Father Stan Swamy
Father Stan Swamy 
ಸುದ್ದಿಗಳು

ಬುಡಕಟ್ಟು ಸಮುದಾಯದ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ ಎಂದ ಎಡಿಜಿಪಿ

Bar & Bench

ಭೀಮಾ ಕೋರೆಗಾಂವ್‌ ಹಿಂಸಾಚಾರದ ಆರೋಪಿ, ಬುಡಕಟ್ಟು ಸಮುದಾಯದ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರಿಗೆ ಜೈಲು ಆಸ್ಪತ್ರೆಯಲ್ಲಿ (ನೀರು ಕುಡಿಯಲು ಅಗತ್ಯವಾದ) ಸ್ಟ್ರಾ ಮತ್ತು ಸಿಪ್ಪರ್‌ ಸೇರಿದಂತೆ ಎಲ್ಲಾ ಮೂಲಸೌಕರ್ಯ ಮತ್ತು ವೈದ್ಯಕೀಯ ನೆರವು ನೀಡಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸುನಿಲ್ ರಮಾನಂದ್ ʼಬಾರ್ ಅಂಡ್‌ ಬೆಂಚ್‌ʼಗೆ ತಿಳಿಸಿದ್ದಾರೆ.

ತಲೋಜಾ ಜೈಲು ಆಸ್ಪತ್ರೆಯಲ್ಲಿ ವೈದ್ಯಕೀಯ ನೆರವು ಅಗತ್ಯವಿರುವ ಎಲ್ಲಾ ಕೈದಿಗಳಿಗೆ ಸೌಲಭ್ಯಗಳನ್ನು ಒದಗಿಸಲಾಗಿದ್ದು ಅದರಂತೆ ಸ್ವಾಮಿ ಅವರಿಗೂ ಸಿಪ್ಪರ್‌ ಮಗ್‌, ಸಿಪ್ಪರ್‌ಬಾಟಲ್‌ ಹಾಗೂ ಸ್ಟ್ರಾಗಳನ್ನು ನೀಡಲಾಗಿದೆ ಎಂದು ರಮಾನಂದ್‌ ಸ್ಪಷ್ಟಪಡಿಸಿದ್ದಾರೆ. ಅಗತ್ಯವಿರುವ ಎಲ್ಲಾ ಕೈದಿಗಳಿಗೆ ತಲೋಜಾ ಜೈಲು ಆಸ್ಪತ್ರೆಯಲ್ಲಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ರಮಾನಂದ್ ಹೇಳಿದರು. ಅದರಂತೆ ಸ್ವಾಮಿಯವರಿಗೂ ಸಿಪ್ಪರ್ ಮಗ್, ಸಿಪ್ಪರ್ ಬಾಟಲ್ ಮತ್ತು ಸ್ಟ್ರಾಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಮತ್ತೊಂದೆಡೆ ಗೃಹ ಖಾತೆ ರಾಜ್ಯ ಸಚಿವ ಸತೇಜ್‌ ಪಾಟೀಲ್,‌ "ವರದಿಗಳು ತಿಳಿಸಿರುವಂತೆ ಜೈಲು ನಿಯಮಗಳಡಿ ಸ್ವಾಮಿ ಅವರಿಗೆ ಸೂಕ್ತ ಆರೈಕೆ ನೀಡಲಾಗುತ್ತಿದೆ" ಎಂದು ಖಚಿತಪಡಿಸಿದ್ದಾರೆ.

