ಕುಲಾಂತರಿ ಸಾಸಿವೆಯ ವಾಣಿಜ್ಯ ಮಾರಾಟಕ್ಕೆ ಅನುಮತಿ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ ಮಂಗಳವಾರ ಭಿನ್ನ ತೀರ್ಪು ನೀಡಿದೆ [ ಜೀನ್ ಕ್ಯಾಂಪೇನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ ] .
ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸಂಜಯ್ ಕರೋಲ್ ಅವರಿದ್ದ ವಿಭಾಗೀಯ ಪೀಠ ಇಂದು ಎರಡು ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿತು.
ಭಾರತದಲ್ಲಿ ಕುಲಾಂತರಿ ಸಾಸಿವೆಯ ವಾಣಿಜ್ಯ ಮಾರಾಟ ಮತ್ತು ಬಿಡುಗಡೆಗೆ ಸದ್ಯಕ್ಕೆ ಅನುಮತಿ ನೀಡುವುದರ ವಿರುದ್ಧ ನ್ಯಾಯಮೂರ್ತಿ ನಾಗರತ್ನ ತೀರ್ಪಿತ್ತರು.
ಭಾರತದಲ್ಲಿ ಕುಲಾಂತರಿ ಸಾಸಿವೆ ಉಂಟು ಮಾಡುವ ಪರಿಣಾಮ ಕುರಿತು ವಿದೇಶಿ ಸಂಶೋಧನಾ ಅಧ್ಯಯನಗಳನ್ನು ಮಾತ್ರ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ ಬಳಸಿಕೊಂಡಿದೆ. ಸ್ಥಳೀಯವಾಗಿ ನಡೆಸಿದ ಅಧ್ಯಯನವನ್ನು ಅದು ಗಮನಿಸಬೇಕಿತ್ತು. ಆದರೆ ಹಾಗೆ ಮಾಡಿಲ್ಲ ಎಂದು ಅವರು ಹೇಳಿದರು.
ಆದರೆ ನ್ಯಾ. ಕರೋಲ್ ಅವರು ಇದಕ್ಕೆ ಸಮ್ಮತಿಸಲಿಲ್ಲ. ಬದಲಿಗೆ ಕುಲಾಂತರಿ ಸಾಸಿವೆಯ ವಾಣಿಜ್ಯ ಮಾರಾಟವನ್ನು ಅನುಮೋದಿಸುವ ಜಿಇಎಸಿ ನಿರ್ಧಾರವನ್ನು ಎತ್ತಿಹಿಡಿದರು.
ಜಿಇಎಸಿ ಸಂಯೋಜನೆ ನಿಯಮಾನುಸಾರ ಇದೆ. ಹಾಗಾಗಿ ಅದರ ವಿರುದ್ಧದ ಸಾಂವಿಧಾನಿಕ ಆಕ್ಷೇಪಣೆ ವಿಫಲವಾಗುತ್ತದೆ. ಅನುಮೋದನೆ ನೀಡಿರುವ ಜಿಇಎಸಿ ಪರಿಣತ ಸಂಸ್ಥೆಯಾಗಿದೆ. ಆದ್ದರಿಂದ ಅನುಮೋದನೆಯನ್ನು ಪ್ರಶ್ನಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಅವರು ನುಡಿದರು.
ಭಿನ್ನ ತೀರ್ಪಿನ ನಡುವೆಯೂ ನ್ಯಾಯಮೂರ್ತಿಗಳು ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಒಮ್ಮತ ಪ್ರಕಟಿಸಿದರು.
ಜಿಇಎಸಿ ನಿರ್ಧಾರವನ್ನು ನ್ಯಾಯಾಂಗದ ಪರಿಶೀಲನೆಗೆ ಅನುಮತಿಸುವುದು; ಕುಲಾಂತರಿ ಬೆಳಗಳಿಗೆ ತಡೆರಹಿತ ಅನುಮತಿ ನೀಡುವ ವಿಧಾನಕ್ಕಾಗಿ ರಾಷ್ಟ್ರೀಯ ನೀತಿ ರೂಪಿಸುವುದನ್ನು ಕೇಂದ್ರ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಮುಂದುವರೆದು, ರಾಷ್ಟ್ರೀಯ ನೀತಿ ರೂಪಿಸುವುದಕ್ಕಾಗಿ ಪರಿಸರ ಸಚಿವಾಲಯ 4 ತಿಂಗಳೊಳಗೆ ಸಭೆ ನಡೆಸಿ ನಿಯಮಗಳನ್ನೂ ಸಿದ್ಧಪಡಿಸಬೇಕು; ಕುಲಾಂತರಿ ತೈಲ ಆಮದು ವಿಚಾರದಲ್ಲಿ ಅಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಎಫ್‌ಎಸ್‌ಎಸ್‌ಎಐ) ಕಾಯಿದೆಯ ಸೆಕ್ಷನ್ 23 ಅನ್ನು ಅವಲಂಬಿಸಿರಬೇಕು ಎಂದು ತಿಳಿಸಿದೆ.
ಭಿನ್ನ ತೀರ್ಪು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಕುಲಾಂತರಿ ಸಾಸಿವೆಯ ವಾಣಿಜ್ಯ ಮಾರಾಟವನ್ನು ಸದ್ಯಕ್ಕೆ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ವಿಚಾರವಾಗಿ ಪ್ರಕರಣವನ್ನು ವಿಸ್ತೃತ ಪೀಠ ಆಲಿಸಬೇಕಿದ್ದು ಈ ಕಾರಣಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೆದುರು ಪ್ರಕರಣ ಇರಿಸಲಾಗಿದೆ.
'HT ಸಾಸಿವೆ DMH-11' ಎಂದು ನಾಮಕರಣಗೊಂಡಿರುವ ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಕೃಷಿ ಮತ್ತು ಬಿಡುಗಡೆಗೆ ಅನುಮತಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.