ಮಹಿಳೆಯ ಮೇಲೆ ಆಕೆಯ ಪತಿ ಅಥವಾ ಪತಿಯ ಸಂಬಂಧಿಕರು ನಡೆಸುವ ಕ್ರೌರ್ಯವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 498ಎ, ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ವೈವಾಹಿಕ ವ್ಯಾಜ್ಯಗಳಲ್ಲಿ ಮಹಿಳೆಯರು ಐಪಿಸಿಯ ಸೆಕ್ಷನ್ 498ಎ ರೀತಿಯ ಸೆಕ್ಷನ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.
ಅರ್ಜಿ ತಿರಸ್ಕರಿಸಿದ ಅದು "ನ್ಯಾಯಾಲಯ ಮಧ್ಯಪ್ರವೇಶಿಸಲು ಯಾವುದೇ ಕಾರಣ ಕಂಡುಬರುತ್ತಿಲ್ಲ. ಅಂತಹ ಸೆಕ್ಷನ್ (ಐಪಿಸಿ ಸೆಕ್ಷನ್ 498ಎ) ಸಂವಿಧಾನದ 14ನೇ ವಿಧಿಯನ್ನು (ಕಾನೂನಿನ ಮುಂದೆ ಎಲ್ಲರೂ ಸಮಾನರು, ಎಲ್ಲರಿಗೂ ಕಾನೂನಿನ ಸಮಾನ ರಕ್ಷಣೆ ಇದೆ) ಉಲ್ಲಂಘಿಸುತ್ತದೆ ಎಂಬ ಅರ್ಜಿ ಸಂಪೂರ್ಣವಾಗಿ ತಪ್ಪು ಗ್ರಹಿಕೆಯಿಂದ ಕೂಡಿದ್ದು ತಪ್ಪಾಗಿ ನಿರ್ದೇಶಿತವಾಗಿದೆ. ಸಂವಿಧಾನದ 15ನೇ ವಿಧಿಯು (ಜನಾಂಗ, ಧರ್ಮ, ಜಾತಿ, ಲಿಂಗತ್ವದ ಆಧಾರದಲ್ಲಿ ತಾರತಮ್ಯ ಎಸಗುವುದನ್ನು ನಿಷೇಧಿಸುವುದು ಹಾಗೂ ಮಹಿಳೆಯರು, ಮಕ್ಕಳು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು ಹಾಗೂ ಎಸ್‌ಸಿ, ಎಸ್‌ಟಿಗಳಿಗೆ ವಿಶೇಷ ಅವಕಾಶ ಕಲ್ಪಿಸುವುದು) ಮಹಿಳೆಯರ ರಕ್ಷಣೆ ಇತ್ಯಾದಿಗಳಿಗಾಗಿ ವಿಶೇಷ ಕಾನೂನನ್ನು ಜಾರಿಗೆ ತರಲು ಸ್ಪಷ್ಟವಾಗಿ ಅಧಿಕಾರ ನೀಡುತ್ತದೆ. ದುರುಪಯೋಗದ ವಿಚಾರವನ್ನು ಪ್ರಕರಣದಿಂದ ಪ್ರಕರಣಕ್ಕೆ ಪರಿಶೀಲಿಸಬೇಕಾಗುತ್ತದೆ" ಎಂದಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “ಅನೇಕ ದೇಶಗಳಲ್ಲಿ, ಲಿಂಗವನ್ನು ಲೆಕ್ಕಿಸದೆ ಯಾವುದೇ ವ್ಯಕ್ತಿ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳಲ್ಲಿ ಕಾನೂನಿನ ಮೊರೆ ಹೋಗಬಹುದು ಆದರೆ ಭಾರತದಲ್ಲಿ ಮಹಿಳೆಯರಿಗೆ ಮಾತ್ರ ಆ ಹಕ್ಕಿದೆ” ಎಂದು ವಾದಿಸಿದರು.
ಆಗ ನ್ಯಾಯಾಲಯವು "ನಾವು ನಮ್ಮ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುತ್ತೇವೆ. ನಾವು ಇತರರನ್ನು ಏಕೆ ಅನುಸರಿಸಬೇಕು. ಆ ದೇಶಗಳು ನಮ್ಮನ್ನು ಅನುಸರಿಸಲಿ” ಎಂದು ಉತ್ತರಿಸಿತು.
ಪ್ರತಿಯೊಂದು ಕಾನೂನನ್ನೂ ದುರುಪಯೋಗಪಡಿಸಿಕೊಳ್ಳಲು ಅವಕಾಶವಿದ್ದು ನ್ಯಾಯಾಲಯಗಳು ಅಂತಹ ದುರುಪಯೋಗದ ಆರೋಪಗಳನ್ನು ಆಯಾ ಪ್ರಕರಣದ ಆಧಾರದ ಮೇಲೆ ಪರಿಶೀಲಿಸಬೇಕಾಗುತ್ತದೆ” ಎಂದು ನ್ಯಾಯಪೀಠ ಇದೇ ವೇಳೆ ತಿಳಿಸಿತು.
ಸಮಾಜದ ಕೆಟ್ಟ ಕೃತ್ಯಗಳಿಗೆ ಮಹಿಳೆಯರು ಬಲಿಯಾಗದಂತೆ ರಕ್ಷಣೆ ಒದಗಿಸುವಂತಹ ಸೆಕ್ಷನ್‌ಗಳ ಅಭಿನಂದನೀಯ ಉದ್ದೇಶಗಳನ್ನು ನ್ಯಾಯಾಲಯವು ಎತ್ತಿ ತೋರಿಸಿತು.
ಈ ಹಿಂದೆ ಮಹಿಳೆಯರು ತಮ್ಮ ಗಂಡ ಮತ್ತು ಅತ್ತೆ ಮಾವಂದಿರನ್ನು ಗುರಿಯಾಗಿಸಿಕೊಂಡು ಕೌಟುಂಬಿಕ ಹಿಂಸಾಚಾರ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡಿದ್ದನ್ನು ಸುಪ್ರೀಂ ಕೋರ್ಟ್ ಸೇರಿದಂತೆ ಅನೇಕ ನ್ಯಾಯಾಲಯಗಳು ಎತ್ತಿ ತೋರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.