Coconut Tree 
ಸುದ್ದಿಗಳು

[ತೆರಿಗೆ ಪ್ರಕರಣ] ತೆಂಗಿನೆಣ್ಣೆಯ ಸಣ್ಣ ಪೊಟ್ಟಣ ಖಾದ್ಯ ತೈಲ ವರ್ಗದಡಿ ಬರಲಿದೆ, ತಲೆಗೂದಲಿನ ಎಣ್ಣೆ ಅಡಿಯಲ್ಲ: ಸುಪ್ರೀಂ

ಕೊಬ್ಬರಿ ಎಣ್ಣೆಗೆ ಪ್ರಸಾಧನ ಅಥವಾ ಸೌಂದರ್ಯವರ್ಧಕದ ಸಾಮರ್ಥ್ಯವಿದೆ ಎಂಬ ಅಂಶ ಅದನ್ನು ತೆಂಗಿನ ಎಣ್ಣೆಯ ವ್ಯಾಪ್ತಿಯಿಂದ ಹೊರಗಿಟ್ಟು ತಲೆಗೂದಲಿನ ಎಣ್ಣೆ ಎಂದು ವರ್ಗೀಕರಿಸಲು ಸಾಕಾಗದು ಎಂದು ತರ್ಕಿಸಿದ ಸುಪ್ರೀಂ ಕೋರ್ಟ್.

Bar & Bench

ಕೇಂದ್ರ ಅಬಕಾರಿ ಸುಂಕ ಕಾಯಿದೆ- 1985ರ ಅಡಿ ತೆರಿಗೆ ಉದ್ದೇಶಗಳಿಗಾಗಿ ತೆಂಗಿನ ಎಣ್ಣೆಯನ್ನು 5 ಮಿಲಿಯಿಂದ 2 ಲೀಟರ್‌ಗಳವರೆಗಿನ ಸಣ್ಣ ಪ್ರಮಾಣದಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುವುದನ್ನು 'ಖಾದ್ಯ ತೈಲ' ಎಂದು ವರ್ಗೀಕರಿಸಬಹುದೇ ವಿನಾ ತಲೆಗೂದಲಿನ ಎಣ್ಣೆ ಎಂದಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ ಈಚೆಗೆ ಹೇಳಿದೆ [ಸೇಲಂನ ಕೇಂದ್ರ ಅಬಕಾರಿ ಆಯುಕ್ತರು ಮತ್ತು ಮದನ್‌ ಆಗ್ರೋ ಇಂಡಸ್ಟ್ರೀಸ್‌ ನಡುವಣ ಪ್ರಕರಣ].

ಹೀಗಾಗಿ ಇದಕ್ಕೆ ಶೇ 5ರಷ್ಟು ಕಡಿಮೆ ಸುಂಕ ವಿಧಿಸಬಹುದೇ ವಿನಾ ತಲೆಗೂದಲಿನೆಣ್ಣೆಗೆ ವಿಧಿಸುವ ಶೇ. 16ರಷ್ಟು ತೆರಿಗೆಯನ್ನಲ್ಲ ಎಂದು ಹೇಳಿದೆ.

ಕೊಬ್ಬರಿ ಎಣ್ಣೆಗೆ ಪ್ರಸಾಧನ ಅಥವಾ ಸೌಂದರ್ಯವರ್ಧಕದ ಸಾಮರ್ಥ್ಯವಿದೆ ಎಂಬ ಅಂಶ ಅದನ್ನು ತೆಂಗಿನ ಎಣ್ಣೆಯ ವ್ಯಾಪ್ತಿಯಿಂದ ಹೊರಗಿಟ್ಟು ತಲೆಗೂದಲಿನ ಎಣ್ಣೆ ಎಂದು ವರ್ಗೀಕರಿಸಲು ಸಾಕಾಗದು ಎಂದು ಸುಪ್ರೀಂ ಕೋರ್ಟ್ ತರ್ಕಿಸಿದೆ.

ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿವಿ ಸಂಜಯ್ ಕುಮಾರ್ ಮತ್ತು ಆರ್ ಮಹದೇವನ್ ಅವರಿದ್ದ ಪೀಠ ಅಂತಹ ಎಣ್ಣೆಯನ್ನು ತಲೆಗೂದಲಿನ ತೈಲ ಎಂದು ವರ್ಗೀಕರಿಸಬೇಕಾದರೆ ಕೇಂದ್ರೀಯ ಅಬಕಾರಿ ಸುಂಕ ಕಾಯಿದೆಯ ಕೆಲ ನಿಯಮಾವಳಿಗಳಿಗೆ ಅದು ಅನುಗುಣವಾಗಿರಬೇಕು ಎಂದು ಹೇಳಿದೆ.

ಸುಂಕ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (CESTAT) ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೇಂದ್ರೀಯ ಅಬಕಾರಿ ಆಯುಕ್ತರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ಕಾಯಿದೆಯ ಮೊದಲ ಶೆಡ್ಯೂಲ್‌ನ ಸೆಕ್ಷನ್ III ರ ಅಧ್ಯಾಯ ಶಿರೋನಾಮೆ 1513 ರ ಅಡಿಯಲ್ಲಿ 'ಖಾದ್ಯ ತೈಲ' ಎಂದು ವರ್ಗೀಕರಿಸಬಹುದು ಎಂದಿದೆ.

