ಕುಟುಂಬಗಳಿಂದ ಬೆದರಿಕೆ ಎದುರಿಸುತ್ತಿದ್ದು, ಪೊಲೀಸರಿಂದ ಸಮರ್ಪಕ ಭದ್ರತೆ ಸಿಗಲಿಲ್ಲವೆಂದು ಅರ್ಜಿ ಸಲ್ಲಿಸಿದ್ದ 12 ಲಿವ್-ಇನ್ ದಂಪತಿಗಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಆಲಿಸಿದ ನ್ಯಾ. ವಿವೇಕ್ ಕುಮಾರ್ ಸಿಂಗ್, ಲಿವ್-ಇನ್ ಸಂಬಂಧದಲ್ಲಿರುವ ಪ್ರಾಪ್ತ ವಯಸ್ಕರಿಗೆ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ಪಡೆಯುವ ಹಕ್ಕು ಇದೆ ಎಂದು ತೀರ್ಪು ನೀಡಿದರು.
ಜಿಲ್ಲಾ ಪೊಲೀಸರ ಬಳಿ ಹೋದರೂ ಯಾವುದೇ ಪರಿಹಾರ ಸಿಗದ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಹೇಳಿ ಅನೇಕ ಪ್ರಕರಣಗಳು ದಾಖಲಾಗುತ್ತಿವೆ ಎಂಬುದಾಗಿ ಪೀಠ ತಿಳಿಸಿತು.
ಔಪಚಾರಿಕ ವಿವಾಹದ ಕೊರತೆಯು ಸಾಂವಿಧಾನಾತ್ಮಕ ರಕ್ಷಣೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೀಠ “ನಾಗರಿಕರು ಅಪ್ರಾಪ್ತ ವಯಸ್ಕರಾಗಿರಲಿ ಅಥವಾ ಪ್ರಾಪ್ತ ವಯಸ್ಕರಾಗಿರಲಿ, ವಿವಾಹಿತನಾಗಿರಲಿ ಅಥವಾ ಅವಿವಾಹಿತರಾಗಲಿ ಮಾನವರ ಬದುಕಿನ ಹಕ್ಕು ಅವೆಲ್ಲಕ್ಕೂ ಮಿಗಿಲಾದದ್ದು ಎಂಬುದನ್ನು ಪರಿಗಣಿಸಬೇಕು. ಅಲ್ಲದೆ ಅರ್ಜಿದಾರರು ವಿವಾಹವನ್ನು ಶಾಸ್ತ್ರೀಯವಾಗಿ ನೆರವೇರಿಸಿಲ್ಲ ಎಂಬ ಕಾರಣಕ್ಕೆ ಸಂವಿಧಾನದಡಿ ದೇಶದ ನಾಗರಿಕರಾಗಿ ಅವರಿಗೆ ದೊರೆತಿರುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗದು ಎಂದಿತು.
ಇಲ್ಲಿ ಮುಖ್ಯವಾಗಿರುವುದು ಸಮಾಜ ಅಂತಹ ಸಂಬಂಧಗಳನ್ನು ಒಪ್ಪುತ್ತದೆಯೇ ಎನ್ನುವುದಲ್ಲ ಬದಲಾಗಿ ಅಂತಹ ಸಂಬಂಧ ಬೆಳೆಸುವ ಪ್ರಾಪ್ತ ವಯಸ್ಕರಿಗೆ ಸಂವಿಧಾನದ ರಕ್ಷಣೆ ಇದೆಯೇ ಎಂಬುದಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಸಾಮಾಜಿಕ ನೈತಿಕತೆ ಮತ್ತು ವೈಯಕ್ತಿಕ ನೈತಿಕತೆ ಬದಲಾದರೂ ಅದು ಕಾನೂನುಬದ್ಧತೆಯ ಮೇಲೆ ಪರಿಣಾಮ ಬೀರದು. ಭಾರತೀಯ ಸಮಾಜದ ಅನೇಕ ವರ್ಗಗಳಲ್ಲಿ ಸಹಜೀವನ ಸ್ವೀಕಾರಾರ್ಹವಲ್ಲ ಎಂದು ಕಂಡುಬಂದರೂ ಲಿವ್-ಇನ್ ಸಂಬಂಧ ಕಾನೂನಿನಲ್ಲಿ ನಿಷೇಧಿತವಲ್ಲ ಎಂದು ನ್ಯಾಯಾಲಯ ಹೇಳಿತು.
ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯಿದೆಯು ಮದುವೆಯನ್ನು ಕಡ್ಡಾಯಗೊಳಿಸದೆ ಕೌಟುಂಬಿಕ ಸಂಬಂಧಗಳಲ್ಲಿ ಮಹಿಳೆಯರಿಗೆ ಪರಿಹಾರ ಒದಗಿಸುವ ಮೂಲಕ ವಿವಾಹೇತರ ಸಹಜೀವನಕ್ಕೆ ಮಾನ್ಯತೆ ನೀಡುತ್ತದೆ ಎಂದು ಅದು ನುಡಿಯಿತು.
ತೀರ್ಪಿನ ಪ್ರಮುಖ ಭಾಗ ಪ್ರಾಪ್ತವಯಸ್ಕರ ಸ್ವಾಯತ್ತತೆಗೆ ಒತ್ತು ನೀಡಿದೆ. ಒಬ್ಬ ವ್ಯಕ್ತಿ ಪ್ರಾಪ್ತವಯಸ್ಕನಾದ ನಂತರ, ಎಲ್ಲಿ ಮತ್ತು ಯಾರೊಂದಿಗೆ ವಾಸಿಸಬೇಕು ಎಂಬುದನ್ನು ತೀರ್ಮಾನಿಸುವ ಕಾನೂನಾತ್ಮಕ ಸ್ವಾತಂತ್ರ್ಯ ಅವನಿಗೆ/ಅವಳಿಗೆ ಇದೆ ಎಂದು ನ್ಯಾಯಾಲಯ ಹೇಳಿತು.
"ಒಬ್ಬ ವ್ಯಕ್ತಿಯು, ಪ್ರಬುದ್ಧನಾಗಿದ್ದರೆ, ಅವನ/ಅವಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡ ನಂತರ, ಕುಟುಂಬದ ಸದಸ್ಯರಾಗಿರಲಿ, ಬೇರೆ ಯಾವುದೇ ವ್ಯಕ್ತಿ ಆಕ್ಷೇಪಣೆ ಸಲ್ಲಿಸುವುದು ಮತ್ತು ಅವರ ಶಾಂತಿಯುತ ಅಸ್ತಿತ್ವಕ್ಕೆ ಅಡ್ಡಿಪಡಿಸುವುದು ಸರಿಯಲ್ಲ" ಎಂದು ನ್ಯಾಯಾಲಯ ವಿವರಿಸಿತು.
ಅಂತಹ ಸಂದರ್ಭಗಳಲ್ಲಿ ಪ್ರಭುತ್ವಕ್ಕೆ ಸಾಂವಿಧಾನಿಕ ಜವಾಬ್ದಾರಿ ಇರುತ್ತದೆ ಎಂದು ನ್ಯಾಯಾಲಯ ತಿಳಿಸಿತು. “ಸಂವಿಧಾನ ಹೇಳಿರುವ ಕರ್ತವ್ಯದ ಪ್ರಕಾರ, ಪ್ರತಿಯೊಬ್ಬ ನಾಗರಿಕನ ಜೀವ ಮತ್ತು ಸ್ವಾತಂತ್ರ್ಯ ರಕ್ಷಿಸುವುದು ಪ್ರಭುತ್ವದ ಅನಿವಾರ್ಯ ಕರ್ತವ್ಯ” ಎಂದಿತು.
ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಸಂವಿಧಾನದ 21ನೇ ವಿಧಿಯಡಿ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂದಿದ್ದ ಸುಪ್ರೀಂ ಕೋರ್ಟ್‌ನ ಹಲವು ತೀರ್ಪಗಳನ್ನು ಉಲ್ಲೇಖಿಸಿದ ನ್ಯಾಯಾಲಯ ಈ ಆಯ್ಕೆ ತಡೆಯುವುದು ಮಾನವ ಹಕ್ಕು, ಸಂವಿಧಾನಾತ್ಮಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದಿತು.
ಅಂತೆಯೇ ಎಲ್ಲಾ 12 ಅರ್ಜಿಗಳನ್ನು ಪುರಸ್ಕರಿಸಿದ ಅದು, ಭವಿಷ್ಯದಲ್ಲಿ ದಂಪತಿಗಳಿಗೆ ಬೆದರಿಕೆ ಎದುರಾದರೆ ಪೊಲೀಸರು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ವಿವರವಾದ ನಿರ್ದೇಶನಗಳನ್ನು ನೀಡಿತು.