Sabarimala Temple 
ಸುದ್ದಿಗಳು

ಶಬರಿಮಲೆ ಚಿನ್ನ ಕಳವು ಪ್ರಕರಣ: ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಗೆ ಕೇರಳ ನ್ಯಾಯಾಲಯ ಜಾಮೀನು

ಕಾನೂನಿನ ಪ್ರಕಾರ ನಿಗದಿತ 90 ದಿನಗಳ ಅವಧಿಯೊಳಗೆ ವಿಶೇಷ ತನಿಖಾ ತಂಡ ಆರೋಪಪಟ್ಟಿ ಸಲ್ಲಿಸಲು ವಿಫಲವಾದುದನ್ನು ಗಮನಿಸಿದ ನ್ಯಾಯಾಲಯ, ಉನ್ನಿಕೃಷ್ಣನ್ ಪೊಟ್ಟಿ ಅವರಿಗೆ ಶಾಸನಬದ್ಧ ಜಾಮೀನು ನೀಡಿತು.

Bar & Bench

ಶಬರಿಮಲೆ ಚಿನ್ನ ದುರುಪಯೋಗ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಅವರಿಗೆ ಕೇರಳದ ಕೊಲ್ಲಂನಲ್ಲಿರುವ ವಿಚಕ್ಷಣಾ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.

ಕಾನೂನಿನ ಪ್ರಕಾರ ನಿಗದಿತ 90 ದಿನಗಳ ಅವಧಿಯೊಳಗೆ ವಿಶೇಷ ತನಿಖಾ ತಂಡ ಆರೋಪಪಟ್ಟಿ ಸಲ್ಲಿಸಲು ವಿಫಲವಾದುದನ್ನು ಗಮನಿಸಿದ ವಿಚಾರಣಾ ಆಯುಕ್ತ ಮತ್ತು ವಿಶೇಷ ನ್ಯಾಯಾಧೀಶ ಮೋಹಿತ್‌ ಸಿ ಎಸ್‌ ಹೀಗಾಗಿ ಪೊಟ್ಟಿ ಅವರಿಗೆ ಕಾನೂನುಬದ್ಧ ಜಾಮೀನು ಪಡೆಯುವ ಹಕ್ಕು ದೊರೆತಿದೆ ಎಂದು ತಿಳಿಸಿದರು.

ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಬಾಗಿಲುಗಳ ಚೌಕಟ್ಟಿಗೆ ಅಳವಡಿಸಿದ್ದ ಚಿನ್ನದ ರೇಕು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಇದಕ್ಕೂ ಮುನ್ನ, ದ್ವಾರಪಾಲಕ ಮೂರ್ತಿಗಳಿಂದ ಚಿನ್ನ ದುರುಪಯೋಗಗೊಂಡ ಪ್ರಕರಣದಲ್ಲಿಯೂ ಪೊಟ್ಟಿ ಇದೇ ರೀತಿಯ ಕಾನೂನುಬದ್ಧ ಜಾಮೀನು ಪಡೆದಿದ್ದರು. ಅಕ್ಟೋಬರ್ 2025ರಲ್ಲಿ ಬಂಧಿತರಾಗಿದ್ದ ಪೊಟ್ಟಿ ಅವರನ್ನು ಇದೀಗ ಬಂಧನದಿಂದ ಬಿಡುಗಡೆ ಮಾಡಲಾಗುತ್ತಿದೆ.

ತಿರುವಾಂಕೂರು ದೇವಸ್ವಂ ಮಂಡಳಿ ಅಧಿಕಾರಿಗಳ ಅಕ್ರಮದಿಂದಾಗಿ ಚಿನ್ನದ ವಸ್ತುಗಳ ದುರಸ್ತಿ ಕಾರ್ಯ ಪ್ರಾಯೋಜಕತ್ವ ಪೊಟ್ಟಿಗೆ ದೊರೆತಿದ್ದು ಇದರಿಂದಾಗಿ ಆತ 4 ಕಿಲೋಗ್ರಾಂ ಚಿನ್ನ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ದುರಸ್ತಿ ಕಾರ್ಯದ ಬಳಿಕ ಚಿನ್ನದ ಹೊದಿಕೆಗಳ ತೂಕ ಪರಿಶೀಲಿಸುವಾಗ ಹಲವು ಕಿಲೋಗ್ರಾಂ ಚಿನ್ನ ವ್ಯತ್ಯಾಸವಾಗಿರುವುದು ಕಂಡು ಬಂದಿತ್ತು. ನಂತರ ಚಿನ್ನದ ಸ್ವಲ್ಪಪ್ರಮಾಣವನ್ನು ಪೊಟ್ಟಿ ಸಹೋದರಿಯ ಮನೆಯಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಕೇರಳ ಹೈಕೋರ್ಟ್ ಆದೇಶದ ಮೇರೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಪೊಟ್ಟಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ 120B (ಕ್ರಿಮಿನಲ್ ಸಂಚು), 403 (ಅಪ್ರಾಮಾಣಿಕ ಆಸ್ತಿ ದುರುಪಯೋಗ), 406 (ವಿಶ್ವಾಸ ದ್ರೋಹ), 409 (ಸಾರ್ವಜನಿಕ ಸೇವಕರಿಂದ ವಿಶ್ವಾಸ ದ್ರೋಹ), 466 (ನ್ಯಾಯಾಲಯ ಅಥವಾ ಸಾರ್ವಜನಿಕ ದಾಖಲೆಗಳ ನಕಲು), 467 (ಮೌಲ್ಯಯುತ ಭದ್ರತಾ ದಾಖಲೆಗಳ ನಕಲು)ಗಳನ್ನು ಸೆಕ್ಷನ್ 34 (ಸಾಮಾನ್ಯ ಉದ್ದೇಶ) ಜೊತೆಗೆ ಹಾಗೂ ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯಿದೆ 2018ರ ಸೆಕ್ಷನ್ 13(1)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ ವೇಳೆ, ಚಿನ್ನ ದುರುಪಯೋಗಕ್ಕೆ ಸಂಬಂಧಿಸಿದಂತೆ ಹಣಕಾಸು ಅಕ್ರಮ ಪ್ರಕರಣದಲ್ಲಿಯೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.