KSN Rajesh

 
ಸುದ್ದಿಗಳು

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮಂಗಳೂರು ನ್ಯಾಯಾಲಯಕ್ಕೆ ಶರಣಾದ ವಕೀಲ ರಾಜೇಶ್

ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನುಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು.

Ramesh DK

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ವಕೀಲ ಕೆ ಎಸ್‌ ಎನ್‌ ರಾಜೇಶ್‌ ಇಂದು ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಎರಡನೇ ವರ್ಷದ ಕಾನೂನು ವಿದ್ಯಾರ್ಥಿನಿ ಮತ್ತು ಇಂಟರ್ನಿಯಾಗಿ ದಾಖಲಿಸಿದ್ದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಪೊಲೀಸರು ಮತ್ತು ನ್ಯಾಯಾಧೀಶರ ಮೇಲೆ ಆರೋಪಿ ವಕೀಲ ಪ್ರಭಾವ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಮೂರ್ತಿ ಕೆ ನಟರಾಜನ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯ ನಾಶ ಮಾಡಬಹುದು ಎಂದು ನಿರೀಕ್ಷಣಾ ಜಾಮೀನು ನಿರಾಕರಣೆ ವೇಳೆ ತಿಳಿಸಿದ್ದರು.

ಅಲ್ಲದೆ ಆರೋಪಿಯನ್ನು ಬಂಧಿಸಲು ಮಂಗಳೂರು ಪೊಲೀಸರು ದೇಶದೆಲ್ಲೆಡೆ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ್ದರು. ಆರೋಪಿ ದೇಶ ತೊರೆಯುವುದನ್ನು ತಪ್ಪಿಸುವ ಸಲುವಾಗಿ ನೋಟಿಸ್‌ ಜಾರಿ ಮಾಡಲಾಗಿತ್ತು.


ಲೋಕಾಯುಕ್ತ ಪರ ವಕೀಲ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಆರೋಪಿಯು ಕೆಎಸ್‌ಎನ್‌ಆರ್ ಲಾ ಅಸೋಸಿಯೇಟ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿ ಕಳೆದ ಅಕ್ಟೋಬರ್‌ನಲ್ಲಿ ಸಂತ್ರಸ್ತೆ ಪೊಲೀಸ್ ದೂರು ದಾಖಲಿಸಿದ್ದರು.

ಅತ್ಯಾಚಾರ ಯತ್ನ ಮಾತ್ರವಲ್ಲದೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪದಡಿ ಅವರ ವಿರುದ್ಧ ಮತ್ತೊಂದು ದೂರು ದಾಖಲಾಗಿತ್ತು. ಮಹಿಳಾ ಜನಜಾಗೃತಿ ವೇದಿಕೆಯ ಅಧ್ಯಕ್ಷೆಯನ್ನು ಅದಕ್ಕಾಗಿ ಬಳಸಿಕೊಂಡ ಆರೋಪ ಅವರ ಮೇಲಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮಾಡಿದ ಇಬ್ಬರು ಪೊಲೀಸರು ಮತ್ತು ಮಂಗಳೂರು ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಪವಿತ್ರ ಆಚಾರ್ಯ ಎಂಬುವವರನ್ನು ಬಂಧಿಸಲಾಗಿತ್ತು.

ತಿಂಗಳುಗಳು ಉರುಳಿದರೂ ವಕೀಲರನ್ನು ಬಂಧಿಸದೇ ಇರುವುದಕ್ಕೆ ಸಮಾಜದ ವಿವಿಧ ವಲಯಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಪೊಲೀಸರು ಕೂಡ ಆರೋಪಿಯನ್ನು ಬಂಧಿಸುವುದಾಗಿ ಹೇಳಿಕೆ ನೀಡುತ್ತಿದ್ದರು. ಇಂದು ಮಧ್ಯಾಹ್ನ ಅವರು ನ್ಯಾಯಾಲಯಕ್ಕೆ ಶರಣಾಗಿರುವುದಾಗಿ ಮೂಲಗಳು ತಿಳಿಸಿವೆ.