ಶಬರಿಮಲೆ ಚಿನ್ನ ಕಳವು: ಕರ್ನಾಟಕದ ಆರೋಪಿ ಸೇರಿ ಮೂವರಿಗೆ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್‌

ಕರ್ನಾಟಕ ಮೂಲದ ಆಭರಣ ವ್ಯಾಪಾರಿ ರೊದ್ದಂ ಗೋವರ್ಧನ್, ಟಿಡಿಬಿ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ಹಿರಿಯ ನಾಯಕ ಎ. ಪದ್ಮಕುಮಾರ್ ಹಾಗೂ ಮಾಜಿ ಆಡಳಿತಾಧಿಕಾರಿ ಬಿ ಮುರಾರಿ ಬಾಬು ಅವರಿಗೆ ಜಾಮೀನು ನಿರಾಕರಿಸಲಾಗಿದೆ.
sabarimala temple
sabarimala temple
Published on

ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಆರೋಪಿಗಳಿಗೆ ಕೇರಳ ಹೈಕೋರ್ಟ್ ಬುಧವಾರ ಜಾಮೀನು ನಿರಾಕರಿಸಿದೆ [ರೊದ್ದಂ ಪಾಂಡುರಂಗಯ್ಯ ನಾಗ ಗೋವರ್ಧನ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ ಮತ್ತು ಸಂಬಂಧಿತ ದಾವೆಗಳು].

ಕರ್ನಾಟಕ ಮೂಲದ ಆಭರಣ ವ್ಯಾಪಾರಿ ರೊದ್ದಂ ಗೋವರ್ಧನ್, ಟಿಡಿಬಿ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ಹಿರಿಯ ನಾಯಕ ಎ. ಪದ್ಮಕುಮಾರ್ ಹಾಗೂ ಮಾಜಿ ಆಡಳಿತಾಧಿಕಾರಿ ಬಿ ಮುರಾರಿ ಬಾಬು ಅವರಿಗೆ ನ್ಯಾಯಮೂರ್ತಿ ಎ ಬದರುದ್ದೀನ್ ಜಾಮೀನು ನಿರಾಕರಿಸಿದರು.

Also Read
[ಶಬರಿಮಲೆ ಚಿನ್ನ ಕಳವು ಪ್ರಕರಣ] ದೇವಾಲಯ ಆಸ್ತಿ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ಬರಲಿ: ಕೇರಳ ಹೈಕೋರ್ಟ್

ಶಬರಿಮಲೆ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳು ಮತ್ತು ಬಾಗಿಲು ಚೌಕಟ್ಟಿಗೆ ಅಳವಡಿಸಿದ್ದ ಚಿನ್ನದ ರೇಕುಗಳ ದುರಸ್ತಿ ಕಾರ್ಯದ ಬಳಿಕ ಸುಮಾರು ನಾಲ್ಕು ಕಿಲೋಗ್ರಾಂ ಚಿನ್ನ ಕಡಿಮೆಯಾಗಿದ್ದು ಇದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

2019ರಲ್ಲಿ ಆರೋಪಿತ ಕಳವು ನಡೆದ ಸಮಯದಲ್ಲಿ ಟಿಡಿಬಿ ಅಧ್ಯಕ್ಷರಾಗಿದ್ದ ಪದ್ಮಕುಮಾರ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತಿರುವನಂತಪುರಂನಲ್ಲಿನ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ ಬಳಿಕ ಬಂಧಿಸಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉನ್ನಿಕೃಷ್ಣನ್ ಪೊಟ್ಟಿ ಜೊತೆ ನೇರವಾಗಿ ಸಂಚು ರೂಪಿಸಿದ್ದು ಪದ್ಮಕುಮಾರ್ ಅವರೇ ಎಂದು ಪೊಲೀಸರು ಆರೋಪಿಸಿದ್ದಾರೆ.

Also Read
ಶಬರಿಮಲೆ ಚಿನ್ನಗಳವು: ದೇವಸ್ವಂ ಮಾಜಿ ಆಡಳಿತಾಧಿಕಾರಿ ಶ್ರೀಕುಮಾರ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್

ಚಿನ್ನಲೇಪಿತ ತಾಮ್ರದ ಹೊದಿಕೆ ಎಂದು ಉಲ್ಲೇಖಿಸುವ ಬದಲು ತಾಮ್ರದ ಹೊದಿಕೆಗಳು ಎಂದು ಪದ್ಮಕುಮಾರ್‌ ವರ್ಗೀಕರಿಸಿದ್ದರು. ಇದರಿಂದ ಪೊಟ್ಟಿಗೆ ದೇವಸ್ಥಾನದ ವಸ್ತುಗಳನ್ನು ಸ್ವೀಕರಿಸಿ ಚಿನ್ನವನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ದೊರಕಿತು ಎಂಬ ಆರೋಪವಿದೆ.

ಉನ್ನಿಕೃಷ್ಣನ್ ಪೊಟ್ಟಿ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ದುರಸ್ತಿ ಕಾರ್ಯಗಳನ್ನು ಪ್ರಾಯೋಜಿಸಿದವರು ಪೊಟ್ಟಿಯೇ ಆಗಿದ್ದು, ಆ ಬಳಿಕ ಚಿನ್ನ ಕಾಣೆಯಾಗಿದೆಯೆಂದು ಆರೋಪಿಸಲಾಗಿದೆ. ಟಿಡಿಬಿ ಅಧಿಕಾರಿಗಳು ಮಾಡಿದ ಅಕ್ರಮಗಳಿಂದ ದುರಸ್ತಿ ಪ್ರಾಯೋಜಕತ್ವದ ಹೆಸರಿನಲ್ಲಿ ಪೊಟ್ಟಿಗೆ ಚಿನ್ನ ಪಡೆಯಲು ಅವಕಾಶವಾಯಿತು ಎಂದು ಪೊಲೀಸರು ಹೇಳಿದ್ದಾರೆ.

Kannada Bar & Bench
kannada.barandbench.com