2018ರಲ್ಲಿ ನಡೆದ ಭೀಮಾ ಕೋರೆಗಾಂವ್‌ ಗಲಭೆಗಳಿಗೆ ಕುಮ್ಮಕ್ಕು ನೀಡಿದ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಟ್ಯಾನ್‌ ಸ್ವಾಮಿ ಅವರನ್ನು ರಾಂಚಿಯಲ್ಲಿರುವ ಅವರ ಮನೆಯಿಂದ ಅಕ್ಟೋಬರ್ 8 ರಂದು ಬಂಧಿಸಿತ್ತು. ನಂತರ ನ್ಯಾಯಾಂಗ ಬಂಧನದಡಿ ಅವರನ್ನು ಮಹಾರಾಷ್ಟ್ರದ ತಲೋಜಾ ಜೈಲಿನಲ್ಲಿರಿಸಲಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಜೈಲು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪಾರ್ಕಿನ್‌ಸನ್‌ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ತಮಗೆ ಸ್ಟ್ರಾ, ಸಿಪ್ಪರ್‌ ಇಲ್ಲದೆ ಆಹಾರ ಸೇವಿಸುವುದು ಕಷ್ಟವಾಗುತ್ತಿದೆ. ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡಿರುವ ಅವುಗಳನ್ನು ಮರಳಿಸುವಂತೆ ನಿರ್ದೇಶನ ನೀಡಬೇಕು ಎಂದು ಅವರು ಎನ್‌ಐಎ ವಿಶೇಷ ನ್ಯಾಯಾಲಯವನ್ನು ಕೋರಿದ್ದರು. ತಾನು ಸ್ವಾಮಿ ಅವರ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ನ್ಯಾಯಾಲಯ ತಿಳಿಸಿದ್ದರಿಂದ ನ 26ರಂದು ಸ್ವಾಮಿ ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ತಕ್ಷಣ ಹೊಸತೊಂದು ಅರ್ಜಿ ಸಲ್ಲಿಸಿದ ಸ್ವಾಮಿ ಅವರ ಪರ ವಕೀಲ ಶರೀಫ್‌ ಶೇಖ್‌ ಅವರು ತನ್ನ ಸ್ವಂತ ಖರ್ಚಿನಲ್ಲಿ ಸ್ಟ್ರಾ ಮತ್ತು ಸಿಪ್ಪರ್‌ ಒದಗಿಸುವಂತೆ ಕೋರಿದ್ದರು. ಡಿ. 4ರ ವೇಳೆಗೆ ಹೊಸ ಅರ್ಜಿಗೆ ಉತ್ತರ ನೀಡುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

ಈ ಮಧ್ಯೆ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ, ಜೈಲು ಅಧಿಕಾರಿಗಳು ಸ್ವಾಮಿ ಅವರಿಗೆ ನಿಯಮಿತವಾಗಿ ಔಷಧಿ, ಸೂಕ್ತ ಆಹಾರ, ಹಾಸಿಗೆ ಮತ್ತು ಬಿಸಿನೀರನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದರು. ಪಾರ್ಕಿನ್ಸನ್‌ ರೋಗದಿಂದ ಬಳಲುತ್ತಿರುವ ಕಾರಣ ಅವರ ಸಹಾಯಕ್ಕಾಗಿ ಇಬ್ಬರು ಪರಿಚಾರಕರನ್ನು ಕೂಡ ನೀಡಲಾಗಿದೆ ಎಂದು ಅವರು ಹೇಳಿದರು.

ಸ್ವಾಮಿ ಅವರ ಪರ ವಕೀಲ ಶೇಖ್‌ ಅವರನ್ನು ಸಂಪರ್ಕಿಸಲು ʼಬಾರ್‌ ಅಂಡ್‌ ಬೆಂಚ್‌ʼ ಯತ್ನಿಸಿತಾದರೂ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. ಪ್ರಕರಣ ಜೈಲು ಅಧಿಕಾರಿಗಳಿಗೆ ಸಂಬಂಧಿಸಿದ್ದರಿಂದ ಎನ್‌ಐಎ ಪರ ವಕೀಲ ಪ್ರಕಾಶ್‌ ಶೆಟ್ಟಿ ಪ್ರತಿಕ್ರಿಯಿಸಲು ನಿರಾಕರಿಸಿದರು.