ಅರ್ನಾಬ್ ಗೋಸ್ವಾಮಿ, ಸುಪ್ರೀಂಕೋರ್ಟ್
ಅರ್ನಾಬ್ ಗೋಸ್ವಾಮಿ, ಸುಪ್ರೀಂಕೋರ್ಟ್ 
ಸುದ್ದಿಗಳು

ಹಕ್ಕುಚ್ಯುತಿಯು ನಿಂದನೆಗೆ ಸಮವೇ? ಅರ್ನಾಬ್ ಪ್ರಕರಣದಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್

Bar & Bench

ಹಕ್ಕುಚ್ಯುತಿ ಆರೋಪದಡಿ ತಮಗೆ ನೀಡಿದ ಶೋಕಾಸ್ ನೋಟಿಸ್ ಪ್ರಶ್ನಿಸಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹಾರಾಷ್ಟ್ರ ವಿಧಾನಸಭೆಗೆ ಬುಧವಾರ ನೋಟಿಸ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಶೋಕಾಸ್ ನೋಟಿಸ್ ಕುರಿತಂತೆ ಸದನ ಸಮಿತಿ ಆಲೋಚಿಸಿದೆಯೇ ಮತ್ತು ಗೋಸ್ವಾಮಿ ಅವರು ಸ್ಪಷ್ಟೀಕರಣಕ್ಕಾಗಿ ಖುದ್ದು ಸದನಕ್ಕೆ ಹಾಜರಾಗಬೇಕೆ ಎಂಬ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ಹೇಳಿದೆ.

ಗೋಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಶಾಸನಸಭೆಯ ಹೊರಗಿನ ವ್ಯಕ್ತಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ತಾವು ಖುದ್ದು ಶಾಸನಸಭೆಯ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸುವುದಾಗಿ ಸಮರ್ಥಿಸಿಕೊಂಡರು.

"ರಾಜ್ಯ ಸರ್ಕಾರದ ವಿರುದ್ಧ ಕಟುಪದಗಳನ್ನಾಡಿದ ಮಾತ್ರಕ್ಕೆ ಶಾಸನಸಭೆಯ ಆಚೆಗೆ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯ ಇಲ್ಲ. ಸಂವಿಧಾನದ 19 ಮತ್ತು 21 ನೇ ವಿಧಿಗಳು ಹಕ್ಕುಚ್ಯುತಿಯ ಮೇಲೆ ಸವಾರಿ ಮಾಡಿದರೆ ಎಂಬ ಒಂದು ಕುತೂಹಲಕಾರಿ ಪ್ರಶ್ನೆ ಇದೆ. ಎನ್ ರಾಮ್ ಪ್ರಕರಣದಲ್ಲಿ ಹೀಗೆಯೇ ಆಗಿದ್ದು ಅದು ಈಗ ಏಳು ನ್ಯಾಯಾಧೀಶರ ಪೀಠದಲ್ಲಿ ಬಾಕಿ ಉಳಿದಿದೆ” ಎಂದರು.

ಸದನ ಅಥವಾ ಅದರ ಸದಸ್ಯರ ಕೆಲಸಕ್ಕೆ ಅಡ್ಡಿಯುಂಟಾಗಿದ್ದರೆ ಮಾತ್ರ ಹಕ್ಕುಚ್ಯುತಿ ಮಂಡಿಸಬಹುದು ಎಂದೂ ಸಾಳ್ವೆ ವಾದಿಸಿದರು.

ಆಗ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ‘ನಾವು ಗಹನತೆಯನ್ನು ಅರ್ಥ ಮಾಡಿಕೊಂಡಿದ್ದೇವೆ. ಆದರೆ ಇದು ಕೇವಲ ಶೋಕಾಸ್ ನೋಟಿಸ್ ಮಾತ್ರವಾಗಿದ್ದು ಹಕ್ಕುಚ್ಯುತಿ ಮಂಡನೆ ಪ್ರಸ್ತಾಪವಾಗಿಲ್ಲ’ ಎಂದರು.

ಅಲ್ಲದೆ ಹಕ್ಕುಚ್ಯುತಿ, ನಿಂದನೆಗಿಂತ ಹೇಗೆ ಭಿನ್ನ ಎಂಬುದನ್ನು ಸಾಬೀತುಪಡಿಸಬೇಕು ಮತ್ತು ಅದಕ್ಕೆ ಪೂರಕವಾದ ಪ್ರಕರಣ, ಕಾನೂನುಗಳನ್ನು ಪ್ರಸ್ತುತಪಡಿಸಬೇಕು ಎಂದು ಕೋರ್ಟ್ ಸಾಳ್ವೆ ಅವರಿಗೆ ಸೂಚಿಸಿತು.

ನ್ಯಾಯಾಲಯದಲ್ಲಿ ಕೇಳಿಬಂದ ಮುಖ್ಯ ಸಂಗತಿಗಳು:

ನ್ಯಾ. ಬೊಬ್ಡೆ: ಒಬ್ಬ ವ್ಯಕ್ತಿಯನ್ನು ಟೀಕಿಸಿದರೆ ಅದು ಅವರ ಕಾರ್ಯಕ್ಷಮತೆಗೆ ಧಕ್ಕೆ ತರುವುದಿಲ್ಲವೆ?

ಸಾಳ್ವೆ: ಗೋಸ್ವಾಮಿ ಅವರು ಮುಖ್ಯಮಂತ್ರಿಯವರನ್ನು ಖಂಡಿಸಿರಬಹುದು ಅಥವಾ ಮಾನಹಾನಿ ಮಾಡಿರಬಹುದು. ಆದರೆ ಅದಕ್ಕೆ ಮಾನನಷ್ಟ ಮೊಕದ್ದಮೆ ಹೂಡಬೇಕೇ ವಿನಾ ಹಕ್ಕುಚ್ಯುತಿ ಮಂಡನೆಯನ್ನಲ್ಲ.

ನ್ಯಾ. ಬೊಬ್ಡೆ: ಹಕ್ಕುಚ್ಯುತಿ ಮಂಡನೆಯೇನೂ ಆಗಿಲ್ಲ. ಗೋಸ್ವಾಮಿ ಅವರಿಂದ ಪ್ರತಿಕ್ರಿಯೆ ಕೇಳಿದ್ದಾರೆ ಅಷ್ಟೇ.

ಗೋಸ್ವಾಮಿ ಅವರ ವಿರುದ್ಧ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ಒದಗಿಸಬೇಕೆಂದು ಸಾಳ್ವೆ ಕೋರಿದರೂ ನ್ಯಾಯಾಲಯ ಈ ಕುರಿತ ಆದೇಶಕ್ಕೆ ಮುಂದಾಗಲಿಲ್ಲ. ಪ್ರಕರಣದ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ಮಹಾರಾಷ್ಟ್ರದ ಮೇಲ್ಮನೆ ಮತ್ತು ಕೆಳಮನೆಗಳೆರಡರಲ್ಲೂ ಅರ್ನಾಬ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿರುವ ಶಿವಸೇನೆ ಈ ಸಂಬಂಧ ಅವರಿಗೆ 60 ಪುಟಗಳ ನೋಟಿಸ್ ಜಾರಿ ಮಾಡಿತ್ತು.