Darshan, Pavitra Gowda & Supreme Court 
ಸುದ್ದಿಗಳು

ನಟ ದರ್ಶನ್‌, ಪವಿತ್ರಾ ಸಹಿತ 7 ಆರೋಪಿಗಳ ಜಾಮೀನು ರದ್ದತಿ ಕೋರಿಕೆ: ಸುಪ್ರೀಂಗೆ ರಾಜ್ಯ ಸರ್ಕಾರ ನೀಡಿರುವ ಕಾರಣಗಳೇನು?

ಮೆಸರ್ಸ್‌ ಕೃಷ್ಣ ಮತ್ತು ನಿಶಾನಿ ಲಾ ಚೇಂಬರ್ಸ್‌ ಮೂಲಕ ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

Siddesh M S

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ತಿಂಗಳು ನಟ ದರ್ಶನ್‌, ಅವರ ಗೆಳತಿ ಪವಿತ್ರಾ ಗೌಡ ಸೇರಿ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಮೆಸರ್ಸ್‌ ಕೃಷ್ಣ ಮತ್ತು ನಿಶಾನಿ ಲಾ ಚೇಂಬರ್ಸ್‌ ಮೂಲಕ ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಪವಿತ್ರಾ ಗೌಡ (ಎ 1), ದರ್ಶನ್‌ (ಎ 2) ಜಗದೀಶ್‌ ಜಗ್ಗ ಅಲಿಯಾಸ್‌ ಜಗ್ಗ (ಎ 6), ಅನುಕುಮಾರ್‌ ಅಲಿಯಾಸ್‌ ಅನು (ಎ 7), ಆರ್‌ ನಾಗರಾಜು (ಎ 11), ಎಂ ಲಕ್ಷ್ಮಣ್‌ (ಎ 12), ಪ್ರದೋಶ್‌ ಎಸ್‌. ರಾವ್‌ (ಎ 14) ಅವರಿಗೆ ಹೈಕೋರ್ಟ್‌ ಡಿಸೆಂಬರ್‌ 13ರಂದು ಜಾಮೀನು ಮಂಜೂರು ಮಾಡಿದ್ದು, ಕೆಳಗೆ ವಿವರಿಸಿರುವ ಕಾರಣಗಳಿಗಾಗಿ ಜಾಮೀನು ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

ದರ್ಶನ್‌ ಅವರು ಸಿನಿಮಾ ನಟ/ಸೆಲಿಬ್ರೆಟಿಯಾಗಿದ್ದು, ರಾಜ್ಯದ ಒಳಗೆ ಮತ್ತು ಹೊರಗೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಸಾಕ್ಷಿಗಳನ್ನು ತಿರುಚುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂಬುದನ್ನು ಹೈಕೋರ್ಟ್‌ ಪರಿಗಣಿಸಿಲ್ಲ.

ಸತ್ರ ನ್ಯಾಯಾಲಯದಲ್ಲಿ ಪ್ರಕರಣವು ಇನ್ನೂ ಆರೋಪ ನಿಗದಿ ಹಂತಕ್ಕೆ ಬಂದಿಲ್ಲ. ಅದಾಗ್ಯೂ, ಆರೋಪ ಪಟ್ಟಿಯಲ್ಲಿ 262 ಸಾಕ್ಷಿಗಳನ್ನು ಉಲ್ಲೇಖಿಸಿದ್ದು, ವಿಚಾರಣೆಯು ವಿಳಂಬವಾಗುವುದರಿಂದ ಜಾಮೀನು ಮಂಜೂರು ಮಾಡಲಾಗಿದೆ ಎಂದು ಹೈಕೋರ್ಟ್‌ ಹೇಳಿದೆ. ಹೈಕೋರ್ಟ್‌ನ ಈ ಅಭಿಪ್ರಾಯವು ಅವಸರದಿಂದ ಕೂಡಿರುವುದರಿಂದ ಇದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿದೆ.

ಆರೋಪಿಗಳು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬಲವಂತವಾಗಿ ಕಾರಿನಲ್ಲಿ ಬೆಂಗಳೂರಿಗೆ ಕರೆತಂದಿದ್ದಾರೆ. ಇದು ಐಪಿಸಿ ಸೆಕ್ಷನ್‌ 364ರ ಅಡಿ ಅಪರಾಧವಾಗಿದ್ದು, ಇದನ್ನು ಪರಿಗಣಿಸಲು ಹೈಕೋರ್ಟ್‌ ವಿಫಲವಾಗಿದೆ ಎಂದು ಆಕ್ಷೇಪಿಸಲಾಗಿದೆ.

