Same-sex marriage and Supreme Court  A1
ಸುದ್ದಿಗಳು

ಸಲಿಂಗ ವಿವಾಹ ಪ್ರಕರಣಕ್ಕೆ ವಿರೋಧ: ಬಿಸಿಐ ಬಳಿಕ ಈಗ ದೆಹಲಿ ವಕೀಲರ ಸಂಘಗಳ ಸರದಿ

ಸಲಿಂಗ ವಿವಾಹದ ವಿಚಾರ ದೂರಗಾಮಿ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತಿದನ್ನು ನ್ಯಾಯಾಲಯಗಳ ವಿವೇಚನೆಗೆ ಬಿಡಬಾರದು ಎಂದು ಎಲ್ಲಾ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘಗಳ ಸಮನ್ವಯ ಸಮಿತಿ ಹೇಳಿದೆ.

Bar & Bench

ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದೆದುರು ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ವಿಷಯದ ಕುರಿತು ಪ್ರತಿನಿತ್ಯ ವಿಚಾರಣೆ ನಡೆಯುತ್ತಿರುವುದಕ್ಕೆ ತನ್ನ ಅತೃಪ್ತಿ ದಾಖಲಿಸುವ ನಿರ್ಣಯವನ್ನು ದೆಹಲಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘಗಳ ಸಮನ್ವಯ ಸಮಿತಿ ಕೈಗೊಂಡಿದೆ.

ನ್ಯಾಯಿಕ ಆಡಳಿತವನ್ನು ಎತ್ತಿಹಿಡಿಯುವಲ್ಲಿ ಸುಪ್ರೀಂ ಕೋರ್ಟ್‌ ಪ್ರಮುಖ ಪಾತ್ರ ವಹಿಸುತ್ತದೆ ಎಂದಿರುವ ವಕೀಲರ ಸಂಘಗಳು ಕೆಲ ಸಮಸ್ಯೆಗಳು ತುಂಬಾ ಸಂಕೀರ್ಣವಾಗಿದ್ದು ಅವುಗಳಿಗೆ ದೂರಗಾಮಿ ಪರಿಣಾಮ ಬೀರುವ ಸಾಮರ್ಥ್ಯ ಇರುತ್ತದೆ. ಹೀಗಾಗಿ ಇವುಗಳನ್ನು ನ್ಯಾಯಾಲಯದ ವಿವೇಚನೆಗೆ ಬಿಡಲಾಗದು ಎಂದು ಹೇಳಿವೆ.

ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ಸಾಮಾಜಿಕ ಪರಿಣಾಮಗಳು ಬೃಹದಾಕಾರದ್ದಾಗಿದ್ದು ಸಮಾಜದ ರಚನೆ ಮೇಲೆ ಅನಪೇಕ್ಷಿತ ಪರಿಣಾಮ ಬೀರುವ ಸಾಮರ್ಥ್ಯ ಅವುಗಳಿಗೆ ಇದೆ ಎಂದು ನಿರ್ಣಯ ವಿವರಿಸಿದೆ.

"ಸಾಮಾಜಿಕ ನಿಯಮಗಳು, ಮೌಲ್ಯಗಳು ಮತ್ತು ನಂಬಿಕೆಗಳಲ್ಲಿ ಆಳವಾಗಿ ಬೇರೂರಿರುವ ಕೆಲವು ವಿಷಯಗಳಿವೆ. ಈ ವಿಚಾರಗಳನ್ನು ಜಾಗ್ರತೆಯಿಂದ ಪರಿಗಣಿಸಿಸುವ ಸಾರ್ವಜನಿಕ ಚರ್ಚೆಗೆ ಬಿಡುವ ಅಗತ್ಯವಿರುತ್ತದೆ, ಏಕೆಂದರೆ ಸಾಮಾಜಿಕ ಸಮ್ಮತಿ ಇಲ್ಲದೆ ತೆಗೆದುಕೊಂಡ ಯಾವುದೇ ನಿರ್ಧಾರ ಅಥವಾ ಕ್ರಮ, ದೂರಗಾಮಿ ಪರಿಣಾಮ ಉಂಟುಮಾಡಬಹುದು" ಎಂದು ಸಮನ್ವಯ ಸಮಿತಿ ತಿಳಿಸಿದೆ.

ಈ ರೀತಿಯ ಸಮಸ್ಯೆಗಳಿಗೆ ವಿಶಾಲ ತಳಹದಿಯಿಂದ ಕೂಡಿದ ಒಮ್ಮತದ ಅಗತ್ಯವಿದ್ದು, ಅದನ್ನು ಸಾರ್ವಜನಿಕ ಚರ್ಚೆ ಮತ್ತು ಸಂವಾದದ ಮೂಲಕ ಮಾತ್ರ ಸಾಧಿಸಬಹುದು. ಆದ್ದರಿಂದ ಈ ವಿಚಾರವನ್ನು ಶಾಸಕಾಂಗಕ್ಕೆ ವಹಿಸಬೇಕು ಎಂಬ ಅಭಿಪ್ರಾಯ ವಕೀಲ ಸಂಘಗಳಿಂದ ವ್ಯಕ್ತವಾಗಿದೆ.

ಚುನಾಯಿತ ಪ್ರತಿನಿಧಿಗಳು ತಮ್ಮ ಮತದಾರರ ಅಭಿಪ್ರಾಯಗಳು ಮತ್ತು ಕಳವಳಗಳನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಸಮಾಜದ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿರುವಂತಹ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದು ಮುಖ್ಯವಾಗಿದೆ ಎಂದು ನಿರ್ಣಯ ಹೇಳಿದೆ.

ಕಳೆದ ಭಾನುವಾರ ಭಾರತೀಯ ವಕೀಲರ ಪರಿಷತ್ತು ಇದೇ ಬಗೆಯ ನಿರ್ಣಯ ಅಂಗೀಕರಿಸಿತ್ತು. ಸಲಿಂಗ ವಿವಾಹದ ಸಮಸ್ಯೆಯನ್ನು ಶಾಸಕಾಂಗ ಪರಿಗಣನೆಗೆ ಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಅದು ಮನವಿ ಮಾಡಿತ್ತು. ದೇಶದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠ ಪ್ರತಿನಿತ್ಯದ ಆಧಾರದಲ್ಲಿ ವಿಚಾರಣೆ ನಡೆಸುತ್ತಿದೆ.