Election commission of India and SC 
ಸುದ್ದಿಗಳು

ದುರ್ಬಲ ವರ್ಗಕ್ಕೆ ಸಹಾಯಧನ ನೀಡುವುದು ಆಡಳಿತ ಪಕ್ಷಗಳ ಕರ್ತವ್ಯ, ಅದು ಉಚಿತ ಕೊಡುಗೆಯಲ್ಲ: ಸುಪ್ರೀಂಗೆ ಕಾಂಗ್ರೆಸ್ ನಾಯಕಿ

ಉಚಿತ ಕೊಡುಗೆ ವಿರೋಧಿಸಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅರ್ಜಿ ಸಲ್ಲಿಸಲಾಗಿದೆ.

Bar & Bench

ಸಮಾಜದ ದುರ್ಬಲ ವರ್ಗದವರನ್ನು ಮೇಲೆತ್ತುವುದು ಸರ್ಕಾರದ ಕರ್ತವ್ಯ ಮತ್ತು ಯೋಜನೆಗಳನ್ನು ರೂಪಿಸುವುದು, ಅದಕ್ಕೆ ಸಹಾಯಧನ ನೀಡುವುದು ಸರ್ಕಾರ ನಡೆಸುವ ಆಡಳಿತ ಪಕ್ಷಗಳ ಕರ್ತವ್ಯವಾಗಿದೆ ಎಂದು ಮಧ್ಯಪ್ರದೇಶ ಮಹಿಳಾ ಕಾಂಗ್ರೆಸ್ ನಾಯಕಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ನಾಗರಿಕರಿಗೆ ಇಂತಹ ಸಬ್ಸಿಡಿ, ರಿಯಾಯಿತಿಗಳನ್ನು ನೀಡುವುದು ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಸಾಂವಿಧಾನಿಕ ಆದೇಶದ ಪಾಲನೆಯಾಗುತ್ತದೆ ಎಂದು ಡಾ.ಜಯಾ ಠಾಕೂರ್, ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ಉಚಿತ ಕೊಡುಗೆ ವಿರೋಧಿಸಿ ಬಿಜೆಪಿ ನಾಯಕ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲಾಗಿದೆ.

ಸಂವಿಧಾನದ ತತ್ವಗಳ ಪ್ರಕಾರ ದುರ್ಬಲ ವರ್ಗದ ಕಲ್ಯಾಣ ಮತ್ತು ಉನ್ನತಿಗಾಗಿ ನೀತಿಗಳನ್ನು ರೂಪಿಸಲು ಆಡಳಿತ ಪಕ್ಷಗಳು ಬದ್ಧವಾಗಿರಬೇಕು. ಅದರ ಪ್ರಕಾರ ಸಬ್ಸಿಡಿಗಳನ್ನು ನೀಡಲಾಗುತ್ತಿದೆ. ಇದನ್ನು ಉಚಿತ ಕೊಡುಗೆ ಎಂದು ಕರೆಯಬಾರದು ಎಂದು ತಿಳಿಸಲಾಗಿದೆ.

ಎಸ್ ಸುಬ್ರಮಣ್ಯಂ ಬಾಲಾಜಿ ಮತ್ತು ತಮಿಳುನಾಡು ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ ಉಚಿತ ಕೊಡುಗೆಯ ವಿಚಾರವನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಇತ್ಯರ್ಥಪಡಿಸಿದೆ. ಚುನಾವಣಾ ಪ್ರಣಾಳಿಕೆಗಳಲ್ಲಿ ರಾಜಕೀಯ ಪಕ್ಷಗಳು ನೀಡುವ ಭರವಸೆಗಳು ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 123ರ ಪ್ರಕಾರ ಭ್ರಷ್ಟ ಆಚರಣೆಗಳಾಗುವುದಿಲ್ಲ ಎಂದು ಆ ತೀರ್ಪಿನಲ್ಲಿ ಪರಿಗಣಿಸಲಾಗಿದೆ ಎಂಬುದಾಗಿ ಜಯಾ ವಿವರಿಸಿದ್ದಾರೆ.