ಬೆಂಗಳೂರು ವಕೀಲರ ಸಂಘದ (ಎಎಬಿ) ಆಡಳಿತ ಮಂಡಳಿಯ ಖಜಾಂಚಿ ಹುದ್ದೆಯು ಮಹಿಳಾ ವಕೀಲರಿಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ಸೃಜಿಸಿಸಲಾಗಿದ್ದು, ಆಡಳಿತ ಮಂಡಳಿ ಸದಸ್ಯ ಬಲವನ್ನು 29ರಿಂದ 36ಕ್ಕೆ ಏರಿಕೆ ಮಾಡಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಶೇ.30ರಷ್ಟು ಮೀಸಲಾತಿ ಜಾರಿಗೊಳಿಸಲು ಆದೇಶಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ವಜಾ ಮಾಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯ ಭಾಗವಾಗಿ ಸಲ್ಲಿಕೆ ಮಾಡಲಾಗಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೇಶ್ವರ್ ಸಿಂಗ್ ಅವರ ವಿಭಾಗೀಯ ಪೀಠವು ನಡೆಸಿತು.
ಎಎಬಿ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗ ಖಜಾಂಚಿ ಹುದ್ದೆಯನ್ನು ಮಹಿಳಾ ವಕೀಲರಿಗೆ ಮೀಸಲಿರಿಸಿ ಜನವರಿ 24ರಂದು ಆದೇಶ ಮಾಡಲಾಗಿದ್ದು, ಎಎಬಿಗೆ ಹೆಚ್ಚುವರಿ ಹುದ್ದೆಗಳನ್ನು ಸೃಜಿಸಲು ಅಗತ್ಯವಾದ ಸಮಯ ಇಲ್ಲದಿರುವ ಹಿನ್ನೆಲೆಯಲ್ಲಿ ಸಂವಿಧಾನದ 142ನೇ ವಿಧಿಯಡಿ ದೊರೆತಿರುವ ಅಧಿಕಾರ ಚಲಾಯಿಸಿ ಜನವರಿ 24ರ ಆದೇಶದ ಮುಂದುವರಿದ ಭಾಗವಾಗಿ ಕೆಳಕಳಂಡ ಹೆಚ್ಚುವರಿ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಹಾಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಎಎಬಿಯಲ್ಲಿ ಉಪಾಧ್ಯಕ್ಷ ಸ್ಥಾನ ಸೃಷ್ಟಿಸಬಹುದಾಗಿದೆ.
ಖಜಾಂಚಿ ಹುದ್ದೆಯು ಮಹಿಳಾ ವಕೀಲರಿಗೆ ಮೀಸಲಾಗಿರುವುದರಿಂದ ಆ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದ ವಕೀಲರು ಉಪಾಧ್ಯಕ್ಷ ಹುದ್ದೆ ಅಥವಾ ಬೇರಾವುದೇ (ಖಜಾಂಚಿ ಹುದ್ದೆ ಹೊರತುಪಡಿಸಿ) ಹುದ್ದೆಗೆ ಸ್ಪರ್ಧಿಸಲು ಒಂದು ಅವಕಾಶ ಕಲ್ಪಿಸಲಾಗಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಮುಂದುವರಿಯಲು ಬಯಸದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಬಹುದಾಗಿದೆ.
ಮಹಿಳಾ ವಕೀಲರಿಗೆ ಶೇ.30ರಷ್ಟು ಮೀಸಲಾತಿ ನಿಗದಿಗೊಳಿಸಿರುವ ಹಿನ್ನಲೆಯಲ್ಲಿ ಚುನಾಯಿತ ಸದಸ್ಯರ (ಕೌನ್ಸಿಲರ್) ಸಂಖ್ಯೆಯನ್ನು 29ರಿಂದ 38ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಸಿಟಿ ಸಿವಿಲ್ ಕೋರ್ಟ್ ಸದಸ್ಯರ ಸಂಖ್ಯೆಯು 12ರಿಂದ 15ಕ್ಕೆ (12+3=15), ಮೆಯೊ ಹಾಲ್ (5+2=7), ಮ್ಯಾಜಿಸ್ಟ್ರೇಟ್ ಕೋರ್ಟ್ (5+2=7) ಹಾಗೂ ಹೈಕೋರ್ಟ್‌ನಿಂದ (7+2=9) ಆಯ್ಕೆಯಾಗುವ ಸದಸ್ಯರ ಸಂಖ್ಯೆಯಲ್ಲಿ ತಲಾ ಇಬ್ಬರು ಹೆಚ್ಚುವರಿಯಾಗಿ ಆಯ್ಕೆಯಾಗಲಿದ್ದಾರೆ.
ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿಯು ಎಎಬಿ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರ ಸಂಖ್ಯೆಯಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ನಡೆಸಬೇಕು. ಮೂರು ವಾರಗಳಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯಬೇಕು.
ಹೊಸದಾಗಿ ಸೃಜಿಸಲಾಗಿರುವ ಉಪಾಧ್ಯಕ್ಷ ಹುದ್ದೆ, ಖಜಾಂಚಿ ಮತ್ತು ಹೊಸದಾಗಿ ಸೇರ್ಪಡೆ ಮಾಡಲಾಗಿರುವ ಆಡಳಿತ ಮಂಡಳಿ ಸದಸ್ಯರ ಹುದ್ದೆಗಳಿಗೆ ಒಂದು ವಾರದಲ್ಲಿ ನಾಮಪತ್ರ ಆಹ್ವಾನಿಸಬೇಕು.
ಎಎಬಿಯ ವಿವಿಧ ಹುದ್ದೆಗಳ ಚುನಾವಣೆಗೆ ಎಲ್ಲೆಲ್ಲಿ ನಿಯಂತ್ರಣವಿದೆ ಅಲ್ಲಿ ಕನಿಷ್ಠ ಎಂಟು ವರ್ಷ ಅಥವಾ ಚುನಾವಣೆಗೆ ಸ್ಪರ್ಧಿಸಲು ವಕೀಲರ ಸಂಘ ನಿಗದಿಪಡಿಸಿರುವ ಅನುಭವ ಷರತ್ತುಗಳನ್ನು ವಿಧಿಸಬಹುದಾಗಿದೆ. ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜನವರಿ 24ರ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ.
ಮಧ್ಯಂತರ ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ಖಜಾಂಚಿ ಹುದ್ದೆಯನ್ನು ಮಹಿಳಾ ವಕೀಲರಿಗೆ ಮೀಸಲಿರಿಸಿರುವ ನಿಟ್ಟಿನಲ್ಲಿ ಈಗಾಗಲೇ ಖಜಾಂಚಿ ಹುದ್ದೆಗೆ ನಾಮಪತ್ರ ಸಲ್ಲಿಸಿರುವವರಿಗೆ ಅನುಕೂಲ ಮಾಡಿಕೊಡಲು ಎಎಬಿಯು ಹೆಚ್ಚುವರಿ ಹುದ್ದೆ ಸೃಷ್ಟಿಸಲು ಮುಂದಾಗಿದೆ. ಖಜಾಂಚಿ ಹುದ್ದೆಗೆ ಸ್ಪರ್ಧಿಸಿರುವವರು ಹೆಚ್ಚುವರಿ ಹುದ್ದೆ ಅಥವಾ ಬೇರೆ ಹುದ್ದೆಗಳಿಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ” ಎಂದು ವಾದಿಸಿದ್ದರು.
ಎಎಬಿ ನಿಕಟಪೂರ್ವ ಅಧ್ಯಕ್ಷ ಹಾಗೂ ಹಾಲಿ ಅಧ್ಯಕ್ಷ ಆಕಾಂಕ್ಷಿ ವಿವೇಕ್ ಸುಬ್ಬಾರೆಡ್ಡಿ, ಸದಸ್ಯ ಆಕಾಂಕ್ಷಿಗಳಾದ ಸಿ ಎಸ್ ಗಿರೀಶ್ ಕುಮಾರ್, ಟಿ ಸಿ ಸಂತೋಷ್ ಮತ್ತು ಮುನಿಯಪ್ಪ ಗೌಡ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಖಜಾಂಚಿ ಹುದ್ದೆಗೆ ಹಲವರು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಪೀಠದ ಗಮನಕ್ಕೆ ತರಲಾಯಿತು.
ಸುಪ್ರೀಂ ಕೋರ್ಟ್ ಜನವರಿ 24ರಂದು ಮಾಡಿದ್ದ ಆದೇಶ ಹಿನ್ನೆಲೆಯಲ್ಲಿ ಉನ್ನತಾಧಿಕಾರಿ ಸಮಿತಿ ಮತ್ತು ಮುಖ್ಯ ಚುನಾವಣಾಧಿಕಾರಿಯು ಎಎಬಿ ಚುನಾವಣೆಯನ್ನು ಮುಂದೂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.