ಕಂಗನಾ, ಬಾಂಬೆ ಹೈಕೋರ್ಟ್
ಕಂಗನಾ, ಬಾಂಬೆ ಹೈಕೋರ್ಟ್ 
ಸುದ್ದಿಗಳು

ತಪ್ಪಿನ ಸಮರ್ಥನೆಗೆ ಮುಂದಾದರೆ ಅದರಲ್ಲಿ ಸಿಲುಕಿಕೊಳ್ಳುತ್ತೀರಿ: ಬಿಎಂಸಿಗೆ ಕಂಗನಾ ಪರ ವಕೀಲರ ಎಚ್ಚರಿಕೆ

Bar & Bench

ಅಕ್ರಮವಾಗಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ತನ್ನ ಬಂಗಲೆ ಕೆಡವಿದ್ದನ್ನು ಪ್ರಶ್ನಿಸಿ ನಟಿ ಕಂಗನಾ ರನೌತ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಬಾಂಬೆ ಕೋರ್ಟ್ ನಡೆಸಿತು.

ನ್ಯಾಯಮೂರ್ತಿಗಳಾದ ಎಸ್.ಜೆ ಕಥಾವಲ್ಲಾ ಮತ್ತು ಆರ್ ಐ ಚಾಗ್ಲಾ ಅವರನ್ನೊಳಗೊಂಡ ನ್ಯಾಯಪೀಠದ ಎದುರು ಹಿರಿಯ ವಕೀಲ ಬಿರೇಂದ್ರ ಸರಾಫ್ ಅವರು ಕಂಗನಾ ಪರ ವಾದ ಮಂಡಿಸಿದರು. ಬಿಎಂಸಿ ಪರ ಹಿರಿಯ ವಕೀಲ ಆಸ್ಪಿ ಚಿನೋಯ್ ಹಾಜರಿದ್ದರು.

ಸರಾಫ್ ಅವರು ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿದಂತೆ ವಿಶಾಲ ನೆಲೆಗಟ್ಟಿನಲ್ಲಿ ಚರ್ಚೆ ನಡೆಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು:

  • ಶಾಸನಬದ್ಧ ನಿಬಂಧನೆಗಳು ಮತ್ತು ಮಾರ್ಗಸೂಚಿಗಳನ್ನು ಬಿಎಂಸಿ ಅಧಿಕಾರಿಗಳು ದುರುದ್ದೇಶಪೂರಿತವಾಗಿ ಉಲ್ಲಂಘಿಸಿದ್ದಾರೆ.

  • ಬಿಎಂಸಿ ಅಧಿಕಾರಿಗಳ ಪ್ರತಿಯೊಂದು ಕ್ರಮವು ದುರುದ್ದೇಶದಿಂದ ಕೂಡಿತ್ತು.

  • ಪ್ರತಿಯೊಂದು ಅಫಿಡವಿಟ್ಟಿನಲ್ಲಿ ಬಿಎಂಸಿ ತನ್ನ ಪ್ರಕರಣವನ್ನು ಸುಧಾರಿಸಲು ಯತ್ನಿಸುತ್ತಿದೆ.

"ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆಯ ಜೊತೆಗಿನ ಕಂಗನಾ ಭಿನ್ನಾಭಿಪ್ರಾಯಕ್ಕೂ, ಕಟ್ಟಡ ಉರುಳಿಸಿದ್ದಕ್ಕೂ ನಂಟಿದೆ. ಸೆ.5ರಂದು ಹೇಳಿಕೆ ಕಂಗನಾ ಮುಂಬೈ ಪೊಲೀಸರ ಕಾರ್ಯವೈಖರಿ ವಿರುದ್ಧ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನ್ಯೂಸ್ ನೇಷನ್ ವಾಹಿನಿಯಲ್ಲಿ ಶಿವಸೇನಾ ವಕ್ತಾರ ಸಂಜಯ್ ರಾವತ್ ಅವರು ಕಂಗನಾ ಅವರನ್ನು ಅವಹೇಳನಾಕಾರಿಯಾಗಿ ಟೀಕಿಸಿದರು" ಎಂದು ಸರಾಫ್ ನ್ಯಾಯಾಲಯಕ್ಕೆ ತಿಳಿಸಿದರು.

"ಸಂದರ್ಶನವೊಂದರಲ್ಲಿ ‘ನೀವು ಕಾನೂನು ಕೈಗೆತ್ತಿಕೊಳ್ಳುವಿರೇ?’ ಎಂಬ ಪ್ರಶ್ನೆಗೆ ರಾವತ್ ‘ಕಾನೂನು ಎಂದರೇನು? ನಾವು ಕಂಗನಾಗೆ ಪಾಠ ಕಲಿಸಬೇಕಿದೆ’ ಎಂದಿದ್ದರು. ಕಟ್ಟಡ ಕೆಡವುವ ಸಂಬಂಧ ಅಂತಿಮ ಆದೇಶ ನೀಡುವ ಮೊದಲೇ ಕಟ್ಟಡದ ಹೊರಭಾಗವನ್ನು ಕೆಡವಲಾಗಿತ್ತು. ಬಾಂಬೆ ಹೈಕೋರ್ಟಿನಿಂದ ನೀಡಲಾದ ತಡೆಯಾಜ್ಞೆ ಆದೇಶವನ್ನು ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಧಿಕಾರಿಗಳಿಗೆ ತೋರಿಸುವವರೆಗೂ ಅಂದರೆ ಸೆ. 10ರವರೆಗೆ ತೆರವು ಕಾರ್ಯ ಮುಂದುವರೆಯಿತು" ಎಂದು ಅವರು ವಾದ ಮಂಡಿಸಿದರು.