CETAದ ಅಧ್ಯಾಯ 33 ರ ಶೀರ್ಷಿಕೆ 3305 ರ ಅಡಿಯಲ್ಲಿ ಸಣ್ಣ ಪೊಟ್ಟಣ ಇಲ್ಲವೇ ಬಾಟಲಿಗಳಲ್ಲಿ ಪ್ಯಾಕ್ ಮಾಡಿದ ತೆಂಗಿನ ಎಣ್ಣೆಯನ್ನು ತಲೆಗೂದಲಿನ ಎಣ್ಣೆ ಎಂದು ವರ್ಗೀಕರಿಸಬೇಕು ಎಂಬ ಅಬಕಾರಿ ಆಯುಕ್ತರ ಶೋಧನೆಗೆ ವಿರುದ್ಧವಾಗಿ CESTAT ತೀರ್ಪು ನೀಡಿತ್ತು.

ಪ್ರಕರಣ ಕೆಲ ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ಎದುರು ಬಂದಾಗ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಮತ್ತು ಆರ್ ಭಾನುಮತಿ (ಇದೀಗ ಇಬ್ಬರೂ ನಿವೃತ್ತರು) ಅವರಿದ್ದ ಪೀಠ ಭಿನ್ನ ತೀರ್ಪು ನೀಡಿತ್ತು.

ನ್ಯಾ. ರಂಜನ್ ಗೊಗೊಯ್ ಅವರು ಸಣ್ಣ ಪ್ಯಾಕಿಂಗ್‌ಗಳಲ್ಲಿನ ತೆಂಗಿನ ಎಣ್ಣೆಯನ್ನು ಶಿರೋನಾಮೆ 1513ರ ಅಡಿಯಲ್ಲಿ ಖಾದ್ಯ ಎಣ್ಣೆ ಎಂದು ವರ್ಗೀಕರಿಸುವುದು ಸೂಕ್ತ ಎಂಬುದಾಗಿ ಅಭಿಪ್ರಾಯಪಟ್ಟಿದ್ದರು.

ಮತ್ತೊಂದೆಡೆ, ನ್ಯಾ. ಆರ್ ಭಾನುಮತಿ, ಕೊಬ್ಬರಿ ಎಣ್ಣೆಯನ್ನು ತಲೆಗೂದಲಿನ ಎಣ್ಣೆಯಾಗಿ ಬಳಸಲು ಸೂಕ್ತವಾದ ಸಣ್ಣ ಸ್ಯಾಶೆಗಳು/ ಕಂಟೈನರ್‌ಗಳಲ್ಲಿ ಪ್ಯಾಕ್ ಮಾಡಲಾಗಿದ್ದು, ಇದನ್ನು ಶೀರ್ಷಿಕೆ 3305 ರ ಅಡಿಯಲ್ಲಿ ವರ್ಗೀಕರಿಸಬಹುದು ಎಂದು ತೀರ್ಮಾನಿಸಿದ್ದರು. ಹೀಗಾಗಿ ಪ್ರಕರಣ ತ್ರಿಸದಸ್ಯ ಪೀಠದ ಕದ ತಟ್ಟಿತ್ತು.

ಶುದ್ಧ ತೆಂಗಿನ ಎಣ್ಣೆಯನ್ನು ಕಾಯಿದೆಯ 3305ನೇ ಶಿರೋನಾಮೆ ಅಡಿಯಲ್ಲಿ (ಶೇ.16 ತೆರಿಗೆ) ನಿರ್ದಿಷ್ಟವಾಗಿ ವರ್ಗೀಕರಿಸಬೇಕು ಎಂಬ ಅಬಕಾರಿ ಇಲಾಖೆ ವಾದವನ್ನು ತಿರಸ್ಕರಿಸಲಾಗಿದೆ ಎಂದು ತ್ರಿಸದಸ್ಯ ಪೀಠ ತಿಳಿಸಿದೆ.

ಆದರೆ ತೆಂಗಿನೆಣ್ಣೆಯನ್ನೇ ಸಣ್ಣ ಬಾಟಲಿಗಳಲ್ಲಿ ಪ್ಯಾಕ್‌ ಮಾಡಿ ತಲೆಗೂದಲಿನ ತೈಲದ ಹೆಸರಿನಲ್ಲಿ ಮಾರಾಟ ಮಾಡಿದರೆ ಆಗ ಅದನ್ನು ಕಾಯಿದೆಯಡಿ ತಲೆಗೂದಲಿನ ಎಣ್ಣೆ ಎಂದೇ ವರ್ಗೀಕರಿಸಬೇಕು ಎಂಬುದಾಗಿ ತಿಳಿಸಿದ ಪೀಠ ಮೇಲ್ಮನವಿ ವಜಾಗೊಳಿಸಿತು.