Supreme Court, CBI, and West Bengal Map  
ಸುದ್ದಿಗಳು

ಸಂದೇಶ್‌ಖಾಲಿ: ಶಹಜಹಾನ್ ಶೇಖ್ ವಿರುದ್ಧದ ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಖಾಸಗಿ ಪಕ್ಷಕಾರರೊಬ್ಬರ (ಶೇಖ್) ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆಯನ್ನು ವಿರೋಧಿಸಿ ಪ. ಬಂಗಾಳ ಸರ್ಕಾರ ಏಕೆ ಮೇಲ್ಮನವಿ ಸಲ್ಲಿಸುತ್ತಿದೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

Bar & Bench

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಭೂ ಕಬಳಿಕೆ ಆರೋಪಗಳ ಕುರಿತು ಸಿಬಿಐ ನಡೆಸುತ್ತಿರುವ ತನಿಖೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿ ಹಿಡಿದಿದೆ [ಪ. ಬಂಗಾಳ ಸರ್ಕಾರ ಮತ್ತು ತನ್ನ ರಿಜಿಸ್ಟ್ರಾರ್‌ ಜನರಲ್‌ ಮೂಲಕ ಕಲ್ಕತ್ತಾ ಹೈಕೋರ್ಟ್‌ ನಡುವಣ ಪ್ರಕರಣ].

ತನಿಖೆ ವಿರೋಧಿಸಿ ಪ. ಬಂಗಾಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಆದೇಶದಲ್ಲಿ ತಾನು ಮಾಡಿರುವ ಅವಲೋಕನ ಪ್ರಕರಣದ ವಿಚಾರಣೆ ಮತ್ತು ಭವಿಷ್ಯದಲ್ಲಿ ಪಡೆಯಬೇಕಾದ ಪರಿಹಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಖಾಸಗಿ ಪಕ್ಷಕಾರರೊಬ್ಬರ (ಶೇಖ್) ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆಯನ್ನು ವಿರೋಧಿಸಿ ಪ. ಬಂಗಾಳ ಸರ್ಕಾರ ಏಕೆ ಮೇಲ್ಮನವಿ ಸಲ್ಲಿಸುತ್ತಿದೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

43 ಪ್ರಥಮ ಮಾಹಿತಿ ವರದಿಗಳ (ಎಫ್‌ಐಆರ್) ತನಿಖೆಗೆ ಏಕೀಕೃತ ನಿರ್ದೇಶನವಿದೆ ಎಂದು ಇಂದು ನಡೆದ ವಿಚಾರಣೆ ವೇಳೆ ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ ಸಂದೇಶ್‌ಖಾಲಿಯ ಎಫ್‌ಐಆರ್‌ಗಳ ಬಗ್ಗೆ ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ನ್ಯಾಯಾಲಯ ಎತ್ತಿ ತೋರಿಸಿತು. ಸಿಂಘ್ವಿ ಅವರು ತಮ್ಮ ವಾದ ಮುಂದುವರಿಸಿದರಾದರೂ ನ್ಯಾಯಾಲಯ ಮಧ್ಯಪ್ರವೇಶಿಸಲು ನಿರಾಕರಿಸಿತು. ಇದೇ ವೇಳೆ ತನ್ನ ಅವಲೋಕನ ವಿಚಾರಣೆ ಮೇಲೆ ಯಾವುದೇ ಪ್ರಭಾವ ಬೀರುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿತು.

ಘಟನೆ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಕಲ್ಕತ್ತಾ ಹೈಕೋರ್ಟ್‌ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಪರಿಶಿಷ್ಟ ಜಾತಿಯ ಜನರೂ ಸೇರಿದಂತೆ ಸಾರ್ವಜನಿಕರಿಂದ ಬಲವಂತವಾಗಿ ಜಮೀನು ಕಿತ್ತುಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಸಂದೇಶ್‌ಖಾಲಿಯಲ್ಲಿ ಅಶಾಂತಿ ಭುಗಿಲೆದ್ದಿತ್ತು. ಸುಮಾರು 55 ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಶೇಖ್‌ನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು.

ಹೈಕೋರ್ಟ್ ತನ್ನ ತೀರ್ಪಿನಲ್ಲಿ ದೂರುದಾರರ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಿಬಿಐಗೆ ನಿರ್ದೇಶಿಸಿದೆ ಮತ್ತು ದೂರುಗಳನ್ನು ಸಲ್ಲಿಸಲು ಮೀಸಲಾದ ಪೋರ್ಟಲ್ / ಇಮೇಲ್ ಐಡಿಯನ್ನು ಸೃಷ್ಟಿಸಲು ಏಜೆನ್ಸಿಗೆ ಸೂಚಿಸಿತ್ತು. 

ಉತ್ತರ 24 ಪರಗಣಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಬಗ್ಗೆ ಸಾಕಷ್ಟು ಪ್ರಚಾರ ನೀಡುವಂತೆ ಹೈಕೋರ್ಟ್‌ ಆದೇಶಿಸಿತ್ತು. 

ಪಡಿತರ ಹಗರಣದ ತನಿಖೆಯ ಭಾಗವಾಗಿ ಶೇಖ್‌ ನಿವಾಸದ ಮೇಲೆ ದಾಳಿ ನಡೆಸಲು ಈ ವರ್ಷದ ಜನವರಿಯಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಅಧಿಕಾರಿಗಳು ಶೇಖ್‌ ಮನೆಗೆ ಧಾವಿಸಿದ್ದ ವೇಳೆ ಅವರ ವಿರುದ್ಧ ಸ್ಥಳೀಯರಿಂದ ದಾಳಿ ನಡೆದಿತ್ತು. ಗುಂಪು ದಾಳಿಯ ಹಿಂದೆ ಶೇಖ್ ಕೈವಾಡವಿದೆ ಎಂಬ ಆರೋಪಗಳು ವಿವಾದ ಹುಟ್ಟುಹಾಕಿದ್ದವು.  

ಇ ಡಿ ಅಧಿಕಾರಿಗಳ ಮೇಲಿನ ದಾಳಿಯ ತನಿಖೆಯನ್ನು ಕಲ್ಕತ್ತಾ ಹೈಕೋರ್ಟ್ ಮಾರ್ಚ್ 5 ರಂದು ಸಿಬಿಐಗೆ ವರ್ಗಾಯಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ತನಿಖೆಯ ಆದೇಶವನ್ನು ಎತ್ತಿಹಿಡಿದಿದೆ.