Madhya Pradesh High Court, Indian Flag 
ಸುದ್ದಿಗಳು

ಪಾಕಿಸ್ತಾನ ಪರ ಘೋಷಣೆ: ಭಾರತ ಮಾತೆಗೆ ಜೈ ಎನ್ನಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಿದ ಮಧ್ಯಪ್ರದೇಶ ಹೈಕೋರ್ಟ್

ಆರೋಪಿಗೆ ತಾನು ಹುಟ್ಟಿ ಬದುಕುತ್ತಿರುವ ದೇಶದ ಬಗ್ಗೆ ಜವಾಬ್ದಾರಿ ಮತ್ತು ಹೆಮ್ಮೆಯ ಭಾವನೆ ಮೂಡಿಸುವ ಷರತ್ತು ವಿಧಿಸಿ ಜಾಮೀನು ನೀಡಬಬಹುದು ಎಂದು ನ್ಯಾಯಾಲಯ ತಿಳಿಸಿತು.

Bar & Bench

'ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ಥಾನ್‌ ಮುರ್ದಾಬಾದ್' ಎಂದು ಕೂಗಿದ ಆರೋಪಿಗೆ ಹದಿನೈದು ದಿನಗಳಿಗೊಮ್ಮೆ ಭಾರತ್‌ ಮಾತಾಕೀ ಜೈ ಎಂಬ ಘೋಷಣೆ ಕೂಗುತ್ತಾ ತ್ರಿವರ್ಣ ಧ್ವಜಕ್ಕೆ 21 ಬಾರಿ ನಮಿಸಬೇಕು ಎಂಬ ಷರತ್ತು ವಿಧಿಸಿ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ [ಫೈಜಲ್ ಅಲಿಯಾಸ್‌ ಫೈಜಾನ್ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಆರೋಪಿಗೆ ತಾನು ಹುಟ್ಟಿ ಬದುಕುತ್ತಿರುವ ದೇಶದ ಬಗ್ಗೆ ಜವಾಬ್ದಾರಿ ಮತ್ತು ಹೆಮ್ಮೆಯ ಭಾವನೆ ಮೂಡಿಸುವ ಷರತ್ತು ವಿಧಿಸಿ ಜಾಮೀನು ನೀಡಬಬಹುದು ಎಂದು ನ್ಯಾ. ದಿನೇಶ್ ಕುಮಾರ್ ಪಲಿವಾಲ್ ಅವರು ತಿಳಿಸಿದರು.

ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಕ್ಕಾಗಿ ಐಪಿಸಿ ಸೆಕ್ಷನ್ 153 ಬಿ (ದ್ವೇಷಕ್ಕೆ ಕುಮ್ಮಕ್ಕು) ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಕ್ಟೋಬರ್ 15ರಂದು ಹೈಕೋರ್ಟ್ ಆತನಿಗೆ ಜಾಮೀನು ನೀಡಿತ್ತು.

ವಿಚಾರಣೆ ಮುಗಿಯುವವರೆಗೆ ಆರೋಪಿ ತಿಂಗಳ ಪ್ರತಿ 1ನೇ ಮತ್ತು 4ನೇ ಮಂಗಳವಾರದಂದು ಬೆಳಗ್ಗೆ 10 ರಿಂದ 12 ಗಂಟೆಯೊಳಗೆ ಭೋಪಾಲ್‌ನ ಮಿಸ್ರೋಡ್ ಪೊಲೀಸ್ ಠಾಣೆಗೆ ತಪ್ಪದೆ ಹಾಜರಿ ಹಾಕಬೇಕು. ಠಾಣೆಯ ಮೇಲೆ ಹಾರುತ್ತಿರುವ ರಾಷ್ಟ್ರದ್ವಜಕ್ಕೆ ನಮಿಸಿ 21 ಬಾರಿ "ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಬೇಕು. ಈ ಷರತ್ತನ್ನು ಜಾಮೀನು ಪತ್ರದಲ್ಲಿ ನಮೂದಿಸಬೇಕು ಎಂಬುದಾಗಿ ನ್ಯಾಯಾಲಯ ಆದೇಶಿಸಿದೆ.

