Waheed Parra, Srinagar District Court 
ಸುದ್ದಿಗಳು

ತಂದೆಗೆ ಚಿಕಿತ್ಸೆ: ಪಿಡಿಪಿ ನಾಯಕ ಕಾಶ್ಮೀರ ತೊರೆಯುವುದಕ್ಕೆ ಅನುಮತಿ ನಿರಾಕರಿಸಿದ ಶ್ರೀನಗರ ನ್ಯಾಯಾಲಯ

Bar & Bench

ತನ್ನ ತಂದೆಯ ಕ್ಯಾನ್ಸರ್ ಚಿಕಿತ್ಸೆಗಾಗಿ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಿಂದ ಒಂದು ವರ್ಷದ ಮಟ್ಟಿಗೆ ಹೊರಗೆ ತೆರಳು ಅನುಮತಿ ಕೋರಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕ ವಹೀದ್ ಉರ್ ರೆಹಮಾನ್ ಪ್ಯಾರಾ ಅವರು ಸಲ್ಲಿಸಿದ್ದ ಮನವಿಯನ್ನು ಶ್ರೀನಗರ ನ್ಯಾಯಾಲಯ ಇತ್ತೀಚೆಗೆ ತಿರಸ್ಕರಿಸಿದೆ [ವಹೀದ್‌ ಉರ್‌ ರೆಹಮಾನ್‌ ಪ್ಯಾರಾ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ನಡುವಣ ಪ್ರಕರಣ].

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿಯಲ್ಲಿ "ಭಯೋತ್ಪಾದನಾ ಚಟುವಟಿಕೆ" ಬೆಂಬಲಿಸಿದ ಆರೋಪ ಎದುರಿಸುತ್ತಿರುವ ಪ್ಯಾರಾ ಅವರು ಜಮ್ಮು ಕಾಶ್ಮೀರ ಹೈಕೋರ್ಟ್ ವಿಧಿಸಿದ್ದ ಜಾಮೀನು ಷರತ್ತಿನಂತೆ ವಿಚಾರಣಾ ನ್ಯಾಯಾಲಯದ ಅನುಮತಿಯಿಲ್ಲದೆ ಜಮ್ಮು ಕಾಶ್ಮೀರ ತೊರೆಯಲು ಅನುಮತಿಯಿಲ್ಲ.

ದೆಹಲಿ ಮತ್ತು ಮುಂಬೈಗೆ ಪ್ರಯಾಣಿಸಲು ಸಂಪೂರ್ಣ ಅನುಮತಿ ನೀಡಿದರೆ ಅದರಿಂದ ವಿಚಾರಣೆಗೆ ಅಡ್ಡಿಯಾಗುತ್ತದೆ ಮಾತ್ರವಲ್ಲ ಪ್ಯಾರಾ ದೇಶದಿಂದ ಪಲಾಯನ ಮಾಡುವ ನೈಜ ಆತಂಕ ಇದೆ ಎಂದು ವಿಶೇಷ ನ್ಯಾಯಾಧೀಶ ಸಂದೀಪ್ ಗಂದೋತ್ರಾ ಅವರು ಹೇಳಿದರು.

ಒಂದಲ್ಲಾ ಒಂದು ನೆಪವೊಡ್ಡಿ ಪ್ಯಾರಾ ಅವರು ಜಮ್ಮು ಕಾಶ್ಮೀರ ಮತ್ತು ದೇಶದಿಂದ ಹೊರಗೆ ಹೋಗಲು ಅರ್ಜಿ ಸಲ್ಲಿಸುವ ಪರಿಪಾಠ ಹೊಂದಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ಈ ಹಿಂದೆಯೂ ಅವರು ಅಮೆರಿಕಕ್ಕೆ ತೆರಳಲು ಮತ್ತು ತಂದೆಯ ಚಿಕಿತ್ಸೆಗಾಗಿ ಮುಂಬೈಗೆ ಪಯಣಿಸಲು ಅನುಮತಿ ಕೋರಿದ್ದನ್ನು ಅದು ಪ್ರಸ್ತಾಪಿಸಿತು.

ಪ್ರಕರಣದ ವಿಚಾರಣೆ ವಿಳಂಬ ಮಾಡಲೆಂದೇ ಅರ್ಜಿ ಸಲ್ಲಿಸಲಾಗಿದೆ ಎಂಬುದು ಸ್ಪಷ್ಟ. ಭಯೋತ್ಪಾದಕ ಇಲ್ಲವೇ ಪ್ರತ್ಯೇಕತಾವಾದಿ ಜಾಲಗಳೊಂದಿಗೆ ಸಂಪರ್ಕ ಬೆಳೆಸುವ ಆತಂಕ ಇರುವುದರಿಂದ ಅವರಿಗೆ ಅನುಮತಿ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.