ನೈತಿಕತೆ ಮತ್ತು ಸಭ್ಯತೆಯ ಮಾನದಂಡಗಳನ್ನು ಮೀರದಂತೆ ನೋಡಿಕೊಳ್ಳುವುದಾದರೆ ಯೂಟ್ಯೂಬರ್ ರಣವೀರ್ ಅಲಾಹಾಬಾದಿಯಾ (ಬೀರ್‌ಬೈಸೆಪ್ಸ್ ಎಂದು ಗುರುತಿಸಲ್ಪಡುವಾತ) ತಮ್ಮ ಆನ್‌ಲೈನ್ ಕಾರ್ಯಕ್ರಮ ದಿ ರಣವೀರ್ ಶೋ ಪುನರಾರಂಭಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಅಲಾಹಾಬಾದಿಯಾ ಕಾರ್ಯಕ್ರಮದ ವೇಳೆ ನೀಡಿದ ಅಶ್ಲೀಲ ಹೇಳಿಕೆಯಿಂದಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಆತ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠವು ಈ ಆದೇಶ ನೀಡಿತು.
ಈ ಹಿಂದೆ, ಸದ್ಯಕ್ಕೆ ಯಾವುದೇ ಕಾರ್ಯಕ್ರಮ ನೀಡುವಂತಿಲ್ಲ ಎಂಬುದು ಸೇರಿದಂತೆ ವಿವಿಧ ಷರತ್ತುಗಳನ್ನು ವಿಧಿಸಿದ್ದ ನ್ಯಾಯಾಲಯ ಆತನಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು.
ಇಂದು, ಅಲಹಾಬಾದಿಯಾ ಪರ ವಾದ ಮಂಡಿಸಿದ ವಕೀಲ ಅಭಿನವ್ ಚಂದ್ರಚೂಡ್ ಅವರು ಈ ರೀತಿ ನಿರ್ಬಂಧ ವಿಧಿಸಿದರೆ ಅಲಾಹಾಬಾದಿಯಾ ಹಾಗೂ ಅವರ 280ಕ್ಕೂ ಹೆಚ್ಚು ಉದ್ಯೋಗಿಗಳ ಜೀವನೋಪಾಯಕ್ಕೆ ಮಾರಕ ಎಂದರು.
ಇದನ್ನು ಪರಿಗಣಿಸಿದ ನ್ಯಾಯಾಲಯ ನೈತಿಕತೆ ಮತ್ತು ಸಭ್ಯತೆಯ ಮಾನದಂಡಗಳನ್ನು ಮೀರದಂತೆ ನೋಡಿಕೊಳ್ಳುವುದಾದರೆ ಅಲಾಹಾಬಾದಿಯಾ ಅವರು ಕಾರ್ಯಕ್ರಮ ಪುನರಾರಂಭಿಸಬಹುದು ಎಂದಿತು.
ಈ ರೀತಿಯ ವಸ್ತುವಿಷಯ ಪ್ರಸಾರವಾಗದಂತೆ ತಡೆಯಲು ನಿಯಂತ್ರಣ ಜಾರಿಗೆ ತರುವುದರ ಸಾಧಕ ಬಾಧಕಗಳನ್ನು ಪರಿಶೀಲಿಸುವ ಸಲುವಾಗಿ ಪ್ರಸ್ತುತ ಪ್ರಕರಣದ ವಿಚಾರಣೆ ವಿಸ್ತರಿಸುವ ಸುಳಿವನ್ನು ನ್ಯಾಯಾಲಯ ನೀಡಿದೆ.
ಸಂವಿಧಾನ ಖಾತರಿಪಡಿಸಿದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸದಂತೆ ನಿಯಂತ್ರಣ ಕ್ರಮ ಕೈಗೊಳ್ಳುಲು ಸಲಹೆಗಳನ್ನು ನೀಡುವಂತೆ ನ್ಯಾಯಾಲಯ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರನ್ನು ಕೇಳಿತು.
ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ರಣವೀರ್ ಪಾಲ್ಗೊಂಡಿದ್ದ ವಿವಾದಾತ್ಮಕ ಕಾಯಕ್ರಮವನ್ನು ನವೆಂಬರ್ 14, 2024ರಂದು ಮುಂಬೈನ ಖರ್ ಬಳಿಯ ಹ್ಯಾಬಿಟಾಟ್ ಹೊಟೆಲ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಅದು ಇತ್ತೀಚೆಗೆ ಪ್ರಸಾರವಾಗಿತ್ತು. ರಣವೀರ್ ಅಲಾಹಾಬಾದಿಯಾ, ಹಾಸ್ಯನಟ ಸಮಯ್ ರೈನಾ, ಯೂಟ್ಯೂಬರ್ ಆಶಿಶ್ ಚಂಚಲಾನಿ ಮತ್ತು ಇತರರು ತೀರ್ಪುಗಾರರಾಗಿ ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ಕಾರ್ಯಕ್ರಮ ವ್ಯಾಪಕ ಅಶ್ಲೀಲ ಭಾಷೆಯಿಂದ ಕೂಡಿತ್ತು.