Supreme Court 
ಸುದ್ದಿಗಳು

ಶಾಕೆರೆ ಖಲೀಲಿ ಹತ್ಯೆ ಪ್ರಕರಣ: ಸ್ವಾಮಿ ಶ್ರದ್ಧಾನಂದನ ಪೆರೋಲ್ ಅರ್ಜಿ ಮತ್ತೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ತನಗೆ ವಿಧಿಸಿದ್ದ ಮರಣದಂಡನೆಯನ್ನು ಆಜೀವ ಪರ್ಯಂತ ಸಜೆಯಾಗಿ ಬದಲಿಸಿದ್ದ 2008ರ ತೀರ್ಪು ಮರುಪರಿಶೀಲಿಸುವಂತೆ ಶ್ರದ್ಧಾನಂದ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್ ನೀಡಿದೆ.

Bar & Bench

ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳಾದ, ತನ್ನ ಪತ್ನಿಯಾಗಿದ್ದ ಶಾಕೆರೆ ಖಲೀಲಿ ಅವರನ್ನು ಜೀವಂತ ಸಮಾಧಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಆಜೀವ ಪರ್ಯಂತ ಸೆರೆವಾಸ ಅನುಭವಿಸುತ್ತಿರುವ 84 ವರ್ಷದ ಸ್ವಯಂ ಘೋಷಿತ ದೇವಮಾನವ ಶ್ರದ್ಧಾನಂದ ಸಲ್ಲಿಸಿದ್ದ ಪೆರೋಲ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಮತ್ತೆ ತಿರಸ್ಕರಿಸಿದೆ [ಸ್ವಾಮಿ ಶ್ರದ್ಧಾನಂದ ಅಲಿಯಸ್‌ ಮುರಳಿ ಮನೋಹರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಶ್ರದ್ಧಾನಂದ 30 ವರ್ಷಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾನೆ. ಆತನಿಗೆ ಪೆರೋಲ್ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು ಇದು ಎರಡನೇ ಬಾರಿ. ಕಳೆದ ವರ್ಷ ಏಪ್ರಿಲ್‌ನಲ್ಲಿ ಆತನ ಮೊದಲ ಪೆರೋಲ್‌ ಅರ್ಜಿ ತಿರಸ್ಕೃತವಾದ ಬಳಿಕ ಕಳೆದ ಜುಲೈನಲ್ಲಿ ಆತ ಎರಡನೇ ಅರ್ಜಿ ಸಲ್ಲಿಸಿದ್ದ.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ , ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಕೆವಿ ವಿಶ್ವನಾಥನ್ ಅವರಿದ್ದ ಪೀಠ  ಇಂದು ಈ ಎರಡನೇ ಮನವಿ ನಿರ್ವಹಣಾರ್ಹವಲ್ಲ ಎಂದು ತಿಳಿಸಿ ತಿರಸ್ಕರಿಸಿತು.

ಆದರೆ, ತನಗೆ ವಿಧಿಸಿದ್ದ ಮರಣದಂನೆಯನ್ನು ಮಾರ್ಪಡಿಸಿ, ಅದರ ಬದಲಿಗೆ ಪೆರೋಲ್‌, ಫರ್ಲೋ ಅಥವಾ ಕ್ಷಮಾದಾನ ಪಡೆಯದೆ ಆಜೀವ ಪರ್ಯಂತ ಸೆರೆವಾಸ ಅನುಭವಿಸಬೇಕು ಎಂದು 2008ರಲ್ಲಿ ನೀಡಲಾಗಿದ್ದ ತೀರ್ಪನ್ನು ಪರಿಶೀಲಿಸುವಂತೆ ಶ್ರದ್ಧಾನಂದ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್ ನೀಡಿದೆ.

ಪೆರೋಲ್‌, ಫರ್ಲೋ ಅಥವಾ ಕ್ಷಮಾದಾನ ಪಡೆಯದೆ ಶ್ರದ್ಧಾನಂದ ಆಜೀವ ಪರ್ಯಂತ ಸೆರೆವಾಸ ಅನುಭವಿಸಬೇಕು ಎಂಬ ತೀರ್ಪನ್ನು ಮೇ ತಿಂಗಳಲ್ಲಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಇಂದು ವಾದ ಮಂಡಿಸಿದ ಶ್ರದ್ಧಾನಂದನ ಪರ ವಕೀಲರು ಕಾಲದೊಂದಿಗೆ ಜನ ಕೂಡ ಬದಲಾಗಿರುತ್ತಾರೆ ಎಂದು ವಾದಿಸಿದರು.

