A1
A1
ಸುದ್ದಿಗಳು

ಐಪಿಒ ಆದಾಯ ದುರ್ಬಳಕೆ ಮಾಡಿಕೊಂಡ ಕಂಪೆನಿಗೆ ದಂಡ: ಸೆಬಿ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ವಜಾಗೊಳಿಸಿದ ಎಸ್ಎಟಿ

Bar & Bench

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಆದಾಯವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ತಾರಿಣಿ ಇಂಟರ್‌ನ್ಯಾಷನಲ್‌ ಮತ್ತು ಅದರ ನಿರ್ದೇಶಕರಿಗೆ ದಂಡ ವಿಧಿಸಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನೀಡಿದ್ದ ಆದೇಶವನ್ನು ಷೇರು ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ಎತ್ತಿ ಹಿಡಿದಿದೆ. [ತಾರಿಣಿ ಇಂಟರ್‌ನ್ಯಾಶನಲ್ ಲಿಮಿಟೆಡ್ ಇನ್ನಿತರರು ಮತ್ತು ಸೆಬಿ ನಡುವಣ ಪ್ರಕರಣ].

ಹೂಡಿಕೆದಾರರಿಗೆ ತಿಳಿಯದಂತೆ ಅಕ್ರಮ ಮಾರ್ಗಗಳ ಮೂಲಕ ಐಪಿಒ ಆದಾಯವನ್ನು ಬೇರೆಡೆಗೆ ವಿನಿಯೋಗಿಸಿ, ಸೆಬಿ (ಐಸಿಡಿಆರ್‌) ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಕಂಪೆನಿ ವಿರುದ್ಧದ ಆರೋಪವಾಗಿತ್ತು.

ಎಸ್‌ಎಟಿ ಅಧ್ಯಕ್ಷ ನ್ಯಾಯಮೂರ್ತಿ ತರುಣ್ ಅಗರ್ವಾಲಾ ಮತ್ತು ನ್ಯಾಯಾಂಗ ಸದಸ್ಯ ನ್ಯಾ. ಎಂ ಟಿ ಜೋಶಿ ಅವರಿದ್ದ ಪೀಠ ಸೆಬಿಯ ನಿರ್ಧಾರದಲ್ಲಿ ಯಾವುದೇ ನ್ಯೂನತೆಗಳಿಲ್ಲ ಎಂದು ಕಂಡುಕೊಂಡಿತು.

ಕಂಪನಿಗೆ ದೊರೆತಿದ್ದ ಐಪಿಒ ಆದಾಯವನ್ನು ಸೂಕ್ತ ರೀತಿಯಲ್ಲಿ ಬಳಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಬಂದಿದ್ದ ದೂರುಗಳನ್ನು ಆಧರಿಸಿ ಸೆಬಿ ತನಿಖೆ ನಡೆಸಿತ್ತು. ಆಗ ತಾರಿಣಿ ತನ್ನ ಪ್ರಾಸ್ಪೆಕ್ಟಸ್‌ನಲ್ಲಿ ತಿಳಿಸಿರುವಂತೆ ₹ 15.40 ಕೋಟಿ ಹಣವನ್ನು ಬಳಸಿಲ್ಲ‌ ಎಂದು ಮೇಲ್ನೋಟಕ್ಕೆ ತಿಳಿದು ಬಂದಿತ್ತು. ಅದರಲ್ಲಿ ₹ 7.94 ಹಣವನ್ನು ವಿವಿಧ ಸಮೂಹ ಕಂಪೆನಿಗಳು ಮತ್ತು ಇತರ ಘಟಕಗಳಿಗೆ ಅದು ವಿನಿಯೋಗಿಸಿತ್ತು.

ಹೀಗಾಗಿ ಅವುಗಳಿಗೆ ನೀಡಿದ್ದ ಹಣವನ್ನು ಹಿಂಪಡೆಯುವಂತೆ ಸೆಬಿ ತಾರಿಣಿಗೆ ಸೂಚಿಸಿತು. ಅಲ್ಲದೆ ನಾಲ್ಕು ವರ್ಷಗಳ ಕಾಲ ತಾರಿಣಿ ಷೇರು ಮಾರುಕಟ್ಟೆ ಬಳಸಬಾರದು ಎಂದು ತಾಕೀತು ಮಾಡಿದ ಸೆಬಿ ರೂ 5 ಲಕ್ಷದಿಂದ 5 ಕೋಟಿಯವರೆಗಿನ ಮೊತ್ತದ ದಂಡವನ್ನು ಕಂಪೆನಿ ಹಾಗೂ ಅದರ ನಿರ್ದೇಶಕರಿಗೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ತಾರಿಣಿ, ಷೇರು ಮೇಲ್ಮನವಿ ನ್ಯಾಯಮಂಡಳಿಯ ಮೊರೆ ಹೋಗಿತ್ತು.