ಅನುಮೋದಿತ ಹಾಗೂ ನಿಯಂತ್ರಿತ ಕ್ಲಿನಿಕಲ್ ಪ್ರಯೋಗ ಹೊರತುಪಡಿಸಿ, ಆಟಿಸಂಗೆ (ಸ್ವಲೀನತೆ- ನರಗಳ ಬೆಳವಣಿಗೆ ಕುಂಠಿತಗೊಳಿಸುವ ವೈಕಲ್ಯ ) ಸ್ಟೆಮ್ ಸೆಲ್ ಚಿಕಿತ್ಸೆಯನ್ನು ನೀಡುವುದು ನೈತಿಕತೆಗೆ ವಿರುದ್ಧವಾಗಿದ್ದು ಅದು ವೈದ್ಯಕೀಯ ದುರಾಚಾರಕ್ಕೆ ಸಮ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಸೂಕ್ತ ವೈಜ್ಞಾನಿಕ ಬೆಂಬಲವಿಲ್ಲದೆ ಮತ್ತು ಪರಿಣಾಮಕಾರಿ ಪ್ರಾಯೋಗಿಕ ಸಾಕ್ಷ್ಯಗಳ ಕೊರತೆ ಇರುವುದರಿಂದ ಈ ರೀತಿಯ ಚಿಕಿತ್ಸೆ ಮಾನ್ಯವಾಗಿಲ್ಲ ಮತ್ತು ಸೂಕ್ತ ವೈದ್ಯಕೀಯ ಪದ್ದತಿಯಾಗಿ ಗುರುತಿಸಿಕೊಂಡಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿತು.
“ಆದ್ದರಿಂದ, ಅನುಮೋದಿತ ಕ್ಲಿನಿಕಲ್ ಪ್ರಯೋಗದ ಹೊರತಾಗಿ ರೋಗಿಗಳಿಗೆ ಸ್ಟೆಮ್ ಸೆಲ್ ಬಳಕೆಯ ಪ್ರತಿಯೊಂದು ಪ್ರಕರಣವೂ ನೈತಿಕತೆಯ ವಿರುದ್ಧವಾಗಿದ್ದು, ಅದನ್ನು ವೈದ್ಯಕೀಯ ದುರುಪಯೋಗ ಎಂದು ಪರಿಗಣಿಸಬೇಕು,” ಎಂಬುದಾಗಿ ನ್ಯಾಯಾಲಯ ಹೇಳಿದೆ.
ವಿಜ್ಞಾನವನ್ನು ಮುನ್ನಡೆಸುವ ಸಲುವಾಗಿ ಅನುಮೋದಿತ ಹಾಗೂ ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳ ಸಂದರ್ಭದಲ್ಲಷ್ಟೇ ಸ್ಟೆಮ್ ಸೆಲ್ ಚಿಕಿತ್ಸೆಗೆ ಅನುಮತಿ ಇರಲಿದೆ ಎಂದು ಅದು ತಿಳಿಸಿದೆ.
ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯಿದೆ 1940ರ ಅಡಿಯಲ್ಲಿ ಸ್ಟೆಮ್ ಸೆಲ್‌ಗಳನ್ನು “ಔಷಧಿ”ಗಳೆಂದು ವರ್ಗೀಕರಿಸಿದ ಮಾತ್ರಕ್ಕೆ ಅವುಗಳ ಸ್ವಲೀನತೆಯ ಕ್ಲಿನಿಕಲ್ ಸೇವೆಯಾಗಿ ಬಳಸಲು ಅನುಮತಿ ಸಿಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೀಗಾಗಿ, ಇಂತಹ ಚಿಕಿತ್ಸೆಯನ್ನು ಸಾಮಾನ್ಯ ಕ್ಲಿನಿಕಲ್ ಸೇವೆಯಾಗಿ ನೀಡುವ ವೈದ್ಯರು, ರೋಗಿಗಳಿಗೆ ನೀಡಬೇಕಾದ ಯುಕ್ತವಾದ ಆರೈಕೆಯ ಮಾನದಂಡ ಪಾಲಿಸಲು ವಿಫಲರಾಗುತ್ತಾರೆ ಎಂದು ಪೀಠ ಹೇಳಿದೆ.
ಪ್ರತಿಯೊಬ್ಬ ವೈದ್ಯರೂ ತಮ್ಮ ಕ್ಷೇತ್ರದಲ್ಲಿ ವಿವೇಚನಾಯುಕ್ತ ವೈದ್ಯರಿಂದ ನಿರೀಕ್ಷಿಸಲಾಗುವ ಯುಕ್ತವಾದ ಆರೈಕೆ, ಕೌಶಲ್ಯ ಮತ್ತು ಜ್ಞಾನವನ್ನು ಪಾಲಿಸುವ ಕರ್ತವ್ಯ ನಿಭಾಯಿಸಬೇಕು ಎಂದು ಪೀಠ ಹೇಳಿದೆ. ವಿಶ್ವಾಸಾರ್ಹ ವೈಜ್ಞಾನಿಕ ತಳಹದಿ ಇಲ್ಲದ ಅಥವಾ ಪ್ರಾಮಾಣಿಕ ವೈದ್ಯಕೀಯ ಸಂಸ್ಥೆಗಳು ಸ್ಪಷ್ಟವಾಗಿ ಶಿಫಾರಸು ಮಾಡದ ಚಿಕಿತ್ಸೆಯನ್ನು ನೀಡಿದರೆ, ಅದು ಈ ಮಾನದಂಡದ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನಿಯಂತ್ರಣ ಕಾನೂನುಗಳ ಪರಿಶೀಲನೆ ನಡೆಸಿದ ಅದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನೈತಿಕತೆ ಮತ್ತು ವೈದ್ಯಕೀಯ ನೋಂದಣಿ ಮಂಡಳಿಯು (ಇಎಂಆರ್‌ಬಿ) 6 ಡಿಸೆಂಬರ್ 2022ರ ಶಿಫಾರಸುಗಳು, ಸ್ಟೆಮ್ ಸೆಲ್ ಸಂಶೋಧನೆಗೆ ಸಂಬಂಧಿಸಿದ ರಾಷ್ಟ್ರೀಯ ಮಾರ್ಗಸೂಚಿಗಳು–2017, ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ರೂಪಿಸಿದ ರಾಷ್ಟ್ರೀಯ ನೈತಿಕ ಮಾರ್ಗಸೂಚಿಗಳನ್ನು ಪೀಠ ಉಲ್ಲೇಖಿಸಿದೆ. ಈ ಎಲ್ಲಾ ದಾಖಲೆಗಳೂ ಎಎಸ್‌ಡಿ ಚಿಕಿತ್ಸೆಗೆ ಸ್ಟೆಮ್ ಸೆಲ್ ಬಳಕೆಯನ್ನು ಸಾಮಾನ್ಯ ಕ್ಲಿನಿಕಲ್ ಚಿಕಿತ್ಸೆಯಾಗಿ ಶಿಫಾರಸು ಮಾಡಿಲ್ಲ ಎಂದು ನ್ಯಾಯಾಲಯ ಹೇಳಿದೆ.