ಸುದ್ದಿಗಳು

ರಂಜಾನ್ ಮಾಸ: ಸಂಭಲ್ ಮಸೀದಿಗೆ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದ ಎಎಸ್ಐ

ಮಸೀದಿ ಆವರಣವನ್ನು ಸ್ವಚ್ಛಗೊಳಿಸಿ ಸುತ್ತಲಿನ ಧೂಳು ಮತ್ತು ಕಳೆಗಿಡಗಳನ್ನು ತೆಗೆದುಹಾಕುವಂತೆ ನ್ಯಾಯಾಲಯ ಇದೇ ವೇಳೆ ನಿರ್ದೇಶಿಸಿತು.

Bar & Bench

ಸಂಭಲ್‌ನಲ್ಲಿರುವ ವಿವಾದಿತ ಶಾಹಿ ಜಾಮಾ ಮಸೀದಿಯ ಇಡೀ ಕಟ್ಟಡಕ್ಕೆ ಈಗಾಗಲೇ ಎನಾಮೆಲ್‌ ಪೇಂಟ್‌ ಬಳಿದು ಅದು ಉತ್ತಮ ಸ್ಥಿತಿಯಲ್ಲಿರುವುದರಿಂದ ರಂಜಾನ್‌ ಹಿನ್ನೆಲೆಯಲ್ಲಿ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಶುಕ್ರವಾರ ಅಲಾಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.

ಗುರುವಾರ ನ್ಯಾಯಾಲಯ ಹೊರಡಿಸಿದ್ದ ನಿರ್ದೇಶನದಂತೆ ಎಎಸ್‌ಐ ಶುಕ್ರವಾರ ಮಸೀದಿ ಪರಿಶೀಲಿಸಿ ವರದಿ ಸಲ್ಲಿಸಿತು.

ರಂಜಾನ್‌ ಹಿನ್ನೆಲೆಯಲ್ಲಿ ಮಸೀದಿಗೆ ಬಣ್ಣ ಬಳಿಯುವುದು, ಅಲಂಕಾರಿಕ ವ್ಯವಸ್ಥೆ ಮತ್ತು ದುರಸ್ತಿ ಮಾಡುವ ಅಗತ್ಯ ಕುರಿತಂತೆ ಆದೇಶ ನೀಡುವುದಕ್ಕಾಗಿ ಮಸೀದಿಯನ್ನು ಪರಿಶೀಲಿಸುವಂತೆ ಹೈಕೋರ್ಟ್ ಎಎಸ್‌ಐಗೆ ನಿರ್ದೇಶನ ನೀಡಿತ್ತು. ಮಸೀದಿಯ ಮುತಾವಲಿಗಳ ಸಮ್ಮುಖದಲ್ಲಿ ಹಗಲಿನಲ್ಲಿ ತಪಾಸಣೆ ನಡೆಸಬೇಕೆಂದು ನ್ಯಾಯಾಲಯ ನಿರ್ದೇಶಿಸಿತ್ತು.

ಆದರೆ ಬಣ್ಣ ಬಳಿಯದೆ ಇರುವ ಎಎಸ್‌ಐ ನಿರ್ಧಾರ ತಪ್ಪು. ಮಸೀದಿಗೆ ಬಣ್ಣ ಬಳಿಯಬೇಕಿದೆ ಎಂದು ಶಾಹಿ ಜಾಮಾ ಮಸೀದಿ ನಿರ್ವಹಣಾ ಸಮಿತಿ ವಿಚಾರಣೆ ವೇಳೆ ವಾದಿಸಿತು.

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್ ಅವರಿದ್ದ ಪೀಠ ಎಎಸ್‌ಐ ವರದಿಗೆ ಪ್ರತಿಕ್ರಿಯೆ ಅಥವಾ ಆಕ್ಷೇಪಣೆ ಸಲ್ಲಿಸಲು ಮಸೀದಿ ಸಮಿತಿಗೆ ಮಾರ್ಚ್ 4ರವರೆಗೆ ಸಮಯಾವಕಾಶ ನೀಡಿತು.

ಮಸೀದಿ ಆವರಣವನ್ನು ಸ್ವಚ್ಛಗೊಳಿಸಿ ಸುತ್ತಲಿನ ಧೂಳು ಮತ್ತು ಕಳೆಗಿಡಗಳನ್ನು ತೆಗೆದುಹಾಕುವಂತೆ ನ್ಯಾಯಾಲಯ ಇದೇ ವೇಳೆ ನಿರ್ದೇಶಿಸಿತು.

ಕೆಲ ತಿಂಗಳುಗಳ ಹಿಂದೆ ಮಸೀದಿ ಸಮೀಕ್ಷೆ ನಡೆಸುವಂತೆ ಸಿವಿಲ್ ನ್ಯಾಯಾಲಯ ಆದೇಶ ನೀಡಿದ ನಂತರ ಸಂಭಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಮೊಘಲರ ಕಾಲದಲ್ಲಿ ದೇವಾಲಯ ಕೆಡವಿ ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ವಕೀಲ ಹರಿಶಂಕರ್ ಜೈನ್ ಹಾಗೂ ಇತರ ಏಳು ಮಂದಿ ಸಲ್ಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯ ಮಸೀದಿ ಸಮೀಕ್ಷೆಗೆ ನಿರ್ದೇಶಿಸಿತ್ತು. 

ನಂತರ ಮಂಗಳೂರಿನ ಮಳಲಿ ಮಸೀದಿ ಸೇರಿದಂತೆ ದೇಶದ ಎಲ್ಲಾ ವಿವಾದಿತ ಪೂಜಾ ಸ್ಥಳಗಳ ಕುರಿತ ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಂಪೂರ್ಣ ತಡೆ ನೀಡಿತ್ತು.

ಈ ಮಧ್ಯೆ ರಂಜಾನ್‌ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ನಿರ್ವಹಣಾ ಚಟುವಟಿಕೆ ನಡೆಸುವುದನ್ನು ಆಕ್ಷೇಪಿಸಿ ಉತ್ತರ ಸಂಭಲ್‌ನ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಆಕ್ಷೇಪಣೆ ಎತ್ತಿದ್ದರು. ಇದರಿಂದಾಗಿ ಮಸೀದಿ ನಿರ್ವಹಣಾ ಸಮಿತಿ ಹೈಕೋರ್ಟ್‌ ಮೆಟ್ಟಿಲೇರಿತ್ತು.