ಸುದ್ದಿಗಳು

ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ ಸುಪ್ರೀಂ ಕೋರ್ಟ್: ಮೌನಾಚರಣೆ

ಘಟನೆ "ಮತಿಹೀನ ಹಿಂಸಾಚಾರದ ಪೈಶಾಚಿಕ ಕೃತ್ಯ" ಎಂದು ಪೂರ್ಣ ನ್ಯಾಯಾಲಯ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯ ಹೇಳಿದೆ.

Bar & Bench

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕನಿಷ್ಠ 26 ಪ್ರವಾಸಿಗರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಖಂಡಿಸಿದೆ.

ಘಟನೆ "ಮತಿಹೀನ ಹಿಂಸಾಚಾರದ ಪೈಶಾಚಿಕ ಕೃತ್ಯ. ಅದು ಎಲ್ಲರ ಆತ್ಮಸಾಕ್ಷಿಯನ್ನು ಅಲುಗಾಡಿಸಿದ್ದು ಭಯೋತ್ಪಾದನೆ ಹೊಮ್ಮಿಸುವ ಕ್ರೌರ್ಯ ಮತ್ತು ಅಮಾನವೀಯತೆಯ ನೆನಪೋಲೆಯಾಗಿದೆ" ಎಂದು ಪೂರ್ಣ ನ್ಯಾಯಾಲಯ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯ ಹೇಳಿದೆ.

“ಸುಪ್ರೀಂ ಕೋರ್ಟ್ ಕ್ರೂರವಾಗಿ ಮತ್ತು ಅಕಾಲಿಕವಾಗಿ ಬಲಿಯಾದ ಮುಗ್ಧ ಜೀವಗಳಿಗೆ ಗೌರವ ಸಲ್ಲಿಸುತ್ತದೆ. ದುಃಖಿತ ಕುಟುಂಬಗಳಿಗೆ ತನ್ನ ಹೃತ್ಪೂರ್ವಕ ಸಂತಾಪ ವ್ಯಕ್ತಪಡಿಸುತ್ತದೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ. ಅವರ್ಣನೀಯ ದುಃಖದ ಈ ಹೊತ್ತಿನಲ್ಲಿ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಟ್ಟಿಗೆ ದೇಶ ನಿಂತಿದೆ” ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.

ದೇಶದ ಕಿರೀಟ ಅರ್ಥಾತ್ ಕಾಶ್ಮೀರದ ನೈಸರ್ಗಿಕ ಸೌಂದರ್ಯ ಆನಂದಿಸುತ್ತಿದ್ದ ಪ್ರವಾಸಿಗರ ಮೇಲಿನ ದಾಳಿ ನಿಸ್ಸಂದೇಹವಾಗಿ ಮಾನವೀಯತೆಯ ಮೌಲ್ಯ ಮತ್ತು ಜೀವ ಪಾವಿತ್ರ್ಯದ ತೇಜೋವಧೆಯಾಗಿದೆ. ಇದನ್ನು ನ್ಯಾಯಾಲಯ ಬಲವಾಗಿ ಖಂಡಿಸುತ್ತದೆ ಎಂದು ಅದು ಹೇಳಿದೆ.

ಸಂತ್ರಸ್ತರ ಸ್ಮರಣಾರ್ಥ ಮತ್ತು ಅವರ ದುಃಖತಪ್ತ  ಕುಟುಂಬಗಳ ಜೊತೆಗಿದ್ದೇವೆ ಎಂಬ ಭಾವನೆ ವ್ಯಕ್ತಪಡಿಸಿ ನ್ಯಾಯಮೂರ್ತಿಗಳು, ವಕೀಲರು, ಸಿಬ್ಬಂದಿ ಹಾಗೂ ನ್ಯಾಯಾಲಯದಲ್ಲಿ ಹಾಜರಿದ್ದ ವಿವಿಧ ವ್ಯಕ್ತಿಗಳು ಎರಡು ನಿಮಿಷಗಳ ಕಾಲ ಮೌನ ಆಚರಿಸಿದರು.

[ನಿರ್ಣಯದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Pahalgam_Resolution.pdf
Preview