ಮಾತೆ ವೇಲಾಂಕಣಿಗೆ ಸಮರ್ಪಿತವಾದ ದೇವಾಲಯವನ್ನು ರಸ್ತೆ ಬದಿ ಸ್ಥಾಪಿಸಲಾಗಿದೆ ಎಂದಿರುವ ಮದ್ರಾಸ್ ಹೈಕೋರ್ಟ್ ಈ ಕುರಿತಂತೆ ಬೃಹತ್ ಚೆನ್ನೈ ನಗರ ಪಾಲಿಕೆ ತ್ವರಿತವಾಗಿ ವಿಚಾರಣೆ ಮುಕ್ತಾಯಗೊಳಿಸಬೇಕು ಎಂದು ನಿರ್ದೇಶಿಸಿದೆ [ಎ ಶರತ್ ಮತ್ತು ಕಮಿಷನರ್ ನಡುವಣ ಪ್ರಕರಣ].
ಸಾರ್ವಜನಿಕ ರಸ್ತೆಯ ಮೇಲೆ ಯಾವುದೇ ಅನಧಿಕೃತ ನಿರ್ಮಾಣ ಅದು ಇರುವ ಪ್ರತಿಕ್ಷಣವೂ ಹೊಸ ಕಾನೂನು ಕ್ರಮಕ್ಕೆ ಆಸ್ಪದ ಒದಗಿಸುತ್ತದೆ ಎಂದು ನ್ಯಾ. ವಿ ಲಕ್ಷ್ಮೀನಾರಾಯಣನ್ ತಿಳಿಸಿದ್ದಾರೆ.
ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಕಾಯಿದೆ ಸೆಕ್ಷನ್ 128ರ ಅಡಿಯಲ್ಲಿ ಇಂತಹ ಅತಿಕ್ರಮಣಗಳನ್ನು ತೆಗೆದುಹಾಕುವ ಕಾನೂನುಬಾಧ್ಯತೆ ಪಾಲಿಕೆ ಅಧಿಕಾರಿಗಳ ಮೇಲಿದೆ ಎಂದು ನ್ಯಾಯಾಲಯ ಹೇಳಿದೆ.
“ರಸ್ತೆ ಅಥವಾ ಬೀದಿ ಯಾವುದೇ ಧಾರ್ಮಿಕ ಸ್ವರೂಪ ಹೊಂದಿಲ್ಲ. ಅದರ ಮೇಲಿನ ನಿರ್ಮಾಣ ಧಾರ್ಮಿಕವಾಗಿರಲಿ ಅಥವಾ ಧರ್ಮೇತರವೇ ಆಗಿರಲಿ, ಅದು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸ್ಥಾಪಿತವಾಗಿದ್ದರೆ, ಆಯುಕ್ತರು ಅದನ್ನು ಕಾನೂನಾತ್ಮಕವಾಗಿ ತೆಗೆದುಹಾಕಬೇಕಾಗುತ್ತದೆ” ಎಂದು ಪೀಠ ನುಡಿದಿದೆ.
ಅರ್ಜಿದಾರ ಎ ಶರತ್ ನವೆಂಬರ್ 2024 ರಲ್ಲಿ ವಸತಿ ಕಟ್ದಡ ಖರೀದಿಸಿದ್ದರು. ಆ ವೇಳೆ ವಸತಿ ಕಟ್ಟಡೆ ಪ್ರವೇಶಿಸುವ ಸ್ಥಳದಲ್ಲಿದ್ದ ನಿರ್ಮಿತಿ ತಾತ್ಕಾಲಿಕವಾದುದ್ದು ಎಂದು ಅವರಿಗೆ ತಿಳಿಸಲಾಗಿತ್ತು. ಅದರಲ್ಲಿ ಮಾತೆ ಮೇರಿ ಪ್ರತಿಮೆ ಸ್ಥಾಪಿಸಿ ಅಂಪ್ಲಿಫೈರ್ ಅಳವಡಿಸಲಾದ ಕಂಬವನ್ನು ಹುಗಿಯಲಾಗಿತ್ತು. ಪಕ್ಕದ ಮನೆಯಿಂದ ವಿದ್ಯುತ್ ಸಂಪರ್ಕವೂ ಪಡೆಯಲಾಗಿತ್ತು.
ಈ ನಿರ್ಮಿತಿಯಿಂದ ಮನೆ ಪ್ರವೇಶಿಸುವುದಕ್ಕೆ ಅಡ್ಡಿ ಉಂಟಾಗಿದ್ದು ಪಾದಚಾರಿ ಮಾರ್ಗದಲ್ಲಿ ಜನರ ಓಡಾಟಕ್ಕೂ ತೊಂದೆರ ಉಂಟಾಗುತ್ತಿದೆ ಎಂದು ಶರತ್ ಅವರು ಪಾಲಿಕೆಗೆ ದೂರು ನೀಡಿದ್ದರು. ಪಾಲಿಕೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಸ್ಥಳ ಪರಿಶೀಲನೆ ನಡೆಸಿದ ಪಾಲಿಕೆ ಈ ಧಾರ್ಮಿಕ ಸ್ಥಲ ಸಾರ್ವಜನಿಕ ರಸ್ತೆಯ ಮೇಲೆ ಇರುವುದಾಗಿ ದೃಢಪಡಿಸಿತು.
ತಾನು 1995 ರಿಂದ ಧಾರ್ಮಿಕ ಸ್ಥಳ ಸ್ಥಾಪಿಸಿ ನಿರ್ವಹಿಸುತ್ತಿದ್ದೇನೆ ಎಂದು ಆರ್ ಡೇನಿಯಲ್ ಎಂಬುವವರು ವಾದಿಸಿದರು. ಇದು ಸ್ಥಳೀಯರ ಭಾವನಾತ್ಮಕ ಶಕ್ತಿ ಕೇಂದ್ರವಾಗಿದ್ದು ಅದನ್ನು ತೆರವುಗೊಳಿಸಿದರೆ ಸೌಹಾರ್ದತೆಗೆ ಧಕ್ಕೆ ಒದಗಬಹುದು ಎಂದರು.
ಆದರೆ ಈ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಅನಧಿಕೃತ ನಿರ್ಮಿತಿ ಎಷ್ಟೇ ವರ್ಷ ಹಳೆಯದಾಗಿದ್ದರೂ ಅದಕ್ಕೆ ಕಾನೂನು ಮಾನ್ಯತೆ ಇರುವುದಿಲ್ಲ. ಸಾರ್ವಜನಿಕ ರಸ್ತೆಯ ಅತಿಕ್ರಮಣ ಸದಾ ಅನಧಿಕೃತವೇ ಎಂದಿತು.
ಅಂತಿಮವಾಗಿ ಶರತ್ ಅವರ ರಿಟ್ ಅರ್ಜಿ ಅಂಗೀಕರಿಸಿದ ಅದು ಪಾಲಿಕೆ ಅಧಿಕಾರಿಗಳು ಈ ಕುರಿತು ಫೆಬ್ರವರಿ 10 ರೊಳಗೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚಿಸಿದೆ. ನ್ಯಾಯಾಲಯದ ಆದೇಶ ಪಾಲನೆಯಾಗಿದೆಯೇ ಎಂಬುದರ ಕುರಿತು ಫೆಬ್ರವರಿ 11ರಂದು ವಿಚಾರಣೆ ನಡೆಯಲಿದೆ.