಸತ್ತಿನ ಹೆಚ್ಚುವರಿ ಅಧಿಕಾರ ಬಳಸಿ ಮತದಾನದ ಹಕ್ಕನ್ನು ತಳ್ಳಿಹಾಕುವಂತಿಲ್ಲ: ಸಿಇಸಿ ಪ್ರಕರಣದಲ್ಲಿ ನ್ಯಾ. ಜೋಸೆಫ್

Bar & Bench

ಸಂವಿಧಾನದ 326 ನೇ ವಿಧಿಯು ನಾಗರಿಕರಿಗೆ ಮತದಾನದ ಹಕ್ಕನ್ನು ನೀಡಿದ್ದು ಅದನ್ನು ಸಂಸತ್ತಿನ ಹೆಚ್ಚುವರಿ ಕಾನೂನು ರಚನೆಯ ಅಧಿಕಾರ ಬಳಸಿ ತಳ್ಳಿಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಮತದಾನದ ಹಕ್ಕನ್ನು ಸಾಂವಿಧಾನಿಕ ಹಕ್ಕು ಎನ್ನುವುದಕ್ಕಿಂತ ಶಾಸನಬದ್ಧ ಹಕ್ಕು ಎಂದು ಚುನಾವಣಾ ಆಯೋಗದ ಪರ ವಕೀಲರು ವಾದಿಸಿದಾಗ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಸಿ ಟಿ ರವಿಕುಮಾರ್ ಹಾಗೂ ಹೃಷಿಕೇಶ್ ರಾಯ್ ಅವರಿದ್ದ ಸಾಂವಿಧಾನಿಕ ಪೀಠ ಈ ಹೇಳಿಕೆ ನೀಡಿತು.

ಸಂವಿಧಾನದ 326ನೇ ವಿಧಿ ಓದುವಂತೆ ವಕೀಲರಿಗೆ ಸೂಚಿಸಿದ ನ್ಯಾ. ಜೋಸೆಫ್‌ ಬಳಿಕ “ಸಂಸತ್ತಿನ ಶಾಸನಬದ್ಧ ಅಧಿಕಾರ ಸಾಂವಿಧಾನಿಕ ಅಧಿಕಾರವನ್ನು ಅತಿಕ್ರಮಿಸುತ್ತದೆ ಎಂದು ನೀವು ಹೇಳಲು ಹೋದರೆ… ಸಂವಿಧಾನ ಹಕ್ಕೊಂದನ್ನು ಕಲ್ಪಿಸಿದ್ದು ಅದು ಮೂಲಭೂತ ಸಂಗತಿಯಾಗಿದೆ…. ಸಂಸತ್ತು ರೂಪಿಸಿರುವ ಹೆಚ್ಚುವರಿ ಕಾನೂನು ವಾಸ್ತವವಾಗಿ ಅದನ್ನು [ಮತದಾನದ ಹಕ್ಕನ್ನು] ಆಮೂಲಾಗ್ರವಾಗಿ ನೀಡಲು ಉದ್ದೇಶಿಸಿದೆ… ಈಗ ಸಂವಿಧಾನದ 324ನೇ ವಿಧಿಯಡಿ ಶಾಸನ ರೂಪಿಸುವವರು ಕಾನೂನು ಮಾಡುವುದಿಲ್ಲ ಎಂದರೆ ನಾವು ಖಂಡಿತಾ ಆದೇಶ ನೀಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಸಂವಿಧಾನದ 326ನೇ ವಿಧಿಯಡಿ ಕೆಲ ಮತದಾರರನ್ನು ಅನರ್ಹಗೊಳಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಕಾನೂನು ರಚನೆಯ ಅಧಿಕಾರವನ್ನು ಉಲ್ಲೇಖಿಸಲಾಗುತ್ತಿದೆ ಎಂದು ನ್ಯಾ. ಜೋಸೆಫ್‌ ತಿಳಿಸಿದರು.

ಸಂವಿಧಾನದ 342 (2) ನೇ ವಿಧಿಯನ್ನು ಉಲ್ಲಂಘಿಸಿ ನೇಮಕಾತಿ ಮಾಡುವ ಅಧಿಕಾರ ಕಾರ್ಯಾಂಗಕ್ಕೆ ಇದೆ ಎಂಬುದನ್ನು ಆಧರಿಸಿ ಭಾರತ ಚುನಾವಣಾ ಆಯೋಗಕ್ಕೆ (ಇಸಿಐ) ಸದಸ್ಯರನ್ನು ನೇಮಿಸುವ ಈಗಿನ ವ್ಯವಸ್ಥೆಯನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಕಳೆದ ಶುಕ್ರವಾರವಷ್ಟೇ ನಾಗರಿಕ ಸೇವೆಯಿಂದ ಸ್ವಯಂ ನಿವೃತ್ತರಾದ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವ ಕುರಿತಾದ ಕಡತ ಸಲ್ಲಿಸುವಂತೆ ಪೀಠ ನಿನ್ನೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇಂದು ವಿಚಾರಣೆ ಮುಂದುವರೆಯುವ ಸಾಧ್ಯತೆ ಇದ್ದು ತೀರ್ಪನ್ನು ಕಾಯ್ದಿರಿಸುವ ನಿರೀಕ್ಷೆ ಇದೆ.