ಕಂಗನಾ ಪರ ಅಡ್ವೊಕೇಟ್ ಆನ್ ರೆಕಾರ್ಡ್ ರಿಜ್ವಾನ್ ಸಿದ್ದಿಕಿ ಅವರು ವಿವಾದ ಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆ ಆರಂಭವಾಗಲಿದೆ ಎಂಬ ವಿಷಯವನ್ನು ಬಿಎಂಸಿ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ, ತನ್ನನ್ನು ಬಂಗಲೆಯ ಹೊರಗಿಟ್ಟು ಬೀಗ ಹಾಕಲಾಯಿತು. ಬಿಎಂಸಿ ಅಧಿಕಾರಿಗಳು ಕಾಯಲು ನಿರಾಕರಿಸಿದರು ಎಂದು ಹೇಳಿದರು.

ಬಿಎಂಸಿ ಕಂಗನಾಗೆ ಕಳುಹಿಸಿದ ನೋಟಿಸ್ ಮತ್ತು ವರದಿಗಳಲ್ಲಿ ವಾಸ್ತವಿಕ ವ್ಯತ್ಯಾಸಗಳು ಮತ್ತು ಕಾರ್ಯವಿಧಾನದ ದೋಷಗಳಿವೆ ಎಂದು ಸರಾಫ್ ವಾದಿಸಿದರು.

ಈ ಹಂತದಲ್ಲಿ ನ್ಯಾಯಾಲಯ ‘ಅನಧಿಕೃತವಾದ ಕಟ್ಟಡ ನಿರ್ಮಾಣವಾಗಿದ್ದು ಒಂದು ವರ್ಷದ ನಂತರ ಅದಕ್ಕೆ ಬಣ್ಣ ಬಳಿಯಲಾಗಿದ್ದರೆ ಅದರ ವಿರುದ್ಧ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸೆಕ್ಷನ್ 354 ಎ ಅನ್ನು ಚಲಾಯಿಸಬಹುದು ಎಂದು ನಾವು ಭಾವಿಸುವುದಿಲ್ಲ” ಎಂದಿತು.

ಬಿಎಂಸಿ ಅನುಮತಿ ಪಡೆದು ದುರಸ್ತಿ ಕಾರ್ಯಗಳನ್ನು ನಡೆಸಲಾಗಿದೆ ಎಂದು ಸರಾಫ್ ವಾದಿಸಿದರು. ಆದರೆ ಅಕ್ರಮ ನಡೆದಿದೆ ಎಂದು ಬಿಎಂಸಿ ಪರ ವಕೀಲ ಚಿನೋಯ್ ವಿವರಿಸಿದರು. ಇಬ್ಬರೂ ವಕೀಲರು ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟರು.

ದುರಸ್ತಿ ವೇಳೆ ಒಬ್ಬನೇ ವ್ಯಕ್ತಿಯನ್ನು ವಾಟರ್ ಪ್ರೂಫಿಂಗ್ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು ಎಂಬ ವಾದಕ್ಕೆ ಬಿಎಂಸಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ 6 ಮಂದಿ ಕಾರ್ಮಿಕರಿದ್ದರು ಎಂದು ನ್ಯಾಯಾಲಯಕ್ಕೆ ದಾಖಲೆಗಳನ್ನು ಒದಗಿಸಿದರು. ಆದರೆ ಛಾಯಾಚಿತ್ರದಲ್ಲಿರುವ ಎಲ್ಲಾ ವ್ಯಕ್ತಿಗಳು ಕಾರ್ಮಿಕರಂತೆ ಕಾಣುತ್ತಾರೆಯೇ ಎಂದು ಪ್ರಶ್ನಿಸಿದ ಸರಾಫ್ ಹೀಗೆ ನುಡಿದರು:

‘ತಪ್ಪಾಗಿ ನಿಲುವು ತಳೆದು ಅದರ ಸಮರ್ಥನೆಗೆ ಹೆಚ್ಚು ಹೆಚ್ಚು ಯತ್ನಿಸಿದರೆ ನೀವು ಅದರಲ್ಲಿ ಸಿಲುಕಿಕೊಳ್ಳುತ್ತೀರಿ.’
ಬಿರೇಂದ್ರ ಸರಾಫ್, ಕಂಗನಾ ಪರ ವಾದ ಮಂಡಿಸಿದ ಹಿರಿಯ ವಕೀಲ

ಜೊತೆಗೆ ಕಂಗನಾ ರನೌತ್ ಬಂಗಲೆಯನ್ನು ಬಿಎಂಸಿ ಉರುಳಿಸಿದ್ದು ದುರುದ್ದೇಶದಿಂದ ಎಂದು ಸರಾಫ್ ಹೇಳಿದರು.

ತೆರವಿಗೆ ಸಂಬಂಧಿಸಿದಂತೆ ಕೆಲ ಸ್ಪಷ್ಟನೆಗಳನ್ನು ನೀಡುವಂತೆ ನ್ಯಾಯಾಲಯ ಚಿನೋಯ್ ಅವರಿಗೆ ಸೂಚಿಸಿತು. ಸೆ.28ರ ಸೋಮವಾರ ಬೆಳಗ್ಗೆ 11.30ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.