ಸುದ್ದಿಗಳು

ಸೂಕ್ತ ಮಾರ್ಪಾಡಿನೊಂದಿಗೆ 'ಬಿಂದಾಸ್ ಬೋಲ್' ನ ಉಳಿದ ಕಂತುಗಳನ್ನು ಪ್ರಸಾರ ಮಾಡಲು ಸುದರ್ಶನ್ ಟಿವಿಗೆ ಕೇಂದ್ರದ ಅನುಮತಿ

“ವಾಹಿನಿ ಕಾರ್ಯಕ್ರಮ ಸಂಹಿತೆಯನ್ನು ಉಲ್ಲಂಘಿಸಿರುವುದು ತಿಳಿದುಬಂದಿದೆ" ಎಂದು ಸಚಿವಾಲಯ ಅಭಿಪ್ರಾಯಪಟ್ಟಿದ್ದು ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಿರಲು ಜಾಗರೂಕತೆಯಿಂದಿರಲು ಸೂಚಿಸಿದೆ.

Bar & Bench

ಸುದರ್ಶನ್‌ ನ್ಯೂಸ್‌ ವಾಹಿನಿಯ ವಿವಾದಾತ್ಮಕ ಕಾರ್ಯಕ್ರಮ ಸರಣಿಯ ಬಗ್ಗೆ ಎಚ್ಚರಿಕೆ ನೀಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಕ್ತ ಮಾರ್ಪಾಡು ಮತ್ತು ಪರಿಷ್ಕರಣೆಯೊಂದಿಗೆ "ಬಿಂದಾಸ್ ಬೋಲ್" ನ ಉಳಿದ ಕಂತುಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿದೆ.

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಬಿಂದಾಸ್‌ ಬೋಲ್‌ ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಜಿಹಾದ್‌ ಎಂಬ ವಿವಾದಾತ್ಮಕ ಕಾರ್ಯಕ್ರಮ ಪ್ರಸಾರ ಮಾಡಿತ್ತು ಎಂಬ ಆಕ್ಷೇಪಣೆ ಹಿನ್ನೆಲೆಯಲ್ಲಿ ಸಚಿವಾಲಯ ಈ ಆದೇಶ ಹೊರಡಿಸಿದ್ದು ಕಾರ್ಯಕ್ರಮ ಸದಭಿರುಚಿಯಿಂದ ಕೂಡಿರಲಿಲ್ಲ ಮತ್ತು ಕೋಮು ಭಾವನೆ ಕೆರಳಿಸುವ ಸಾಧ್ಯತೆ ಇತ್ತು” ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

ನ 4 ರಂದು ಜಾರಿಯಾದ ಮತ್ತು ಬುಧವಾರ ಸುಪ್ರೀಂಕೋರ್ಟ್‌ ಎದುರು ಸಲ್ಲಿಕೆಯಾದ ಆದೇಶದಲ್ಲಿ ಸಚಿವಾಲಯ “ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕಾದರೂ ಪ್ರಸಾರವಾದ ಕಾರ್ಯಕ್ರಮದ ತಿರುಳು ಮತ್ತು ಅದರ ಧ್ವನಿಯಿಂದ ಅದು ಕಾರ್ಯಕ್ರಮ ಸಂಹಿತೆಯನ್ನು ಉಲ್ಲಂಘಿಸಿರುವುದು ತಿಳಿದುಬಂದಿದೆ. ಕಾರ್ಯಕ್ರಮಗಳು ಉತ್ತಮ ಅಭಿರುಚಿಯಿಂದ ಕೂಡಿರಲಿಲ್ಲ ಮತ್ತು ಆಕ್ರಮಣಕಾರಿಯಾಗಿದ್ದು ಕೋಮುಭಾವನೆ ಪ್ರಚೋದಿಸುವಂತಿದ್ದವು” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಎಲ್ಲಾ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಪರಿಶೀಲಿಸಿದ ನಂತರ ಮತ್ತು ಪ್ರಸಾರಕರ ಮೂಲಭೂತ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು, "ಭವಿಷ್ಯದಲ್ಲಿ ಜಾಗರೂಕತೆಯಿಂದಿರಬೇಕು" ಎಂದು ವಾಹಿನಿಗೆ ಎಚ್ಚರಿಕೆ ನೀಡಲು ತೀರ್ಮಾನಿಸಿದ್ದಾಗಿ ಪತ್ರದಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮ ಸಂಹಿತೆ ಉಲ್ಲಂಘನೆಯಾಗದಂತೆ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ನಿಗಾ ಇಡಬೇಕು ಎಂದು ಸೂಚಿಸಿ ಅಗತ್ಯ ಮಾರ್ಪಾಡುಗಳೊಂದಿಗೆ ಕಾರ್ಯಕ್ರಮ ಪ್ರಸಾರ ಮಾಡಲು ಸಚಿವಾಲಯ ಅನುಮತಿ ನೀಡಿದೆ.

ಕಾರ್ಯಕ್ರಮದ ಬಗ್ಗೆ ವಾಹಿನಿ ಪ್ರಸಾರ ಮಾಡಿದ್ದ ಪ್ರೋಮೊ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾದ ಈ ಪ್ರೋಮೋದಲ್ಲಿ, ಸುದರ್ಶನ್ ನ್ಯೂಸ್‌ನ ನಿರೂಪಕ ಮತ್ತು ಪ್ರಧಾನ ಸಂಪಾದಕ ಸುರೇಶ್ ಚವ್ಹಾಣ್ಕೆ ಅವರು ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳ ಆಗಿದ್ದನ್ನು ಪ್ರಶ್ನಿಸಿದ್ದರು.