ಶಿಕ್ಷೆ ಜಾರಿ ಪ್ರಾಧಿಕಾರದ ಮುಂದಿರುವ ಏಕೈಕ ಪ್ರಶ್ನೆ ವರ್ತನೆಗೆ ಸಂಬಂಧಿಸಿದ್ದು. ಕ್ಷಮಾದಾನದ ಮಂಜೂರಾತಿ ವಿಚಾರವಾಗಿ ಬೇರೆ ಅನುಮಾನಗಳಿಲ್ಲ. ಆತನಲ್ಲಿ ಸುಧಾರಣೆ ಉಂಟಾಗಿದೆಯೇ ಅಥವಾ ಅಪರಾಧ ನಡೆದಿದ್ದ ಸಮಯದಲ್ಲಿದ್ದ ವರ್ತನೆಯೇ ಈಗಲೂ ಇದೆಯೇ ಎಂಬುದಾಗಿದೆ. ಪೆರೋಲ್‌ನಂತೆಯೇ ಫರ್ಲೋ ಕೂಡ ಅಪರಾಧಿಯ ಹಕ್ಕಾಗಿದ್ದು ಅದನ್ನು ಶ್ರದ್ಧಾನಂದ ಅವರಿಗೆ ನಿರಾಕರಿಸಲಾಗಿದೆ. ಕ್ಷಮಾದಾನ ನಂತರ ನೀಡಬಹುದಾದದ್ದು. ಐದು ಬಾರಿ ಶ್ರದ್ಧಾನಂದ ಅವರಿಗೆ ಅತ್ಯುತ್ತಮ ಕೈದಿ ಎಂಬ ಮನ್ನಣೆ ದೊರೆತಿದೆ. ರಾಜೀವ್‌ ಗಾಂಧಿ ಹಂತಕರು ಭಯೋತ್ಪಾದಕರಾಗಿದ್ದರೂ ಫರ್ಲೋ ಮತ್ತು ಪೆರೋಲ್‌ ನೀಡಿ ಕ್ಷಮಿಸಲಾಯಿತು ಎಂದು ಆತನ ಪರ ವಕೀಲರು ವಾದಿಸಿದರು.

ಈ ಸಂಬಂಧ ಮಧ್ಯ ಪ್ರದೇಶ ಸರ್ಕಾರ (ಶ್ರದ್ಧಾನಂದನನ್ನು ಪ್ರಸ್ತುತ ಮಧ್ಯಪ್ರದೇಶದ ಸಾಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ ) ಮತ್ತು ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್‌ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

"ನೋಟೀಸ್ ನೀಡಿ. ಅರ್ಜಿದಾರರು ಬಂಧಿತರಾಗಿರುವ ಅಂಶವನ್ನು ಪರಿಗಣನೆಗೆ ತೆಗೆದುಕೊಂಡು, ನಾವು ವಿಳಂಬವನ್ನು ಮನ್ನಿಸಿದ್ದೇವೆ" ಎಂದು ಪೀಠ ಇಂದು ಆದೇಶಿಸಿತು.

ವರುಣ್‌ ಠಾಕೂರ್‌ ಮೂಲಕ ಶ್ರದ್ಧಾನಂದ ಅರ್ಜಿ ಸಲ್ಲಿಸಿದ್ದರೆ, ಕೊಲೆ ಪ್ರಕರಣದ ಮೊದಲ ಮಾಹಿತಿದಾರೆ ಮತ್ತು ಮೃತ ಶಾಕೆರೆ ಖಲೀಲಿ ಮಗಳು ರೆಹಾನೆ ಖಲೀಲಿ ಅವರ ಪರವಾಗಿ ಹಿರಿಯ ವಕೀಲ ಸಂಜಯ್ ಹೆಗ್ಡೆ ಮತ್ತು ವಕೀಲ ಪ್ರಾಂಜಲ್ ಕಿಶೋರ್ ವಾದ ಮಂಡಿಸಿದ್ದರು.