ಲಭ್ಯ ಸಾಕ್ಷಿಯ ದಾಖಲೆಗಳನ್ನು ಪರಿಗಣಿಸದೇ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವುದನ್ನು ಹೈಕೋರ್ಟ್‌ ಸಮರ್ಥಿಸಿಲ್ಲ. 76 ಮತ್ತು 91ನೇ ಪ್ರತ್ಯಕ್ಷ ಸಾಕ್ಷಿಗಳು ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಆರೋಪಿಗಳು ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿರುವುದರ ಸಂಬಂಧ ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ನೀಡಿರುವುದನ್ನು ಹೈಕೋರ್ಟ್‌ ಪರಿಗಣಿಸಲು ವಿಫಲವಾಗಿದೆ.

ಎಲ್ಲಾ ಆರೋಪಿಗಳಿಗೆ ಒಂದೇ ತೆರನಾದ ಬಂಧನದ ಆಧಾರ ನೀಡಲಾಗಿದೆ. ಇದು ಹೈಕೋರ್ಟ್‌ನ ತೀರ್ಪಿಗೆ ಅನುಗುಣವಾಗಿಲ್ಲ ಎಂದು ಹೇಳಿ ಹೈಕೋರ್ಟ್‌ ಪ್ರಮಾದ ಎಸಗಿದೆ. ಕಾನೂನಿನ ಪ್ರಕಾರ ತನಿಖಾಧಿಕಾರಿಯು ಆರೋಪಿಗಳಿಗೆ ಏಕೆ ಬಂಧಿಸಲಾಗುತ್ತಿದೆ ಎಂಬುದರ ಸಾಮಾನ್ಯ ವಿಚಾರಗಳನ್ನು ತಿಳಿಸಿದರೆ ಸಾಕಾಗಿದೆ.

ದರ್ಶನ್‌ಗೆ ಹೈಕೋರ್ಟ್‌ ಆರು ವಾರಗಳ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆದರೆ, ಅವರು ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಹೀಗಾಗಿ, ಅವರು ನಿಯತ ಜಾಮೀನಿಗೆ ಅರ್ಹವಾಗಿಲ್ಲ.

ಸಾಂದರ್ಭಿಕ ಸಾಕ್ಷಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು, ಆರೋಪಿಗಳ ಬಟ್ಟೆ/ ಶೂ/ಚಪ್ಪಲಿಗಳಲ್ಲಿ ಸಂತ್ರಸ್ತನ ವಂಶವಾಹಿ ಗುರುತು, ಕರೆ ದಾಖಲೆ ವಿಶ್ಲೇಷಣೆ, ಸೆಲ್‌ ಟವರ್‌ ಸ್ಥಳ, ಸಿಸಿಟಿವಿ ತುಣುಕುಗಳು, ಅಪರಾಧದ ಸ್ಥಳದಲ್ಲಿ ಆರೋಪಿಗಳ ಓಡಾಟ, ಆರೋಪಿಗಳ ಮೊಬೈಲ್‌ನಲ್ಲಿ ಸಂತ್ರಸ್ತನ ಫೋಟೊಗಳು ಪತ್ತೆಯಾಗಿರುವುದನ್ನು ಹೈಕೋರ್ಟ್‌ ಪರಿಗಣಿಸಲು ವಿಫಲವಾಗಿದೆ ಎಂದು ಆಕ್ಷೇಪಿಸಲಾಗಿದೆ.

ಇದೆಲ್ಲದರ ಜೊತೆಗೆ ಮಧ್ಯಂತರ ಪರಿಹಾರದ ಭಾಗವಾಗಿ ಮಧ್ಯಂತರ ಏಕಪಕ್ಷೀಯ ಆದೇಶದ ಮೂಲಕ ಜಾಮೀನು ಆದೇಶವನ್ನು ತಡೆ ಹಿಡಿಯಬೇಕು ಎಂದು ರಾಜ್ಯ ಸರ್ಕಾರ ಕೋರಿದೆ. ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ವಾದಿಸಲಿದ್ದಾರೆ.