ಆರೋಪಿಗೆ ತಾನು ಹುಟ್ಟಿ ಬದುಕುತ್ತಿರುವ ದೇಶದ ಬಗ್ಗೆ ಜವಾಬ್ದಾರಿ ಮತ್ತು ಹೆಮ್ಮೆಯ ಭಾವನೆ ಮೂಡಿಸುವ ಷರತ್ತು ವಿಧಿಸಿ ಜಾಮೀನು ನೀಡಬಬಹುದು
ಮಧ್ಯಪ್ರದೇಶ ಹೈಕೋರ್ಟ್

ತನ್ನ ಕಕ್ಷಿದಾರ ಯಾವುದೇ ಅಪರಾಧ ಮಾಡಿಲ್ಲ ತಪ್ಪಾಗಿ ಆತನನ್ನು ಪ್ರಕರಣದಲ್ಲಿ ಎಳೆತರಲಾಗಿದೆ ಎಂದು ಆರೋಪಿ ಪರ ವಕೀಲರು ವಾದಿಸಿದರಾದರೂ ವಿಡಿಯೋವೊಂದರಲ್ಲಿ ಅತ ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ದಾಖಲಾಗಿರುವುದನ್ನು ಒಪ್ಪಿಕೊಂಡರು.

ಆರೋಪಿಗೆ ಜಾಮೀನು ಮಂಜೂರು ಮಾಡುವುದಕ್ಕೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತು. ಆರೋಪಿ ರೂಢಿಗತ ಅಪರಾಧಿಯಾಗಿದ್ದು ಈಗಾಗಲೇ ಆತನ ವಿರುದ್ಧ ಸುಮಾರು 13 ಪ್ರಕರಣಗಳಿವೆ. ವಿಡಿಯೋದಲ್ಲಿ ಆರೋಪಿ ತಾನು ಹುಟ್ಟಿ ಬೆಳೆದ ದೇಶದ ವಿರುದ್ಧ ಬಹಿರಂಗವಾಗಿ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಆತನಿಗೆ ಭಾರತದಲ್ಲಿ ವಾಸಿಸುವುದು ಇಷ್ಟವಿಲ್ಲದಿದ್ದರೆ ಜಿಂದಾಬಾದ್‌ ಎಂದು ಕೂಗಿದ ದೇಶವನ್ನೇ ವಾಸಕ್ಕೆ ಆಯ್ಕೆಯನ್ನಾಗಿ ಮಾಡಿಕೊಳ್ಳಬಹುದು ಎಂದಿತು.

ವಾದ ಆಲಿಸಿದ ನ್ಯಾಯಾಲಯ  ಆರೋಪಿಗೆ ಹದಿನೈದು ದಿನಗಳಿಗೊಮ್ಮೆ ಭಾರತ್ ಮಾತಾಕೀ ಜೈ ಎಂಬ ಘೋಷಣೆ ಕೂಗುತ್ತಾ ತ್ರಿವರ್ಣ ಧ್ವಜಕ್ಕೆ 21 ಬಾರಿ ನಮಿಸಬೇಕು ಎಂಬ ಷರತ್ತು ಮಾತ್ರವಲ್ಲದೆ ₹ 50,000 ವೈಯಕ್ತಿಕ ಬಾಂಡ್ ನೀಡಬೇಕು ಎಂದು ಕೂಡ ನ್ಯಾಯಾಲಯ ಹೇಳಿದೆ.

ಜಾಮೀನು ಷರತ್ತು ಆರೋಪಿಯ ವಿರುದ್ಧದ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಜಾರಿಯಲ್ಲಿರುತ್ತದೆ. ಆರೋಪಿ ಜಾಮೀನು ಷರತ್ತು  ಉಲ್ಲಂಘಿಸಿದರೆ, ಜಾಮೀನು ಹಿಂಪಡೆಯಬೇಕಾಗುತ್ತದೆ ಎಂದೂ ನ್ಯಾಯಾಲಯ ತಿಳಿಸಿದೆ.